ETV Bharat / state

ರಾಜ್ಯಾದ್ಯಂತ ಭಕ್ತಿಭಾವ, ಸಡಗರದಿಂದ ಶ್ರೀರಾಮ ನವಮಿ ಆಚರಣೆ

author img

By

Published : Mar 30, 2023, 9:12 PM IST

ಬೆಂಗಳೂರು, ಹಾವೇರಿ, ಶಿವಮೊಗ್ಗದಲ್ಲಿ ಇಂದು ಸಂಭ್ರಮದಿಂದ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ದೇವಾಲಯಗಳಲ್ಲಿ ಭಕ್ತರಿಗೆ ಪಾನಕ ಹಾಗೂ ಕೋಸಂಬರಿಯನ್ನು ವಿತರಿಸಲಾಯಿತು.

ಶ್ರೀರಾಮ ನವಮಿ
ಶ್ರೀರಾಮ ನವಮಿ

ಹಾವೇರಿಯಲ್ಲಿ ಸಂಭ್ರಮದಿಂದ ನಡೆದ ಶ್ರೀರಾಮ ನವಮಿ

ಬೆಂಗಳೂರು: ರಾಜ್ಯಾದ್ಯಂತ ಶ್ರೀರಾಮ ನವಮಿಯನ್ನು ಅತ್ಯಂತ ಭಕ್ತಿಭಾವ ಹಾಗೂ ಸಡಗರದಿಂದ ಆಚರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಮಾಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳ ಜೊತೆಗೆ ಸಾರ್ವಜನಿಕರಿಗೆ ಕೋಸಂಬರಿ, ಪಾನಕ ವಿತರಣೆ ಮಾಡಲಾಯಿತು. ಅದರಂತೆ ಬೆಂಗಳೂರು ನಗರದಲ್ಲಿಯೂ ಸಂಭ್ರಮದ ಆಚರಣೆ ನಡೆಸಲಾಯಿತು.

ಮನೆ ಮನೆಗಳಲ್ಲೂ ವಿಶೇಷ ಪೂಜೆ: ರಾಮನವಮಿ ಪ್ರಯುಕ್ತ ಗುರುವಾರ ಬೆಳಗ್ಗೆಯೇ ಭಕ್ತರು ಶ್ರೀರಾಮ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ನಗರದ ರಾಮಾಂಜನೇಯ ದೇವಸ್ಥಾನಗಳಲ್ಲಿ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ರಾಮತಾರಕ ಹೋಮ-ಪೂಜೆ ಪುನಸ್ಕಾರಗಳು ನೆರವೇರಿದವು. ರಾಮನಾಮ ಜಪ, ಶ್ರೀರಾಮ ಅಷ್ಟೋತ್ತರ ಶತನಾಮಾವಳಿ ಪಠಣ, ತೊಟ್ಟಿಲಲ್ಲಿ ಬಾಲ ಸ್ವರೂಪದ ರಾಮನನ್ನಿಟ್ಟು ತೂಗಿ ಭಜಿಸಲಾಯಿತು. ಮನೆಗಳಲ್ಲೂ ವಿಶೇಷವಾಗಿ ಪೂಜೆಗಳು ನಡೆದವು.

ರಾಜಾಜಿನಗರದಲ್ಲಿರುವ ರಾಮಮಂದಿರದಲ್ಲಿ ವಿಶೇಷವಾಗಿ ಪೂಜೆ ನಡೆಯಿತು. ವಜ್ರಾಂಗಿ ಅಲಂಕಾರದ ಚಿನ್ನಾಭರಣವನ್ನು ದೇವರಿಗೆ ತೊಡಿಸಿ ಪೂಜಿಸಲಾಯಿತು. ಮಂದಿರದ ರಾಜಬೀದಿಯಲ್ಲಿ ಚಂಡೆ, ನಾದಸ್ವರದ ಮೂಲಕ ರಾಮನ ರಥೋತ್ಸವ ನಡೆಯಿತು. ಅದ್ಧೂರಿ ರಥೋತ್ಸವವನ್ನು ಸಾರ್ವಜನಿಕರು ವೀಕ್ಷಿಸಿ ಸಂತಸ ಪಟ್ಟರು. ಅನೇಕ ಕಡೆ ಕಲಾವಿದರು ಶ್ರೀರಾಮ, ಆಂಜನೇಯನ ವೇಷ ಧರಿಸಿ ಗಮನ ಸೆಳೆದರು.

