ETV Bharat / state

ಇಂದು ಸೂರ್ಯಗ್ರಹಣ: ಈ ಸಂದರ್ಭ ಏನು ಮಾಡಬೇಕು? ಏನು ಮಾಡಬಾರದು?

author img

By

Published : Oct 24, 2022, 11:02 PM IST

Updated : Oct 25, 2022, 6:02 AM IST

ಭಾರತದಲ್ಲಿ ಮಂಗಳವಾರ ಸಂಜೆ 4.29ರಿಂದ ಆರಂಭವಾಗುವ ಗ್ರಹಣವು ಸೂರ್ಯಾಸ್ತದೊಂದಿಗೆ ಮುಕ್ತಾಯವಾಗಲಿದೆ. ಗ್ರಹಣಕಾಲದಲ್ಲಿ ಮಾಡಿರುವ ಸಾಧನೆಯ ಫಲವು ಸಾವಿರ ಪಟ್ಟಿನಲ್ಲಿ ಹೆಚ್ಚು ದೊರೆಯುತ್ತದೆ. ಇದಕ್ಕಾಗಿ ಗ್ರಹಣಕಾಲದಲ್ಲಿ ಸಾಧನೆಗೆ ಪ್ರಾಧಾನ್ಯತೆ ನೀಡುವುದು ಮಹತ್ವದ್ದಾಗಿದೆ.

Solar eclipse tomorrow; What to do? What not to do!
ನಾಳೆ ಸೂರ್ಯಗ್ರಹಣ; ಈ ಸಂದರ್ಭ ಏನು ಮಾಡಬೇಕು? ಏನು ಮಾಡಬಾರದು!

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಆಚರಣೆ ಮಧ್ಯೆ ಈ ಸಾರಿ ಖಂಡಗ್ರಾಸ ಸೂರ್ಯಗ್ರಹಣ ಆಗಮಿಸಿದೆ. ಇಂದು ನರಕ ಚತುರ್ದಶಿ ಆಚರಣೆ ಮಾಡಿರುವ ಭಕ್ತರು ನಾಳೆ ಲಕ್ಷ್ಮೀಪೂಜೆ ನಡೆಸಬೇಕಿತ್ತು. ಆದರೆ ಸೂರ್ಯಗ್ರಹಣ ಹಿನ್ನೆಲೆ ನಾಳೆ ಯಾವುದೇ ಧಾರ್ಮಿಕ ಕಾರ್ಯಕ್ರಮ ನೆರವೇರುವುದಿಲ್ಲ.

ಅಶ್ವಯುಜ ಅಮಾವಾಸ್ಯೆಯಂದು ಸೂರ್ಯಗ್ರಹಣ ಆಗಮಿಸಿದ್ದು ಭಾರತ ಸಹಿತ ಏಷ್ಯಾ ಖಂಡದ ಮಧ್ಯ ಮತ್ತು ಪಶ್ಚಿಮದ ಪ್ರದೇಶ, ಸಂಪೂರ್ಣ ಯುರೋಪ್ ಖಂಡ, ಆಫ್ರಿಕಾ ಖಂಡದ ಪೂರ್ವೋತ್ತರ ಪ್ರದೇಶಗಳಲ್ಲಿ ಗ್ರಹಣ ಗೋಚರಿಸಲಿದೆ. ಭಾರತದಲ್ಲಿ ಸಂಜೆ 4.29ರಿಂದ ಆರಂಭವಾಗುವ ಗ್ರಹಣವು ಸೂರ್ಯಾಸ್ತದೊಂದಿಗೆ ಮುಕ್ತಾಯವಾಗಲಿದೆ. ಬೆಂಗಳೂರಿನಲ್ಲಿ ಸಂಜೆ 5.12ರಿಂದ 5.56ರವರೆಗೆ ಅಂದರೆ 44 ನಿಮಿಷಗಳ ಕಾಲ ಗ್ರಹಣ ಗೋಚರಿಸಲಿದೆ.

ಗ್ರಹಣ ಸಂದರ್ಭದಲ್ಲಿ ಜನರು ವೇದಕಾಲದಲ್ಲಿ ಸ್ನಾನ, ದೇವರ ಪೂಜೆ, ನಿತ್ಯಕರ್ಮಗಳು, ಜಪತಪಗಳು ಮತ್ತು ಶ್ರಾದ್ಧ ಮುಂತಾದ ಕರ್ಮಗಳನ್ನು ಮಾಡಬಹುದು. ವೇದಕಾಲದಲ್ಲಿ ಊಟೋಪಚಾರ ಮಾಡುವುದು ನಿಷಿದ್ಧವಾಗಿದೆ. ಆದ್ದರಿಂದ ಅಹಾರ ಸೇವಿಸಬಾರದು, ಆದರೆ ನೀರು ಕುಡಿಯುವುದು, ಮಲ-ಮೂತ್ರ ವಿಸರ್ಜನೆ ಮತ್ತು ವಿಶ್ರಾಂತಿ ಪಡೆಯುವುದು ಮುಂತಾದ ಕರ್ಮಗಳನ್ನು ಮಾಡಬಹುದು.

