ETV Bharat / state

ಶಾಮನೂರು ಶಿವಶಂಕರಪ್ಪನವರ ಬೇಡಿಕೆ ತಪ್ಪಲ್ಲ, ಸಿಎಂ ಸಮಸ್ಯೆ ಪರಿಹರಿಸಲಿದ್ದಾರೆ: ಡಿ.ಕೆ.ಶಿವಕುಮಾರ್

author img

By ETV Bharat Karnataka Team

Published : Oct 1, 2023, 6:08 PM IST

ಶಾಮನೂರು ಶಿವಶಂಕರಪ್ಪ ಒಂದು ಸಮಾಜದ ಅಧ್ಯಕ್ಷರು. ಅವರಿಗೆ ಎಲ್ಲವೂ ತಿಳಿದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು : ಶಾಮನೂರು ಶಿವಶಂಕರಪ್ಪ ಅವರ ಮೇಲೂ ಒತ್ತಡವಿದೆ. ಅವರ ಬೇಡಿಕೆ ತಪ್ಪಲ್ಲ. ಆದರೆ, ಜಾತಿಯಾಧಾರಿತವಾಗಿ ಹುದ್ದೆ ನೀಡಲು ಸಾಧ್ಯವಿಲ್ಲ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲಿದ್ದಾರೆ. ಶಾಮನೂರು ಶಿವಶಂಕರಪ್ಪ ಜೊತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಚಿತ್ರಕಲಾ ಪರಿಷತ್​ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪನವರು ಒಂದು ಸಮಾಜದ ಅಧ್ಯಕ್ಷರು. ಅವರಿಗೆ ಎಲ್ಲವೂ ಗೊತ್ತಿದೆ. ಅವರ ಸಮಾಜಕ್ಕೆ ಎಷ್ಟು ಸಚಿವ ಸ್ಥಾನ ಸಿಕ್ಕಿದೆ, ಎಷ್ಟು ಗೌರವ ಕೊಡಲಾಗಿದೆ ಎಂದೂ ಗೊತ್ತಿದೆ. ಎಲ್ಲರೂ ಒಳ್ಳೊಳ್ಳೆ ಹುದ್ದೆ ಬೇಕು ಎಂದು ಕೇಳುತ್ತಾರೆ. ಸರ್ಕಾರ ಜಾತಿ ಆಧಾರದಲ್ಲಿ ಹುದ್ದೆ ನೀಡಲು ಸಾಧ್ಯವಿಲ್ಲ. ಈ ಕುರಿತು ಸಿಎಂ ಮಾತನಾಡುತ್ತಾರೆ. ಕೆಲವು ಅಧಿಕಾರಿಗಳು ಒಂದೊಂದು ಸಮಾಜದ ಜೊತೆ ನೇರವಾಗಿ ಗುರುತಿಸಿಕೊಂಡಿರುತ್ತಾರೆ. ಆದರೆ ಜಾತಿಯ ಮೇಲೆ ನೇಮಕ ಕಷ್ಟ ಎಂದರು.

ಸಿಎಂಗೆ ತಮ್ಮದೇ ಆದ ರೀತಿಯಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ನಮ್ಮಲ್ಲೂ ಸಮಯ ಪ್ರಜ್ಞೆ ಇರಬೇಕು. ನಾವು ಪೋಸ್ಟಿಂಗ್ ಕೊಡುವಾಗ ಸಾಮಾಜಿಕ ನ್ಯಾಯ ನೋಡಬೇಕು. ನನ್ನ ಜಾತಿ ಎಂದು ಒಂದೇ ಜಾತಿ ನೋಡಲಾಗದು. ಎಲ್ಲ ಸಚಿವರೂ ಇದನ್ನು ಪಾಲಿಸಬೇಕು. ಸರ್ಕಾರ ಎಂದರೆ ಸಿಎಂ ಮಾತ್ರವಲ್ಲ, 33 ಜನ ಸಚಿವರೂ ಸರ್ಕಾರವೇ. ನಾವೆಲ್ಲಾ ಬೇರೆ ಬೇರೆ ಜನಾಂಗದವರನ್ನೇ ನೇಮಿಸಿಕೊಂಡಿದ್ದೇವೆ. ಎಲ್ಲಾ ಕಾಲದಲ್ಲಿಯೂ ಇದು ನಡೆದುಕೊಂಡು ಬಂದಿದೆ ಎಂದು ಪ್ರಸ್ತುತ ಪದ್ದತಿಯನ್ನು ಸಮರ್ಥಿಸಿಕೊಂಡರು.