ಹಾವೇರಿಯ ರಘುನಂದನ ದೇವಾಲಯದಲ್ಲಿ ಕಳೆಗಟ್ಟಿದ ಹಬ್ಬ: ಇನ್ನೊಂದೆಡೆ ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಶ್ರೀರಾಮನವಮಿ ಆಚರಿಸಲಾಗುತ್ತದೆ. ಶ್ರೀರಾಮನವಮಿ ಅಂಗವಾಗಿ ರಘುನಂದನ ದೇವಸ್ಥಾನಗಳಲ್ಲಿ ಹಬ್ಬ ಕಳೆಗಟ್ಟಿದೆ. ಶ್ರೀರಾಮ, ಸೀತೆ, ಲಕ್ಷ್ಮಣ ಮತ್ತು ಆಂಜನೇಯ ಮೂರ್ತಿಗಳಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ಮಾಡಲಾಯಿತು. ನಂತರ ವಿವಿಧ ಆಭರಣ ವಸ್ತ್ರ ಮತ್ತು ಪುಷ್ಪಗಳಿಂದ ರಘುನಾಮನನ್ನು ಸಿಂಗರಿಸಲಾಯಿತು.

ಪಲ್ಲಕ್ಕಿಯಲ್ಲಿಟ್ಟು ಶ್ರೀರಾಮನ ಬೆಳ್ಳಿಮೂರ್ತಿ ಪ್ರದಕ್ಷಿಣೆ: ಸಿಂಗರಿಸಿದ ಶ್ರೀರಾಮನ ಮೂರ್ತಿಯನ್ನು ಕಣ್ತುಂಬಿಕೊಂಡರು. ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಶ್ರೀರಾಮನ ಮೂರ್ತಿಯನ್ನ ತೊಟ್ಟಿಲಲ್ಲಿ ಹಾಕಲಾಯಿತು. ಮಹಿಳೆಯರು ಶ್ರೀರಾಮನ ಬೆಳ್ಳಿ ಮೂರ್ತಿಗೆ ನಾನಾ ಬಗೆಯ ಪೂಜಾ-ವಿಧಾನಗಳನ್ನ ಪೂರೈಸಿ ತೊಟ್ಟಿಲಲ್ಲಿ ಹಾಕಿ ತೊಟ್ಟಿಲೋತ್ಸವ ಆಚರಿಸಲಾಯಿತು. ಮಹಿಳೆಯರು ತೊಟ್ಟಿಲನ್ನ ತೂಗುವ ಮೂಲಕ ಸಂಭ್ರಮಿಸಿದರು. ನಂತರ ಶ್ರೀರಾಮನ ಬೆಳ್ಳಿಮೂರ್ತಿಯನ್ನ ಪಲ್ಲಕ್ಕಿಯಲ್ಲಿಟ್ಟು ದೇವಸ್ಥಾನದ ಪ್ರದಕ್ಷಿಣೆ ಹಾಕಿಸಲಾಯಿತು.

ಪಲ್ಲಕ್ಕಿ ಹೊತ್ತ ಭಕ್ತರು ಶ್ರೀರಾಮ ಮಂದಿರದ ಸುತ್ತ ಮೂರು ಬಾರಿ ಪ್ರದಕ್ಷಿಣಿ ಹಾಕಿದರು. ಶ್ರೀರಾಮನ ಪಲ್ಲಕ್ಕಿ ಸಾಗುತ್ತಿದ್ದಂತೆ ನೂರಾರು ಭಕ್ತರು ತಂಡೋಪತಂಡವಾಗಿ ಪಾಲ್ಗೊಂಡು ಮಂದಿರ ಪ್ರದಕ್ಷಿಣಿ ಹಾಕಿದರು. ನಂತರ ಶ್ರೀರಾಮನವಮಿ ಅಂಗವಾಗಿ ಮಂದಿರದಲ್ಲಿ ಪಾನಕ ಮತ್ತು ಕೋಸಂಬರಿ ವಿತರಿಸಲಾಯಿತು. ಭಕ್ತರು ಸರತಿಯಲ್ಲಿ ನಿಂತು ಪಾನಕ ಮತ್ತು ಕೋಸಂಬರಿ ಸೇವಿಸಿದರು.

ತಳಿರು ತೋರಣಗಳಿಂದ ದೇವಾಲಯದ ಅಲಂಕಾರ: ಶ್ರೀರಾಮನವಮಿ ಆಚರಣೆ ಕುರಿತಂತೆ ದೇವಸ್ಥಾನದ ಪ್ರಧಾನ ಅರ್ಚಕ ಹನುಮಂತನಾಯಕ ಬದಾಮಿ ಅವರು ಮಾತನಾಡಿ, ಬೆಳಿಗ್ಗೆ 06-30ಕ್ಕೆ ಕಾಕಡಾರತಿ ಮಾಡಲಾಯಿತು. 8 ಗಂಟೆಗೆ ರುದ್ರಾಭಿಷೇಕ ನಡೆಸಲಾಯಿತು. ನಂತರ ವಸ್ತ್ರಾಲಂಕಾರ ಮಾಡಿ 12 ಗಂಟೆ 40 ನಿಮಿಷಕ್ಕೆ ತೊಟ್ಟಿಲೋತ್ಸವ ಆಚರಿಸಲಾಯಿತು. ತದನಂತರ ಪಲ್ಲಕ್ಕಿ ಮಹೋತ್ಸವ ನಡೆಸಲಾಯಿತು ಎಂದು ತಿಳಿಸಿದರು.

