ETV Bharat / state

ಸಿಎಂ ನಿವಾಸದಲ್ಲಿ ಸಂಘದ ಸಭೆ: ಹೊಸಬಾಳೆ, ಮುಕುಂದ್ ಭೇಟಿ ರಹಸ್ಯ ಏನು?

author img

By

Published : Dec 9, 2022, 10:44 PM IST

ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ಚುನಾವಣೆ ಕಡೆ ಬಿಜೆಪಿ ಹೈಕಮಾಂಡ್ ಹಾಗು ಸಂಘ ಪರಿವಾರ ದೃಷ್ಟಿ ಹರಿಸಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿಗೆ ಸಿದ್ದತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಂಘ ಪರಿವಾರದ ಪ್ರಮುಖರು ರಂಗ ಪ್ರವೇಶ ಮಾಡಿದ್ದಾರೆ.

ಹೊಸಬಾಳೆ, ಮುಕುಂದ್
ಹೊಸಬಾಳೆ, ಮುಕುಂದ್

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಸಂಘ ಪರಿವಾರದ ಪ್ರಮುಖರು ಅಖಾಡಕ್ಕಿಳಿದಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಕಾರ್ಯವಾಹ ಮತ್ತು ಸಹಸರಕಾರ್ಯವಾಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಸಮಾಲೋಚನೆ ನಡೆಸಿದರು. ಕೇಶವಕೃಪಾ ಸಭೆ ನಂತರ ರೇಸ್ ಕೋರ್ಸ್ ನಿವಾಸದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಿದ್ದಾರೆ.

ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕ ಚುನಾವಣೆ ಕಡೆ ಬಿಜೆಪಿ ಹೈಕಮಾಂಡ್ ಹಾಗು ಸಂಘ ಪರಿವಾರ ದೃಷ್ಟಿ ಹರಿಸಿದೆ. ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿಗೆ ಸಿದ್ದತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಂಘ ಪರಿವಾರದ ಪ್ರಮುಖರು ರಂಗ ಪ್ರವೇಶ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಜೊತೆ ಸತತ ಸಭೆ ನಡೆಸುತ್ತಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಬಾರಿ ಕೇಶವಕೃಪಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರನ್ನು ಕರೆಸಿಕೊಂಡು ಸಭೆ ನಡೆಸಿದ್ದ ಆರ್‌ಎಸ್‌ಎಸ್ ನಾಯಕರು ಸರ್ಕಾರಕ್ಕೆ ಸಾಕಷ್ಟು ಸಲಹೆಗಳನ್ನು ನೀಡಿದ್ದರು. ಚುನಾವಣೆಗೆ ಸಿದ್ದರಾಗುವ ಸೂಚನೆ ನೀಡಿದ್ದರು. ಕೇಶವಕೃಪಾದಲ್ಲಿ ನಡೆದ ಸಭೆ ಬಳಿಕ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕೃತ ನಿವಾಸಕ್ಕೆ ಸಂಘ ಪರಿವಾರದ ನಾಯಕರ ಸಭೆ ಸ್ಥಳಾಂತರವಾಗಿದೆ.

ಗುಜರಾತ್ ಫಲಿತಾಂಶ ಪ್ರಕಟಣೆಗೆ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ‌ ನಿವಾಸಕ್ಕೆ ಆರ್‌ಎಸ್‌ಎಸ್ ನ ನಂಬರ್ 2 ಸ್ಥಾನದಲ್ಲಿರುವ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಆಗಮಿಸಿದ್ದರು. ಸಾಕಷ್ಟು ವಿಷಯಗಳ ಕುರಿತು ಮಾತುಕತೆ ನಡೆಸಿದ್ದರು. ಬಹುತೇಕ ಸಂಘದ ಅಜೆಂಡಾ ಕುರಿತು ಸಮಾಲೋಚನೆ ನಡೆದಿತ್ತು ಎನ್ನಲಾಗಿದೆ. ಯಾವ ರೀತಿ ಸರ್ಕಾರ ಮತ್ತು ಪಕ್ಷ ಮುನ್ನಡೆಯಬೇಕು, ಮೀಸಲಾತಿ ವಿಚಾರದಲ್ಲಿ ಯಾವ ರೀತಿ ಹೆಜ್ಜೆ ಇಡಬೇಕು ಎನ್ನುವ ಕುರಿತು ಚರ್ಚೆ ನಡೆದಿತ್ತು ಎನ್ನಲಾಗಿದೆ.

