ETV Bharat / state

ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಕಡಿಮೆ: ಸ್ಪೀಕರ್ ಕಾಗೇರಿ ಅಸಮಾಧಾನ

author img

By

Published : Feb 20, 2023, 7:20 PM IST

ಶಾಸಕರು ಸಂಸದೀಯ ವ್ಯವಸ್ಥೆಯನ್ನು ಕಡೆಗಣಿಸದೇ ಸದನಕ್ಕೆ ಹಾಜರಾಗಬೇಕು ಎಂದು ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಿವಿಮಾತು ಹೇಳಿದರು.

Assembly Speaker Vishweshwar Hegde Kageri
ವಿಧಾನಸಭೆಯಲ್ಲಿ ಶಾಸಕರ ಹಾಜರಾತಿ ಕಡಿಮೆ: ಸ್ಪೀಕರ್ ಕಾಗೇರಿ ಅಸಮಾಧಾನ

ಬೆಂಗಳೂರು: "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿನ ಸೋಲು-ಗೆಲುವಿನ ವಿಚಾರದ ಆಲೋಚನೆಯಲ್ಲಿರುವ ಶಾಸಕರು ಸದನಕ್ಕೆ ಬಾರದೇ ಇರುವುದು ತಪ್ಪು" ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಬೆಳಗ್ಗೆ 10.30ಕ್ಕೆ ಸದನ ಕರೆಯಲಾಗಿತ್ತು. ಆದರೆ, ಕೋರಮ್ ಇಲ್ಲದ ಕಾರಣ ನಿಗದಿತ ಅವಧಿಗಿಂತ ವಿಳಂಬವಾಗಿ ಸದನ ಸಮಾವೇಶಗೊಂಡು ಕಾಗೇರಿ ಮಾತನಾಡಿದರು.

ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿದ ಮಾಡಿದ ಭಾಷಣದ ಮೇಲೆ 15 ಸದಸ್ಯರು ಮಾತನಾಡಿದ್ದಾರೆ. ಒಟ್ಟು 13 ಗಂಟೆ 35 ನಿಮಿಷಗಳ ಕಾಲ ಚರ್ಚೆಯಾಗಿದೆ. ಜೆಡಿಎಸ್‍ನ 7 ಸದಸ್ಯರು, ಆಡಳಿತ ಪಕ್ಷದ ಮೂವರು ಹಾಗೂ ಪ್ರತಿಪಕ್ಷ ಕಾಂಗ್ರೆಸ್‍ನ ಐವರು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ ಎಂದು ವಿವರ ನೀಡಿದರು.

ನಂತರ ಸದಸ್ಯರ ಹಾಜರಾತಿ ಕೊರತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕಾಗೇರಿ, ಇಂದು ಬೆಳಗ್ಗೆ 10.30 ಗಂಟೆಯಿಂದಲೂ ಕೋರಂ ಗಂಟೆ ಆರಂಭವಾಗಿತ್ತು. ಕೋರಂ ಆಗದ ಕಾರಣ ಕಲಾಪ 11.20 ಕ್ಕೆ ಆರಂಭವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವಣೆಯ ದೃಷ್ಟಿಯಿಂದ ಸಂಸದೀಯ ವ್ಯವಸ್ಥೆಯನ್ನು ಕಡೆಗಣಿಸಬಾರದು. ಎಲ್ಲರಿಗೂ ಚುನಾವಣೆಯಲ್ಲಿ ಒಳ್ಳೆಯದಾಗಲಿ. ಈ ವ್ಯವಸ್ಥೆಯ ಬಗ್ಗೆ ಜನರಿಗೆ ಹೆಚ್ಚು ವಿಶ್ವಾಸ ಮೂಡುವಂತೆ, ವ್ಯವಸ್ಥೆಗೆ ಹೆಚ್ಚು ಶಕ್ತಿ ತುಂಬುವ ರೀತಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸದನಕ್ಕೆ ಆಗಮಿಸಿ ಕಲಾಪದಲ್ಲಿ ಭಾಗಿಯಾಗಬೇಕು. ಇದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಆರಂಭಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಪ್ರತಿಪಕ್ಷದ ನಾಯಕರು ಇಲ್ಲದಿರುವುದನ್ನು ಗಮನಿಸಿ ಪ್ರತಿಪಕ್ಷದ ಉಪನಾಯಕ ಯು.ಟಿ. ಖಾದರ್ ಇದ್ದಾರೆ, ಸಾಕು ಎಂದರು. ಆಗ ಖಾದರ್, ಪ್ರತಿಪಕ್ಷದ ಕಡೆ ಸದಸ್ಯರ ಹಾಜರಾತಿ ಕಡಿಮೆ ಇರುವುದೇನೋ ಸರಿ. ಆಡಳಿತ ಪಕ್ಷದ ಕಡೆಯೂ ಸದಸ್ಯರ ಹಾಜರಾತಿ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು. ಮುಖ್ಯಮಂತ್ರಿ ಮಾತು ಮುಂದುವರೆಸಿ ಖಾದರ್, ನಿಜವಾದ ನಾಯಕರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಬಂಡೆ ಥರ ಸದನದಲ್ಲಿರುತ್ತಾರೆ ಎಂದು ತಿಳಿಸಿ ಉತ್ತರ ಮುಂದುವರಿಸಿದರು.

ಇದನ್ನೂ ಓದಿ:ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್: ಸಿದ್ದರಾಮಯ್ಯ

ನಂತರ ಮಾತನಾಡಿದ ಅವರು, ಕೋವಿಡ್, ಪ್ರವಾಹದಂತಹ ಸವಾಲುಗಳ ನಡುವೆಯೂ ಕರ್ನಾಟಕ ಸರ್ಕಾರ ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ 15 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ತೆರಿಗೆ ಸಂಗ್ರಹಿಸಿದ್ದು ಆರ್ಥಿಕ ಪ್ರಗತಿ ಸುಧಾರಿಸಿದೆ ಎಂದು ಹೇಳಿದರು. ಇಂದು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ತೆರಿಗೆ ದಕ್ಷತೆ, ತೆರಿಗೆ ವಂಚಕರನ್ನು ಪತ್ತೆ ಮಾಡುವುದರ ಜೊತೆಗೆ ಎಲ್ಲ ಬಾಬ್ತುಗಳಿಂದ ಬರಬೇಕಾದ ತೆರಿಗೆ ಸಂಗ್ರಹಕ್ಕೆ ವಿಶೇಷ ಗಮನ ಹರಿಸಿದ್ದರಿಂದ ರಾಜಸ್ವ ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ ಎಂದರು.

ರಾಜ್ಯಪಾಲರ ಭಾಷಣದಲ್ಲಿ ತಿಳಿಸಿರುವ ಸಂಗತಿಗಳನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ರಾಜ್ಯಪಾಲರು ಸತ್ಯ ಮತ್ತು ವಾಸ್ತವಾಂಶದ ಆಧಾರದ ಮೇಲೆ ಭಾಷಣ ಮಾಡಿದ್ದಾರೆ. ರಾಜಕಾರಣ ಇದರಲ್ಲಿ ಇಲ್ಲ ಎಂದು ಪ್ರತಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.