ಕಳೆದ ಕೆಲ ವರ್ಷಗಳಿಂದ ಕೊರೊನಾ ಕರಿನೆರಳಿನಲ್ಲಿ ಶ್ರೀರಾಮನವಮಿಯನ್ನ ವಿಜೃಂಭಣೆಯಿಂದ ಆಚರಿಸಲಾಗಿರಲಿಲ್ಲ. ಈ ವರ್ಷ ಮಾತ್ರ ಅತ್ಯಂತ ವೈಭವದಿಂದ ಶ್ರೀರಾಮ ನವಮಿ ಆಚರಿಸಿದ್ದೇವೆ. ಇಂದು ಉಪವಾಸ ಇರುವುದರಿಂದ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹನುಮಂತನಾಯಕ್ ಬದಾಮಿ ತಿಳಿಸಿದರು.

ಶಿವಮೊಗ್ಗದಲ್ಲಿ ಶ್ರೀರಾಮ ವೈಭವದ ಬ್ರಹ್ಮ ರಥೋತ್ಸವ: ಇನ್ನೊಂದೆಡೆ ಶಿವಮೊಗ್ಗ ನಗರದ ದುರ್ಗಿಗುಡಿ ಬಡಾವಣೆಯ ಶ್ರೀರಾಮ ದೇವಾಲಯದ ವತಿಯಿಂದ ಶ್ರೀರಾಮನ ಬ್ರಹ್ಮ ರಥೋತ್ಸವ ಜರುಗಿತು. ಪ್ರತಿ ವರ್ಷ ಶ್ರೀರಾಮ ನವಮಿಯ ದಿನದಂದು ಶ್ರೀರಾಮನ ಬ್ರಹ್ಮ ರಥೋತ್ಸವ ನಡೆಸಲಾಗುತ್ತದೆ. ಬೆಳಗ್ಗೆಯೇ ಶ್ರೀರಾಮನ ಉತ್ಸವ ಮೂರ್ತಿಯನ್ನು ಅಲಂಕರಿಸಿಕೊಂಡು ದುರ್ಗಿಗುಡಿ ಬಡಾವಣೆಯನ್ನು ಪ್ರದಕ್ಷಿಣೆ ಹಾಕಿಸಿಕೊಂಡು ಬರಲಾಗುತ್ತದೆ.

ದೇವಾಲಯಕ್ಕೆ ಬಂದ ನಂತರ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಗುತ್ತದೆ‌. ದೇವರ ಮೂರ್ತಿಗಳಿಗೆ ಗಂಗಾಭಿಷೇಕದ ನಂತರ ವಿಶೇಷ ಅಲಂಕಾರ ನಡೆಸಲಾಗುತ್ತದೆ. ವಿಶೇಷ ಅಲಂಕಾರದ ನಂತರ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿಸಲಾಗುತ್ತದೆ. ರಥದ ಬಳಿ ಬಲಿ ಪೂಜೆ ನಡೆಸಲಾಗುತ್ತದೆ. ಇದೆಲ್ಲಾ ಮುಗಿದ ನಂತರ ರಥದ ಪೂಜೆ ನಡೆಸಲಾಗುತ್ತದೆ. ಇಷ್ಟೆಲ್ಲಾ ಧಾರ್ಮಿಕ ಕಾರ್ಯಗಳ‌ ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಅವರೋಹಣ ಮಾಡಲಾಯಿತು. ರಥದಲ್ಲಿ ಉತ್ಸವ ಮೂರ್ತಿಗಳು ಕೂತ ನಂತರ ರಥವನ್ನು ಭಕ್ತರು ಭಕ್ತಿಯಿಂದ ಎಳೆಯುತ್ತಾರೆ. ರಥವು ದುರ್ಗಿಗುಡಿ ಬಡಾವಣೆ ಪ್ರಮುಖ‌ ರಸ್ತೆಯಲ್ಲಿ ಸಾಗಿ ಸಂಜೆ ಪುನಃ ದೇವಾಲಯಕ್ಕೆ ವಾಪಸ್ ಆಗುತ್ತದೆ.

ಇದನ್ನೂ ಓದಿ : ಬೆಂಗಳೂರು ನಗರದಲ್ಲಿ ಅದ್ಧೂರಿ ರಾಮನವಮಿ ಆಚರಣೆ.. ವಿವಿಧ ದೇವಾಲಯಗಳಲ್ಲಿ ಹೋಮ ಹವನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.