ETV Bharat / state

2nd PUC ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಒಮ್ಮೆ ಯೋಚಿಸಿ: ಈ ಬಾರಿ 1 ಮಾರ್ಕ್ಸ್ ವ್ಯತ್ಯಾಸವಾದರೂ ಅಂಕಪಟ್ಟಿಗೆ ಸೇರ್ಪಡೆ

author img

By

Published : Apr 21, 2023, 1:12 PM IST

ಈವರೆಗೆ ಮರುಮೌಲ್ಯಮಾಪನ ಮಾಡಿದಾಗ ಐದು ಅಂಕಕ್ಕಿಂತ ಹೆಚ್ಚು ವ್ಯತ್ಯಾಸ ಆದಲ್ಲಿ ಮಾತ್ರ ಅಂಕಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ, ಈ ವರ್ಷ ಒಂದು ಅಂಕದಲ್ಲಿ ವ್ಯತ್ಯಾಸ ಆದರೂ ಅಂಕ ಪಟ್ಟಿಗೆ ಸೇರಿಸಲಾಗುವುದು ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರನ್ ತಿಳಿಸಿದ್ದಾರೆ.

2nd PUC
ಪರೀಕ್ಷಾ ಮಂಡಳಿ

ಬೆಂಗಳೂರು: ಈ ಬಾರಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯೋಚಿಸಬೇಕಿದೆ. ಯಾಕೆಂದರೆ, ಈವರೆಗೂ ಐದು ಅಂಕಕ್ಕಿಂತ ಹೆಚ್ಚು ವ್ಯತ್ಯಾಸವಿದ್ದರೆ ಮಾತ್ರ ಅಂಕಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ, ಈಗ ಒಂದು ಅಂಕ ಹೆಚ್ಚು ಕಡಿಮೆ ಆದರೂ ಅದನ್ನು ಅಂಕಪಟ್ಟಿಗೆ ಸೇರಿಸಲಾಗುತ್ತದೆ.

puc result
ದ್ವಿತೀಯ ಪಿಯುಸಿ ಫಲಿತಾಂಶ

ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಂಡಳಿ ಅಧ್ಯಕ್ಷ ರಾಮಚಂದ್ರನ್, "ಇಂದಿನಿಂದಲೇ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದ್ದು, ಏಪ್ರಿಲ್ 27 ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿದೆ. ಏಪ್ರಿಲ್ 26 ರಿಂದ ಮೇ 2 ರವರೆಗೆ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಡೌನ್ ಮಾಡಿಕೊಳ್ಳಬಹುದಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಶುಲ್ಕ ನಿಗದಿಪಡಿಸಿದ್ದು, ಮರು ಮೌಲ್ಯಮಾಪನ ಹಾಗೂ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು ಮೇ 3 ರಿಂದ 8 ರವರೆಗೆ ಅವಕಾಶವಿದೆ ಎಂದರು.

ಮರುಮೌಲ್ಯಮಾಪನ ಹಾಗೂ ಮರು ಎಣಿಕೆ ವೇಳೆ ಒಂದು ಅಂಕ ಹೆಚ್ಚಾದರೂ ಅಥವಾ ಕಡಿಮೆಯಾದರೂ ಅದು ಈ ಬಾರಿ ಅಂಕಪಟ್ಟಿಗೆ ಸೇರಲಿದೆ. ಈವರೆಗೂ ಐದು ಅಂಕಕ್ಕಿಂತ ಹೆಚ್ಚು ವ್ಯತ್ಯಾಸ ಆದಲ್ಲಿ ಮಾತ್ರ ಅಂಕಪಟ್ಟಿಗೆ ಸೇರಿಸಲಾಗುತ್ತಿತ್ತು. ಆದರೆ, ಈಗ ಒಂದು ಅಂಕ ವ್ಯತ್ಯಾಸ ಆದರೂ ಅಂಕ ಪಟ್ಟಿಗೆ ಸೇರಿಸಲಾಗುವುದು. ಅಂಕ ಕಡಿಮೆ ಆಯ್ತು ಎಂದು ಹಳೆಯ ಅಂಕ ಕೊಡಿ ಎಂದು ಯಾರೂ ಮತ್ತೆ ಕೇಳುವಂತಿಲ್ಲ ಎಂದು ತಿಳಿಸಿದರು.

