ಬೆಂಗಳೂರು: ರಾಜ್ಯದಲ್ಲಿ ನೂತನ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ 8 ಶಾಸಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ನಾಯಕರು ಸೇರಿದಂತೆ ಕಾಂಗ್ರೆಸ್ ಹಾಗೂ ತೃತೀಯ ರಂಗದ ಮುಖ್ಯಮಂತ್ರಿಗಳು, ನಾಯಕರು ಪಾಲ್ಗೊಂಡರು. ಈ ಹಿಂದೆ 2018ರಲ್ಲಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡಿದ್ದ ರೀತಿಯಲ್ಲಿಯೇ ರಾಷ್ಟ್ರೀಯ ನಾಯಕರು ಇಂದು ಕಂಠೀರವ ಕ್ರೀಡಾಂಗಣದಲ್ಲಿ ಒಟ್ಟಿಗೆ ಸೇರಿ ಒಗ್ಗಟ್ಟು ಪ್ರದರ್ಶನ ಮಾಡಿದರು.
ಘಟಾನುಗಟಿ ನಾಯಕರು ಭಾಗಿ: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಬಿಹಾರ ಸಿಎಂ ನಿತೀಶ್ ಕುಮಾರ್, ಜಾರ್ಖಂಡ್ ಸಿಎಂ ಹೇಮಂತ್ ಸುರೇನ್, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಎನ್.ಸಿ.ಪಿ ನಾಯಕ ಶರದ್ ಪವಾರ್, ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ, ಮೆಹಮೂಬಾ ಮುಫ್ತಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ಆರ್ಎಸ್ಪಿ ಅಧ್ಯಕ್ಷ ಎನ್.ಕೆ ಪ್ರೇಮಚಂದ್ರನ್, ಸಿಪಿಐ ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ, ವಿಸಿಕೆ ಅಧ್ಯಕ್ಷ ಡಾ.ಟಿ ತಿರುಮಲವಲನ್, ಆರ್.ಎಲ್.ಡಿ ಅಧ್ಯಕ್ಷ ಜಯಂತ್ ಚೌದರಿ, ನಟ ಕಮಲ ಹಾಸನ್ ಉಪಸ್ಥಿತರಿದ್ದರು.
ಬಿಜೆಪಿಯೇತರ ಸರ್ಕಾರಕ್ಕೆ ಒಗ್ಗಟ್ಟಿನ ಹೋರಾಟದ ಸುಳಿವು: ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಎಲ್ಲ ರಾಷ್ಟ್ರೀಯ ನಾಯಕರು ಪರಸ್ಪರ ಕೈ ಕೈ ಹಿಡಿದು ವೇದಿಕೆ ಮೇಲೆ ಒಗ್ಗಟ್ಟು ಪ್ರದರ್ಶನ ಮಾಡಿದರು. ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರದ ಒಗ್ಗಟ್ಟಿನ ಹೋರಾಟದ ಸುಳಿವು ನೀಡಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವಿದ್ದ ಭೇಟಿ ನೀಡಿದ್ದ ನಾಯಕರು: 2018ರ ಮೇ 23ರಂದು ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಮುಖ್ಯಮಂತ್ರಿಯಾಗಿ ಜೆಡಿಎಸ್ನ ಹೆಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಡಾ.ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಎಐಸಿಸಿ ಅಧಿನಾಯಕಿ ಸೋನಿಯಾಗಾಂಧಿ, ಅಂದಿನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಯಾದವ್, ಕೇರಳ ಸಿಎಂ ಪಿಣರಾಯಿ ವಿಜಯನ್, ಸೀತಾರಾಮ್ ಯಚೂರಿ, ಪುದುಚೇರಿಯ ವಿ.ನಾರಾಯಣಸ್ವಾಮಿ, ಅಜಿತ್ ಸಿಂಗ್, ಜೈಪಾಲ್ ರೆಡ್ಡಿ, ಶರದ್ ಪವಾರ್, ಶರದ್ ಯಾದವ್, ಹೇಮಂತ್ ಸೂರೇನ್ ಸೇರಿದಂತೆ ಹಲವಾರು ಗಣ್ಯರು ಸೇರಿದಂತೆ ತೃತೀಯ ರಂಗದ ಗಣ್ಯರು ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದನ್ನೂ ಓದಿ: ನೂತನ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