ETV Bharat / state

ಬಿಎಸ್​ವೈ ನಿವಾಸದ ಮೇಲಿನ ದಾಳಿ ಖಂಡನೀಯ : ರಣದೀಪ್​ ಸಿಂಗ್​ ಸುರ್ಜೇವಾಲಾ

author img

By

Published : Mar 27, 2023, 8:45 PM IST

Updated : Mar 27, 2023, 10:05 PM IST

ಬಿಜೆಪಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯದ ಆಧುನಿಕ ಶಕುನಿಯಾಗಿದ್ದಾರೆ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ.

ರಣದೀಪ್​ ಸಿಂಗ್​ ಸುರ್ಜೇವಾಲಾ
ರಣದೀಪ್​ ಸಿಂಗ್​ ಸುರ್ಜೇವಾಲಾ

ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲಾ

ಬೆಂಗಳೂರು: ಯಡಿಯೂರಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿರುವುದು ಖಂಡನೀಯ. ಯಾರ ನಿವಾಸದ ಮೇಲೂ ದಾಳಿ ನಡೆಯಬಾರದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಬೊಮ್ಮಾಯಿ ಆಧುನಿಕ ಶಕುನಿ.. ಬೆಂಗಳೂರು ಹೊರವಲಯದಲ್ಲಿ ಇಂದು ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ದ್ವೇಷ ಹಾಗೂ ವಿಭಜನೆಯ ರಾಜಕೀಯ ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳಲ್ಲಿ ಅಶಾಂತಿಗೆ ಕಾರಣವಾಗಿದೆ. ಬಿಜೆಪಿ ಹಾಗೂ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಆಧುನಿಕ ಶಕುನಿಯಾಗಿದ್ದಾರೆ. ಮಹಾಭಾರತದ ಕಾಲದಲ್ಲಿ ಶಕುನಿ ವಿಭಜನೆ ಮಾಡಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದ. ಹೀಗಾಗಿ ಬೊಮ್ಮಾಯಿ ಅವರು ಆಧುನಿಕ ಶಕುನಿಯಾಗಿದ್ದಾರೆ ಎಂದು ಆರೋಪಿಸಿದರು.

ಪರಿಶಿಷ್ಟರಿಗೆ ಮಾಡುವ ಮೋಸವಲ್ಲವೇ?-ಸುರ್ಜೇವಾಲಾ: ಇವರು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳನ್ನು ವಿಭಜನೆ ಮಾಡುತ್ತಿದ್ದಾರೆ. ಮೀಸಲಾತಿ ಪ್ರಮಾಣದ ಮಿತಿ ಶೇ. 50ರಷ್ಟು ಇರುವಾಗ ಬಿಜೆಪಿಯವರು ಶೇ. 56ರಷ್ಟು ಮೀಸಲಾತಿಯನ್ನು ಹೇಗೆ ಜಾರಿ ಮಾಡಲಿದ್ದಾರೆ?. ಈ ವಿಚಾರದಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯವನ್ನು ಮೂರ್ಖರನ್ನಾಗಿಸುತ್ತಿರುವುದೇಕೆ? ಅವರು ಮೀಸಲಾತಿ ಹೆಚ್ಚಳದ ಕಾನೂನನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ಹೇಗೆ ಜಾರಿ ಮಾಡಲಿದ್ದಾರೆ?. ಇದು ಪರಿಶಿಷ್ಟರಿಗೆ ಮಾಡುವ ಮೋಸವಲ್ಲವೇ? ಎಂದಿದ್ದಾರೆ.

ಮೋದಿ ಅವರ ಸರ್ಕಾರ ಡಿ. 20, 2022 ಹಾಗೂ ಮಾರ್ಚ್ 14, 2023ರಂದು ಸಂಸತ್ತಿನಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಳವನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಹಾಗಿದ್ದರೆ ಇದನ್ನು ಯಾರು ಜಾರಿ ಮಾಡಲಿದ್ದಾರೆ?. ಮೋದಿ ಅವರು ಈ ಪರಿಶಿಷ್ಟರ ಮೀಸಲಾತಿ ವಿಚಾರವಾಗಿ ಯಾಕೆ ಉತ್ತರ ನೀಡುತ್ತಿಲ್ಲ?. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ವಿಚಾರವಾಗಿ ತಂದಿರುವ ಕಾನೂನನ್ನು ಸಂವಿಧಾನದ 9ನೇ ಶೆಡ್ಯುಲ್​ನಲ್ಲಿ ಸೇರಿಸಬೇಕು ಹಾಗೂ ಮೀಸಲಾತಿ ಮಿತಿಯನ್ನು ಶೇ. 50ರಿಂದ ವಿಸ್ತರಣೆ ಮಾಡಬೇಕು.