ಅನುತ್ತೀರ್ಣರಾದ ಅಭ್ಯರ್ಥಿಗಳು ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರು ಮೌಲ್ಯಮಾಪನ ಫಲಿತಾಂಶಕ್ಕಾಗಿ ಕಾಯಬೇಕಿಲ್ಲ, ಈಗಾಗಲೇ ಶುಲ್ಕ ಪಾವತಿಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇಂದಿನಿಂದ ಏಪ್ರಿಲ್ 26 ರವರೆಗೆ ದಂಡರಹಿತವಾಗಿ ಶುಲ್ಕ ಪಾವತಿ ಮಾಡಬಹುದಾಗಿದ್ದು, ಏಪ್ರಿಲ್ 27 ರಿಂದ ಮೇ 02 ರವರೆಗೆ ದಂಡಸಹಿತ ಶುಲ್ಕ ಪಾವತಿಗೆ ಅವಕಾಶವಿದೆ ಎಂದರು.

ಒಂದು ವಿಷಯದ ಪೂರಕ ಪರೀಕ್ಷೆಗೆ 140 ರೂ. ಮತ್ತು ಎರಡು ವಿಷಯಕ್ಕೆ 270 , ಮೂರು ಅಥವಾ ಹೆಚ್ಚಿನ ವಿಷಯಕ್ಕೆ 400 ರೂ. ಶುಲ್ಕ ನಿಗದಿಪಡಿಸಲಾಗಿದೆ. ಎಸ್​ ಸಿ ಎಸ್​ಟಿ, ಪ್ರವರ್ಗ 1 ಸೇರಿದಂತೆ ಎಲ್ಲ ವಿದ್ಯಾರ್ಥಿಗಳು 50 ರೂ. ಅಂಕಪಟ್ಟಿ ಶುಲ್ಕ ಪಾವತಿಸಬೇಕಿದೆ. ಫಲಿತಾಂಶ ತಿರಸ್ಕರಣಾ ಶುಲ್ಕ ಪ್ರಥಮ ಬಾರಿಗೆ ಒಂದು ವಿಷಯಕ್ಕೆ 175 ರೂ. ಆಗಿದ್ದು, ದ್ವಿತೀಯ ಹಾಗೂ ಅಂತಿಮ ಬಾರಿಗೆ ಒಂದು ವಿಷಯಕ್ಕೆ 350 ರೂ. ಆಗಿದೆ. ಏಪ್ರಿಲ್ ಕಡೆಯ ವಾರದಲ್ಲಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಲಿದೆ ಎಂದರು.

ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಟಾಪರ್ಸ್​!

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ: ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದಲ್ಲಿ 5,41,807 ವಿದ್ಯಾರ್ಥಿಗಳಲ್ಲಿ 4,04,349 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 74.63 ರಷ್ಟು ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ 1,60,860 ವಿದ್ಯಾರ್ಥಿಗಳಲ್ಲಿ 1,19,860 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.74.79 ರಷ್ಟು ಫಲಿತಾಂಶ ಬಂದಿದೆ.

ಟಾಪ್ 5 ಸ್ಥಾನ ಪಡೆದ ಜಿಲ್ಲೆಗಳು:

  • ದಕ್ಷಿಣ ಕನ್ನಡ ಶೇ. 95.33 ಪಡೆದಿದೆ.
  • ಉಡುಪಿ ಶೇ. 95.24
  • ಕೊಡಗು ಶೇ.90.55
  • ಉತ್ತರ ಕನ್ನಡ ಶೇ.89.74
  • ವಿಜಯಪುರ ಶೇ. 84.69

ಕಡೆಯ 5 ಸ್ಥಾನ ಪಡೆದ ಜಿಲ್ಲೆಗಳು:

  • ಯಾದಗಿರಿ ಶೇ. 79.97
  • ರಾಯಚೂರು ಶೇ. 66.98
  • ಗದಗ ಶೇ. 66.91
  • ಕಲಬುರಗಿ ಶೇ. 69.37
  • ಚಿತ್ರದುರ್ಗ ಶೇ. 69.5