ಶಾಮನೂರು ಶಿವಶಂಕರಪ್ಪ ಒಂದು ಸಮಾಜದ ಅಧ್ಯಕ್ಷರು. ಹಾಗಾಗಿ ಅವರ ಮೇಲೂ ಒತ್ತಡ ಇದೆ. ಕೆಲ ಸಚಿವರ ಬಳಿ ಅಧಿಕಾರಿಗಳು ಹೋಗಿ ಕೇಳಿಕೊಂಡಿದ್ದಾರೆ. ಇದು ತಪ್ಪಲ್ಲ. ಆದರೆ, ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶ ಮರುಪರಿಶೀಲಿಸಬೇಕು ಎಂದು ನಿನ್ನೆ ಮಧ್ಯಾಹ್ನವೇ ಮರುಪರಿಶೀಲನಾ ಅರ್ಜಿ ಹಾಕಿದ್ದೇವೆ. ಸುಪ್ರೀಂ ಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿಗಳ ಸಲಹೆ ಪಡೆದು ಅರ್ಜಿ ಹಾಕಿದ್ದೇವೆ. ಎಜಿ ಜೊತೆಯೂ ಸಮಾಲೋಚನೆ ನಡೆಸಿ ಹೆಜ್ಜೆ ಇಟ್ಟಿದ್ದೇವೆ. ಸದ್ಯ ಕೆಆರ್​ಎಸ್​ಗೆ ನಿತ್ಯ 15 ಸಾವಿರ ಕ್ಯೂಸೆಕ್ ಒಳಹರಿವಿದೆ. ಈಗ ನಮ್ಮ ರಾಜ್ಯದ ರೈತರು ಮತ್ತು ಜನರು ವರುಣನಲ್ಲಿ ಪ್ರಾರ್ಥನೆ ಮಾಡುವುದು ಅಗತ್ಯ. ಇದೇ ರೀತಿ ನೀರು ಬಂದರೆ ಸಮಸ್ಯೆಯಾಗಲ್ಲ. ಈಗಾಗಲೇ ಬೆಳೆಗಳ ರಕ್ಷಣೆಗಾಗಿ ರೈತರಿಗೆ ನೀರು ಬಿಟ್ಟಿದ್ದೇವೆ ಎಂದರು.

ಬೆಂಗಳೂರು ಮತ್ತು ಜಲಾಶಯದ ಮುಂಭಾಗದಲ್ಲಿ ಮಳೆಯಾಗಿದ್ದರಿಂದ ಕಳೆದ ಮೂರ್ನಾಲ್ಕು ದಿನ 6500 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದಿದೆ. ನಾವು ನದಿಗೆ ನೀರು ಬಿಡದಿದ್ದರೂ ಅಷ್ಟು ನೀರು ಹರಿದಿದೆ. ಮಳೆ ಆದರೆ ನಮಗೆ ಮತ್ತಷ್ಟು ಶಕ್ತಿ ಬರಲಿದೆ. ಕಾನೂನು ಹೋರಾಟಕ್ಕೆ ಏನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ ಎಂದರು.

ಆಪರೇಷನ್ ಕಮಲವನ್ನು ಶೋಭಾ ಕರಂದ್ಲಾಜೆ ನೆನಪಿಸಿಕೊಳ್ಳಬೇಕು. ಸದನದ ಒಳಗೆ ಶ್ರೀನಿವಾಸಗೌಡ ಏನು ಮಾತನಾಡಿದ್ದರು, ಸದನದ ಹೊರಗಡೆ ಏನೇನು ಮಾತನಾಡಿದ್ದರು, ಈಗ ಏನೇನು ನಡೆಯುತ್ತಿದೆ, ಅವರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಟಿಕೆಟ್​ಗೆ ಏನೇನು ನಡೆದಿದೆ ಎನ್ನುವುದನ್ನು ನೆನಪಿಸಿಕೊಂಡರೆ ಬಹಳ ಉತ್ತಮ ಎಂದು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎನ್ನುವ ಆರೋಪಕ್ಕೆ ಡಿಕೆಶಿ ಟಾಂಗ್ ಕೊಟ್ಟರು.

ಇದನ್ನೂ ಓದಿ: ಸಿದ್ದರಾಮಯ್ಯ-ಶಾಮನೂರು ನಡುವೆ ಯಾವುದೇ ಜಟಾಪಟಿ ಇಲ್ಲ: ಸಚಿವ ಬೋಸರಾಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.