ETV Bharat / state

8 ಮಂದಿ ಸಚಿವರೊಂದಿಗೆ ಇಂದು ಸಿಎಂ, ಡಿಸಿಎಂ ಪದಗ್ರಹಣ: ಮತ್ತೆ ದೆಹಲಿಗೆ ತೆರಳಲಿರುವ ನಾಯಕರು

author img

By

Published : May 20, 2023, 9:48 AM IST

ಆಯ್ಕೆಯಾಗಬೇಕಿರುವ ಸಚಿವರ ಪಟ್ಟಿ ಅಂತಿಮಗೊಳಿಸಲು ಇಂದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

Siddaramaiah and DK Shivakumar
ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್​

ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ಸಜ್ಜಾಗುತ್ತಿದ್ದಾರೆ. ನಿನ್ನೆ ಇಬ್ಬರು ನಾಯಕರು ದೆಹಲಿಗೆ ತೆರಳಿ ಸಚಿವ ಸಂಪುಟಕ್ಕೆ ಸದಸ್ಯರ ಸೇರ್ಪಡೆ ಸಂಬಂಧ ಸಮಲೋಚಿಸಿದ್ದರು. ಇದರ ಫಲವಾಗಿ 8 ಮಂದಿ ಹಿರಿಯ ಸದಸ್ಯರು ಸಿಎಂ ಹಾಗೂ ಡಿಸಿಎಂ ಜತೆ ಇಂದು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್, ಸಚಿವರಾಗಿ ಎಂ.ಬಿ ಪಾಟೀಲ್, ಜಮೀರ್ ಅಹಮದ್ ಖಾನ್, ರಾಮಲಿಂಗಾ ರೆಡ್ಡಿ, ಡಾ. ಜಿ ಪರಮೇಶ್ವರ್, ಕೆ. ಹೆಚ್ ಮುನಿಯಪ್ಪ, ಪ್ರಿಯಾಂಕ್​ ಖರ್ಗೆ, ಸತೀಶ್ ಜಾರಕಿಹೊಳಿ ಮತ್ತು ಕೆ. ಜೆ ಜಾರ್ಜ್ ಇಂದು ಮಧ್ಯಾಹ್ನ 12:30ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲದಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಿನ್ನೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ತಡ ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಿದ್ದು, ಡಿಕೆಶಿ ಇದೀಗ ಬೆಂಗಳೂರಿಗೆ ಆಗಮಿಸಬೇಕಿದೆ. ನಿನ್ನೆ ತಡರಾತ್ರಿ ದೆಹಲಿಯಿಂದ ಹೊರಟು ಶಿವಾನಂದ ವೃತ್ತ ಸಮೀಪ ಇರುವ ತಮ್ಮ ಸರ್ಕಾರಿ ನಿವಾಸಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಬೆಳಗ್ಗೆ ಕೊಂಚ ತಡವಾಗಿ ಎದ್ದು ಪದಗ್ರಹಣ ಸಮಾರಂಭಕ್ಕೆ ಸಜ್ಜಾಗಲಿರುವ ಅವರು ಹೊರಡುವ ಮುನ್ನ ತಮ್ಮ ಅಭಿಮಾನಿಗಳನ್ನ ಭೇಟಿ ಮಾಡಿ ಶುಭಾಶಯ ಸ್ವೀಕರಿಸಲಿದ್ದಾರೆ.

Karnataka Cabinet Swearing
8 ಮಂದಿ ಸಚಿವರೊಂದಿಗೆ ಇಂದು ಸಿಎಂ,ಡಿಸಿಎಂ ಪದಗ್ರಹಣ

ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಮೈಸೂರಿನಿಂದ ಆಗಮಿಸಿದ ಸಿದ್ದರಾಮಯ್ಯ ಕುಟುಂಬಸ್ಥರು ಬೆಂಗಳೂರು ತಲುಪಿದ್ದಾರೆ. ಸಿದ್ದರಾಮಯ್ಯ ಸಹೋದರ ಸಿದ್ದೇಗೌಡ ಶಿವಾನಂದ ವೃತ್ತ ಸಮೀಪವಿರುವ ಸಿದ್ದರಾಮಯ್ಯ ನಿವಾಸಕ್ಕೆ ತಲುಪಿದ್ದಾರೆ. ಇನ್ನು ನಿಯೋಜಿತ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಬೆಳಗಿನ ಜಾವ ದೆಹಲಿಯಿಂದ ಪ್ರಯಾಣ ಬೆಳೆಸಿದ್ದಾರೆ.

ಮತ್ತೆ ದೆಹಲಿಗೆ: ಇಂದು ಮಧ್ಯಾಹ್ನ 12:30ಕ್ಕೆ ಪದಗ್ರಹಣ ಸಮಾರಂಭ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ನಿನ್ನೆ ತಡರಾತ್ರಿ ಸಾಕಷ್ಟು ಪ್ರಯತ್ನದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನಿವಾಸದಲ್ಲಿ 8 ಸಚಿವರ ಪದಗ್ರಹಣಕ್ಕೆ ಪಟ್ಟಿ ಅಂತಿಮಗೊಳಿಸಲಾಗಿದೆ.