ಸಂಘದ ಕಚೇರಿಯಲ್ಲಿ ಮಾತುಕತೆ: ಹೊಸಬಾಳೆ ಭೇಟಿ ನಂತರ ಇಂದು ಆರ್‌ಎಸ್‌ಎಸ್ ಸಹಸರಕಾರ್ಯವಾಹಕ ಮುಕುಂದ್ ಸಿಎಂ ಅಧಿಕೃತ ನಿವಾಸಕ್ಕೆ ಆಗಮಿಸಿ ಕೆಲ ಸಮಯ ಗೌಪ್ಯ ಮಾತುಕತೆ ನಡೆಸಿದರು. ಹೊಸಬಾಳೆ ನೀಡಿದ್ದ ಸಂದೇಶಗಳ ಮುಂದುವರೆದ ಚರ್ಚೆ ನಡೆದಿದೆ ಎನ್ನಲಾಗಿದೆ. ಚುನಾವಣೆಗೆ ಸಿದ್ದತೆ ಆರಂಭಿಸುವ ಮುನ್ನ ನಡೆದಿರುವ ಈ ಮಾತುಕತೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಸರ್ಕಾರ, ಪಕ್ಷ ಹಾಗೂ ಸಂಘದ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿಯು ಕರ್ನಾಟಕದಲ್ಲಿ ಮುಕುಂದ್ ಮೇಲಿದ್ದು, ಕಾಲಕಾಲಕ್ಕೆ ಸಂಘದ ಕಚೇರಿಯಲ್ಲಿ ಮಾತುಕತೆ ನಡೆಸುತ್ತಿದ್ದರು‌. ಆದರೆ, ಇದೀಗ ಹೊಸಬಾಳೆ ಸೂಚನೆಯಂತೆ ಮುಕುಂದ್ ಕೂಡ ಸಿಎಂ ಭೇಟಿ ಮಾಡಿದ್ದಾರೆ.

ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದು, ಅದಕ್ಕೂ ಮುನ್ನವೇ ಸಂಘ ಪರಿವಾರದ ನಾಯಕರು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಹೊಸಬರಿಗೆ ಟಿಕೆಟ್, ಹಿರಿಯರಿಗೆ ಕೋಕ್, ವಸಲಿಗರ ಸ್ಥಿತಿ, ಆಪರೇಷನ್ ಕಮಲದ ವಿಚಾರವಾಗಿ ಮಾತುಕತೆ ನಡೆದಿದ್ದು, ಚುನಾವಣಾ ಸಿದ್ದತೆಗೆ ಪೂರಕವಾಗಿ ಮಾತುಕತೆ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಗತ್ಯ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಆಗಾಗ ಬಿಜೆಪಿ ನಾಯಕರನ್ನು ಕರೆಸಿಕೊಂಡು ಮಾತುಕತೆ ನಡೆಸುತ್ತಿದ್ದ ಸಂಘ ಪರಿವಾರದ ಪ್ರಮುಖರು ಇದೀಗ ನೇರವಾಗಿ ಅಖಾಡಕ್ಕಿಳಿದಿದ್ದು, ಕೇಶವಕೃಪಾದಿಂದ ಹೊರಗೆ ಬಂದು ಸಭೆ ನಡೆಸಿ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಂದೇಶವನ್ನು ರಾಜ್ಯ ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ.

ಇದನ್ನೂ ಓದಿ: ಸಚಿವಾಕಾಂಕ್ಷಿಗಳ ಪಟ್ಟಿ ಬಿಡಿ, ಕ್ಷೇತ್ರವಾರು ಮಾಹಿತಿ ನೀಡಿ: ರಾಜ್ಯ ಬಿಜೆಪಿಗೆ ಹೈಕಮಾಂಡ್ ಮಹತ್ವದ ಸಂದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.