ಗ್ರಹಣ ಪರ್ವಕಾಲದಲ್ಲಿ, ಎಂದರೆ ಗ್ರಹಣ ಸ್ಪರ್ಶದಿಂದ ಸೂರ್ಯಾಸ್ತದವರೆಗಿನ ಕಾಲಾವಧಿಯಲ್ಲಿ ನೀರು ಕುಡಿಯುವುದು, ಮಲಮೂತ್ರ ವಿಸರ್ಜನೆ ಮತ್ತು ನಿದ್ದೆ ಈ ಕರ್ಮಗಳು ನಿಷಿದ್ಧವಾಗಿರುವುದರಿಂದ ಅವುಗಳನ್ನು ಮಾಡಬಾರದು. ಮಧ್ಯಾಹ್ನ 12 ಗಂಟೆಯ ಒಳಗೆ ಆಹಾರ ಸೇವಿಸಬೇಕು ಮತ್ತು ಗ್ರಹಣ ಮೋಕ್ಷದ ಬಳಿಕ ಸ್ನಾನ ಮಾಡಿ, ಪೂಜೆ ಪೂರೈಸಿ, ಆಹಾರ ಸಿದ್ಧಪಡಿಸಿಕೊಂಡು ತಿನ್ನಬಹುದಾಗಿದೆ.

ಗ್ರಹಣಕಾಲದಲ್ಲಿ ಮಾಡಿರುವ ಸಾಧನೆಯ ಫಲವು ಸಾವಿರ ಪಟ್ಟಿನಲ್ಲಿ ಹೆಚ್ಚು ದೊರೆಯುತ್ತದೆ. ಇದಕ್ಕಾಗಿ ಗ್ರಹಣಕಾಲದಲ್ಲಿ ಸಾಧನೆಗೆ ಪ್ರಾಧಾನ್ಯತೆ ನೀಡುವುದು ಮಹತ್ವದ್ದಾಗಿದೆ. ವೇಧ ಆರಂಭದಿಂದ ಗ್ರಹಣ ಮುಗಿಯುವ ವರೆಗೂ ನಾಮಜಪ, ಸ್ತೋತ್ರಪಠಣ, ಧ್ಯಾನಧಾರಣೆ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ತೊಡಗಿಸಿದರೆ ಅದರ ಹೆಚ್ಚಿನ ಲಾಭವಾಗುತ್ತದೆ ಎಂದು ವೇದಗಳಲ್ಲಿ ಹೇಳಲಾಗಿದೆ.

ರಾಶಿಯ ಪ್ರಕಾರ ಗ್ರಹಣದ ಫಲ ಗಮನಿಸಿದರೆ ಶುಭ ಫಲ: ವೃಷಭ, ಸಿಂಹ, ಧನು ಮತ್ತು ಮಕರ ರಾಶಿಯವರಿಗೆ ಇರಲಿದೆ.

ಅಶುಭ ಫಲ: ಕರ್ಕ, ತುಲಾ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಇರಲಿದೆ.

ಮಿಶ್ರ ಫಲ: ಮೇಷ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರಿಗೆ ಇರಲಿದೆ.

ದೊಡ್ಡ ಮಹತ್ವ: ಹಿಂದೂ ಸನಾತನ ಧರ್ಮದಲ್ಲಿ ದೀಪಾವಳಿ ಆಚರಣೆಗೆ ಸಾಕಷ್ಟು ದೊಡ್ಡ ಪ್ರಮಾಣದ ಮಹತ್ವ ಇದೆ. ಈ ವರ್ಷ ದೀಪಾವಳಿ ಮತ್ತು ಗೋವರ್ಧನ ಪೂಜೆಯ ನಡುವೆ ಅಂದರೆ ಮಂಗಳವಾರ ಲಕ್ಷ್ಮೀಪೂಜೆ ದಿನ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣದ ಕರಿ ಛಾಯೆ ಹಬ್ಬದ ದಿನಗಳ ಮೇಲೆ ಯಾವ ವಿಧದ ಪರಿಣಾಮ ಬೀರಲಿದೆ ಎನ್ನುವ ಆತಂಕ ಸಹಜವಾಗಿ ಜನರಲ್ಲಿ ಮನೆ ಮಾಡಿದೆ.

ಖಂಡಗ್ರಾಸ ಸೂರ್ಯಗ್ರಹಣವು ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆಯ ರಾತ್ರಿ ಅಕ್ಟೋಬರ್ 25ರಂದು ಮಂಗಳವಾರ ಸಂಭವಿಸುತ್ತಿದೆ. ವಿಶೇಷವೆಂದರೆ ದೀಪಾವಳಿ ಹಬ್ಬವು ಸಿದ್ಧಿಗಳ ದೊಡ್ಡ ಹಬ್ಬವಾದ್ದರಿಂದ ಋಷಿಮುನಿಗಳು ಇದನ್ನು ಸಿದ್ಧಿಕಾಲ ಎಂದು ಹೆಸರಿಸಿದ್ದಾರೆ. ಇದರಿಂದಾಗಿ ಗ್ರಹಣ ಸಂಭವಿಸಿದರೂ ಇದರಿಂದ ಯಾವುದೇ ಅಪಾಯ ಹಾಗೂ ಆತಂಕ ಇಲ್ಲ ಎಂದು ಹೇಳಲಾಗುತ್ತಿದೆ. ಗ್ರಹಣದ ಸಮಯದಲ್ಲಿ, ಶ್ರೀರಾಮಚಂದ್ರನು ಗುರು ವಶಿಷ್ಠರಿಂದ ಮತ್ತು ಶ್ರೀಕೃಷ್ಣನು ಗುರು ಸಂದೀಪನಿಂದ ದೀಕ್ಷೆ ಪಡೆದರು ಎಂಬ ನಂಬಿಕೆ ಇದೆ. ಅಲ್ಲದೇ ಸೂರ್ಯಾಸ್ತದ ನಂತರ ಸಂಭವಿಸುವ ಸೂರ್ಯಗ್ರಹಣವು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರುವುದಿಲ್ಲ ಎಂದು ಹೇಳಲಾಗುತ್ತದೆ.

Last Updated : Oct 25, 2022, 6:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.