10 ಮಂದಿ(ಸಿಎಂ, ಡಿಸಿಎಂ ಸೇರಿ) ಪದಗ್ರಹಣದ ಬಳಿಕ ಇನ್ನು 24 ಸ್ಥಾನಗಳು ಬಾಕಿ ಉಳಿಯಲಿದೆ. ಈ ಸ್ಥಾನಕ್ಕಾಗಿ ಸರಿಸುಮಾರು 80ಕ್ಕೂ ಹೆಚ್ಚು ಶಾಸಕರು ತೀವ್ರ ಪೈಪೋಟಿ ನಡೆಸಿದ್ದಾರೆ. ಪ್ರಾದೇಶಿಕ ಜಿಲ್ಲಾ ಹಾಗೂ ಜಾತಿವಾರು ಸ್ಥಾನ ಹಂಚಿಕೆ ಮಾಡುವ ಜವಾಬ್ದಾರಿ ಕಾಂಗ್ರೆಸ್ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಮೇಲಿದೆ. ಈ ಹಿನ್ನೆಲೆ ಆಯ್ಕೆಯಾಗಬೇಕಿರುವ ಸಚಿವರ ಪಟ್ಟಿ ಅಂತಿಮಗೊಳಿಸಲು ಇಂದೇ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಮೊದಲ ಹಂತದಲ್ಲಿ 8 ಸಚಿವರ ಜತೆ ಸಿಎಂ ಹಾಗೂ ಡಿಸಿಎಂ ಪದಗ್ರಹಣ ಮಾಡಲಿದ್ದಾರೆ. ಕ್ಯಾಬಿನೆಟ್ ಸಭೆ ನಡೆಸಿ 5 ಗ್ಯಾರಂಟಿಗಳನ್ನು ಇಂದೇ ಘೋಷಿಸಲಿದ್ದಾರೆ. ಮೊದಲ ಹಂತದಲ್ಲಿ ಸಚಿವರ ಪದಗ್ರಹಣದ ಬಳಿಕ ಎರಡನೇ ಹಂತದಲ್ಲಿ ಇನ್ನೂ 20 ಶಾಸಕರನ್ನು ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಯಲಿದ್ದು ಮುಂಬರುವ ದಿನಗಳಲ್ಲಿ ಎದುರಾಗುವ ಬಂಡಾಯವನ್ನ ಆಧರಿಸಿ ಸ್ಥಾನಮಾನ ಕಲ್ಪಿಸಲು ನಾಲ್ಕು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ.

ಅನಾಯಾಸವಾಗಿ ಯಾವುದೇ ಹೋರಾಟವನ್ನು ನಡೆಸದೆ ಶಾಸಕರಾದ ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ ಹಾಗೂ ಕೆ.ಜೆ ಜಾರ್ಜ್ ಸಚಿವ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ದೆಹಲಿಗೆ ತೆರಳದೆ ಹಾಗೂ ರಾಷ್ಟ್ರೀಯ ನಾಯಕರನ್ನು ಸಂಪರ್ಕಿಸದೆ ಇವರಿಗೆ ಅನಾಯಾಸವಾಗಿ ಸಚಿವ ಸ್ಥಾನ ಸಿಕ್ಕಿದೆ. ಉಳಿದಂತೆ ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಪರಮೇಶ್ವರ್ ಬೆಂಗಳೂರಿನಲ್ಲಿಯೇ ಕುಳಿತು ಸಾಕಷ್ಟು ಪ್ರಯತ್ನ ನಡೆಸಿದ್ದು ಅಂತಿಮವಾಗಿ ಸಂಪುಟ ಸೇರುವಲ್ಲಿ ಸಫಲರಾಗಿದ್ದಾರೆ.

ಶೀಘ್ರವೇ 2ನೇ ಹಂತದ ಸಚಿವ ಸಂಪುಟ ವಿಸ್ತರಣೆ: ಆದರೆ ಎರಡನೇ ಹಂತದಲ್ಲಿ ಸಚಿವ ಸಂಪುಟ ರಚಿಸುವುದು ಕಾಂಗ್ರೆಸ್ ನಾಯಕರಿಗೆ ಸಾಕಷ್ಟು ಸವಾಲಾಗಿದೆ. 80ಕ್ಕೂ ಹೆಚ್ಚು ಶಾಸಕರನ್ನ ಮನವೊಲಿಸಿ ಅವರಲ್ಲಿ 20 ಮಂದಿ ಹೆಸರನ್ನ ಅಂತಿಮಗೊಳಿಸಬೇಕಿದೆ. ಆದಷ್ಟು ಶೀಘ್ರವೇ 2ನೇ ಹಂತದ ಸಚಿವ ಸಂಪುಟ ವಿಸ್ತರಣೆ ಆಗಲಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ: ಗ್ಯಾರಂಟಿ ಮೇಲೆನೇ ಎಲ್ಲರ ಚಿತ್ತ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.