ಆಯೋಗದ ವರದಿ ಪಡೆಯದೆ ಮೀಸಲಾತಿ ಹೆಚ್ಚಳ- ಸುರ್ಜೇವಾಲಾ ಆರೋಪ: ಈ ಸರ್ಕಾರ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನ ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಮಾಡುತ್ತಿದೆ. ಅವರು 90 ದಿನಗಳ ಅಂತರದಲ್ಲಿ 3 ಬಾರಿ ಮೀಸಲಾತಿ ವರ್ಗೀಕರಣ ಬದಲಿಸಿದ್ದಾರೆ. ಈ ಸರ್ಕಾರ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸದೇ ಪೂರಕವಾದ ಅಂಕಿಅಂಶಗಳು ಇಲ್ಲದೆ, ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿ ಪಡೆಯದೇ ಮೀಸಲಾತಿ ಹೆಚ್ಚಳ ಮಾಡಿದ್ದು, ಈ ಮೀಸಲಾತಿ ತೀರ್ಮಾನಗಳು ಹೇಗೆ ಜಾರಿಗೆ ಬರಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಜನರನ್ನು ಎತ್ತಿಕಟ್ಟಿ ಹಗರಣ ಮುಚ್ಚಿಹಾಕುವ ಯತ್ನ- ಸುರ್ಜೇವಾಲಾ: ಈ ಸರ್ಕಾರ ಎಲ್ಲ ವರ್ಗಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಿದೆ. ಒಕ್ಕಲಿಗ ಹಾಗೂ ಲಿಂಗಾಯತರನ್ನು ಮುಸ್ಲಿಂರ ವಿರುದ್ಧ ಎತ್ತಿ ಕಟ್ಟುವುದು, ಪರಿಶಿಷ್ಟ ಸಮುದಾಯಗಳ ನಡುವೆ ಪರಸ್ಪರ ಕಚ್ಚಾಟ ತರುವುದು. ಈ ಸರ್ಕಾರದ ಪ್ರಯತ್ನವಾಗಿದೆ. ಆ ಮೂಲಕ ಈ 40% ಸರ್ಕಾರದ ಹಗರಣಗಳನ್ನು ಮುಚ್ಚಿಹಾಕುವುದು ಸರ್ಕಾರದ ಕಾರ್ಯತಂತ್ರವಾಗಿದೆ ಎಂದು ಅವರು ಆರೋಪಿಸಿದರು.

ರಾಜಕೀಯ ಲಾಭಕ್ಕಾಗಿ ಬಿಎಸ್​ವೈ ಮನೆ ಮೇಲೆ ದಾಳಿ- ಸುರ್ಜೇವಾಲಾ: ಕೊನೆಯದಾಗಿ ಕೇಳುವ ಪ್ರಶ್ನೆ ಎಂದರೆ ಈ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಮನೆ ಮುತ್ತಿಗೆ ಹಾಕುವ ಬದಲು ಯಡಿಯೂರಪ್ಪ ಅವರ ಮನೆ ಮುತ್ತಿಗೆ ಹಾಕುತ್ತಿರುವುದೇಕೆ? ಯಡಿಯೂರಪ್ಪ ಅವರು ಯಾವುದೇ ಹುದ್ದೆಯಲ್ಲಿ ಇಲ್ಲ. ಅವರು ಬಿಜೆಪಿ ಪ್ರಚಾರ ಸಮಿತಿಯಲ್ಲೂ ಸ್ಥಾನ ಪಡೆದಿಲ್ಲ. ಬಿಜೆಪಿಯ ಬೇರೊಬ್ಬರು ಯಡಿಯೂರಪ್ಪ ಅವರನ್ನು ಗುರಿಯಾಗಿಸಲು ಅವರ ಮನೆ ಮುತ್ತಿಗೆ ಹಾಕಲು ಕಳುಹಿಸುತ್ತಿದ್ದಾರೆ. ಇದು ಬಿಜೆಪಿಯ ಆಂತರಿಕ ಸಮಸ್ಯೆ. ರಾಜಕೀಯ ಲಾಭಕ್ಕಾಗಿ ಈ ಸಂಘರ್ಷವನ್ನು ಹೊತ್ತಿಸಲಾಗುತ್ತಿದೆ. ಜನರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸುರ್ಜೇವಾಲಾ ಹೇಳಿದರು.