ಗ್ರೇಸ್ ಮಾರ್ಕ್ಸ್: ಈ ಬಾರಿ ಶೇ 5ರಷ್ಟು ಅಂಕ ಗ್ರೇಸ್ ರೂಪದಲ್ಲಿ 15 ಸಾವಿರ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಹಾಗೂ ರಸಾಯನಶಾಸ್ತ್ರದಲ್ಲಿ ಪ್ರಶ್ನೆಗಳಲ್ಲಿ ಲೋಪವಿದ್ದ ಹಿನ್ನೆಲೆ 5 ಅಂಕಗಳನ್ನ ನೀಡಲಾಗಿದೆ. ಇದಲ್ಲದೇ, ‌ಇದೇ ಮೊದಲ ಬಾರಿ ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಬಂದರು ಅಥವಾ ಕಡಿಮೆ ಆದರು ಅದನ್ನ ಅಂಕ ಪಟ್ಟಿಯಲ್ಲಿ ಸೇರಿಸುವ ನಿರ್ಧಾರ ಮಾಡಲಾಗಿದೆ.

ಸಚಿವರಿಗೆ ನೀತಿ ಸಂಹಿತೆ ಎಫೆಕ್ಟ್: ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಚಿವರ ಬದಲಾಗಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಿದ್ರು. ಈ ಬಾರಿ ಶೇ 74.67 ಅತ್ಯಧಿಕ ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಈ ಸಲ 12.79 ಫಲಿತಾಂಶ ಹೆಚ್ಚಳವಾಗಿದೆ.

ವಿವರ:

  • ಒಟ್ಟು ಪರೀಕ್ಷೆ ಬರೆದವರು - 7,02,067
  • ಪಾಸ್ ಆದವರು - 5,24,209.
  • ಬಾಲಕರು - 2,41,607
  • ಬಾಲಕಿಯರು - 2,82,602
  • ಒಟ್ಟು ಶೇಕಡಾ ಫಲಿತಾಂಶ - 74.67%( ಕಳೆದ ವರ್ಷ - 61.88%)

ಶೇ.100 ಮತ್ತು ಶೂನ್ಯ ಫಲಿತಾಂಶ:

  • ಶೇಕಡಾ 100 ಫಲಿತಾಂಶ - 317 ಕಾಲೇಜುಗಳು ಪಡೆದುಕೊಂಡಿವೆ.
  • ಶೂನ್ಯ ಸಂಪಾದನೆ - 78 ಕಾಲೇಜುಗಳು ಪಡೆದುಕೊಂಡಿವೆ.

ಕಲಾ ವಿಭಾಗದ ಟಾಪರ್ಸ್:

1. ತಬಸುಮ್ ಶೇಕ್ - 593, NMKRV ಕಾಲೇಜು, ಬೆಂಗಳೂರು

2. ಕುಶಾ ನಾಯಕ್ - 592, ಇಂದೂ ಇನೋವೇಟಿವ್ ಕಾಲೇಜ್, ಬಳ್ಳಾರಿ

3. ದಡ್ಡಿ ಕರಿಬಸಮ್ಮ -592, ಇಂದೂ ಇನೋವೇಟಿವ್ ಕಾಲೇಜ್, ಬಳ್ಳಾರಿ

ವಾಣಿಜ್ಯ ವಿಭಾಗದ ಟಾಪರ್ಸ್:

1. ಅನನ್ಯ ಕೆ.ಎ - 600, ಆಳ್ವಾಸ್ ಕಾಲೇಜು, ದಕ್ಷಿಣ ಕನ್ನಡ.

2. ಅನ್ವಿತಾ ಡಿ.ಎನ್ - 596, ವಿಕಾಸ್ ಪಿಯು ಕಾಲೇಜು, ಶಿವಮೊಗ್ಗ

3. ಛಾಯಾ ರವಿ ಕುಮಾರ್ - 596, ಟ್ರಾಸಂಡ್ ಪಿಯು ಕಾಲೇಜು, ಬೆಂಗಳೂರು

ವಿಜ್ಞಾನ ವಿಭಾಗದ ಟಾಪರ್ಸ್:

1. ಕೌಶಿಕ್ SM - 596, ಗಂಗೋತ್ರಿ ಪಿಯು ಕಾಲೇಜ್.

2. ಸುರಭಿ S - 596, RV ಪಿಯು ಕಾಲೇಜು ಬೆಂಗಳೂರು

3. ಕೆ. ಜೈಶಿಕಾ - 595, RV ಪಿಯು ಕಾಲೇಜು, ಬೆಂಗಳೂರು.

ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ದಕ್ಷಿಣ ಕನ್ನಡ ಫಸ್ಟ್​, ಯಾದಗಿರಿ ಲಾಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.