ತಿರುಪತಿ ಮೇಲೆ ಕೇಂದ್ರ ಸರ್ಕಾರದಿಂದ ದಾಳಿ- ಕಾಂಗ್ರೆಸ್​ ಉಸ್ತುವಾರಿ: ದೇಶದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಇತಿಹಾಸದಲ್ಲಿ ಇಂದು ಅತ್ಯಂತ ಶೋಕದ ದಿನವಾಗಿದೆ. ಮೋದಿ ಅವರ ಸರ್ಕಾರ ಹಾಗೂ ಬಿಜೆಪಿ ವಿಶ್ವದ ಅತ್ಯಂತ ದೊಡ್ಡ ದೇವಾಲಯ ತಿರುಪತಿ ಮೇಲೆ ದಾಳಿ ಮಾಡಿಸಿದೆ. ವಿಶ್ವದಾದ್ಯಂತ ಬರುವ ಭಕ್ತರು ದೇವಾಲಯದ ಹುಂಡಿಗೆ ಹಾಕುವ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವಂತಿಲ್ಲ. ಇದು ದೇಶದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಡೆದಿರುವ ಅತ್ಯಂತ ಕ್ರೌರ್ಯ ನಡೆಯಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.

ಇತಿಹಾಸದಲ್ಲಿ ಯಾರೊಬ್ಬರು ಇಂತಹ ದುಸ್ಸಾಹಸಕ್ಕೆ ಮುಂದಾಗಿರಲಿಲ್ಲ. ಭಕ್ತರು ಹುಂಡಿಗೆ ಹಾಕಿರುವ ದುಡ್ಡಿಗೆ 3.10 ಕೋಟಿ ದಂಡ ವಿಧಿಸಲು ಹೇಗೆ ಸಾಧ್ಯ ಎಂದು ಮೋದಿ, ಅಮಿತ್ ಶಾ ಹಾಗೂ ಬಿಜೆಪಿ ಉತ್ತರಿಸಬೇಕು. ತಿರುಪತಿ ದೇವಾಲಯಕ್ಕೆ ನೀಡಲಾಗಿದ್ದ FCRA ಅನುಮತಿಯನ್ನು ಬಿಜೆಪಿ ಸರ್ಕಾರ ಹಿಂಪಡೆಯಲು ಹೇಗೆ ಸಾಧ್ಯ?. ತಿರುಪತಿ ದೇವಾಲಯಕ್ಕೆ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಾರೆ. ಹಿಂದೂಗಳು ಸೇರಿದಂತೆ ಎಲ್ಲ ಧರ್ಮದವರು ಈ ದೇವಾಲಯಕ್ಕೆ ಭೇಟಿ ನೀಡಿ ವಿಷ್ಣುವಿಗೆ ನಮಿಸುತ್ತಾರೆ ಎಂದರು.

ಭಕ್ತರ ಹಣಕ್ಕೆ ದಂಡ ವಿಧಿಸಿರುವುದೇಕೆ?-ಸುರ್ಜೇವಾಲಾ: ಆದರೆ ಮೋದಿ ಸರ್ಕಾರ 20 ಸಾವಿರ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಅದಾನಿ ಅವರನ್ನು ಬಿಟ್ಟು, ಭಕ್ತರು ಹುಂಡಿಗೆ ಹಾಕಿರುವ 28 ಕೋಟಿ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಅವಕಾಶ ನೀಡುತ್ತಿಲ್ಲ ಯಾಕೆ?. ಭಕ್ತರು ಕೊಟ್ಟಿರುವ ದೇಣಿಗೆಗೆ ಸರ್ಕಾರ ದೇವಾಲಯಕ್ಕೆ 3.10 ಕೋಟಿ ದಂಡ ವಿಧಿಸಿರುವುದೇಕೆ? ಇದು ತಿರುಪತಿ ದೇವಾಲಯ ಮಾತ್ರವಲ್ಲ, ದೇಶದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಮೇಲಿನ ದಾಳಿಯಾಗಿದೆ ಎಂದು ಕಿಡಿಕಾರಿದರು.

ಇದೇ ಬಿಜೆಪಿಯವರು ರಾಮ ದೇವಾಲಯ ನಿರ್ಮಾಣದ ಹೆಸರಲ್ಲಿ ಚಂದಾ ಸಂಗ್ರಹಿಸಿ ಅದನ್ನು ಲೂಟಿ ಮಾಡಿರುವ ಆರೋಪ ಹೊತ್ತಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರಿಗೆ ಗೊತ್ತಿಲ್ಲವೇ? ಬಿಜೆಪಿಯ ಈ ದುರ್ನಡತೆಗೆ ಕ್ಷಮೆ ಇರುವುದಿಲ್ಲ. ಮೋದಿ, ಅಮಿತ್ ಶಾ, ಬಸವರಾಜ ಬೊಮ್ಮಾಯಿ ಅವರು ಈ ದಾಳಿಯ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.

ಇದನ್ನೂ ಓದಿ : ತಪ್ಪು ಗ್ರಹಿಕೆಯಿಂದ ನಮ್ಮ ಮನೆ ಮೇಲೆ ಕಲ್ಲು ತೂರಾಟ, ಯಾರ ಮೇಲೂ ಕ್ರಮ ಬೇಡ: ಬಿಎಸ್​ವೈ

Last Updated : Mar 27, 2023, 10:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.