ETV Bharat / state

ಡಿಕೆಶಿ ಹಾಗೂ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವೈಯಕ್ತಿಕ ದ್ವೇಷ ಹಾಗೂ ಹಗೆತನ ತೋರುತ್ತಿದ್ದಾರೆ: ರಮೇಶ್ ಬಾಬು

author img

By

Published : Jan 31, 2023, 4:33 PM IST

ಡಿಕೆಶಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ರಮೇಶ್​​ ಜಾರಕಿಹೊಳಿ ಆರೋಪ - ವೈಯಕ್ತಿಕ ದ್ವೇಷ ಮತ್ತು ಹಗೆತನದ ​ಆರೋಪ ಎಂದ ಕೆಪಿಸಿಸಿ ಮಾಧ್ಯಮ ವಿಭಾಗ ಉಪಾಧ್ಯಕ್ಷ ರಮೇಶ್ ಬಾಬು - ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಿಜೆಪಿ ನಾಯಕರ ಸಂಚು ಆರೋಪ

ramesh-jarakiholi-shows-personal-enmity-against-dk-shivakumar-and-lakshmi-hebbalkar
ಡಿಕೆಶಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವೈಯಕ್ತಿಕ ದ್ವೇಷ ಹಾಗೂ ಹಗೆತನ ತೋರುತ್ತಿದ್ದಾರೆ: ರಮೇಶ್ ಬಾಬು

ಡಿಕೆಶಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವೈಯಕ್ತಿಕ ದ್ವೇಷ ಹಾಗೂ ಹಗೆತನ ತೋರುತ್ತಿದ್ದಾರೆ: ರಮೇಶ್ ಬಾಬು

ಬೆಂಗಳೂರು: ಚುನಾವಣೆ ಸಮೀಪಿಸಿರುವ ಸಂದರ್ಭದಲ್ಲಿ ತಮ್ಮ ನಾಯಕರ ಜತೆ ಷಡ್ಯಂತ್ರ ರೂಪಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅಭಿಪ್ರಾಯಪಟ್ಟರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಿನ್ನೆಯ ಮಾಧ್ಯಮಗೋಷ್ಟಿಯಲ್ಲಿ ರಮೇಶ್ ಜಾರಕಿಹೊಳಿ ಅವರು ಕೇವಲ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಕೀಳುಮಟ್ಟದ ಆರೋಪಗಳನ್ನು ಮಾಡಿದ್ದಾರೆ ಎಂದರು.

ರಮೇಶ್​ ಜಾರಕಿಹೊಳಿ ಅವರು ತಮ್ಮ ಮಾಧ್ಯಮಗೋಷ್ಟಿಯಲ್ಲಿ ಶಿವಕುಮಾರ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೇಲೆ ಇರುವ ವೈಯಕ್ತಿಕ ದ್ವೇಷ, ಹಗೆತನವನ್ನು ತೋರಿಸಿದ್ದಾರೆ. ಅವರ ಮಾಧ್ಯಮಗೋಷ್ಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬೊಮ್ಮಾಯಿ, ಹಾಗೂ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಧಾರವಾಡದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು, ಈ ಪ್ರಕರಣದ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ರಮೇಶ್​ ಜಾರಕಿಹೊಳಿಗೆ ಸಿಡಿ ಪ್ರಕರಣದಲ್ಲಿ ಇಲ್ಲಿಯವರೆಗೆ ಕ್ಲೀನ್ ಚಿಟ್ ದೊರೆತಿಲ್ಲ : 'ಈ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಯ ಅವರು ಸಾರ್ವಜನಿಕ ಒತ್ತಡಕ್ಕೆ ಮಣಿದು ಮಾರ್ಚ್ 2021 ರಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುತ್ತಾರೆ. ಅಚ್ಚರಿ ವಿಚಾರ ಎಂದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ವಿಚಾರವಾಗಿ ಎಸ್ಐಟಿ ನೀಡಿರುವ ವರದಿ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದ್ದು, ಸಿಡಿ ಪ್ರಕರಣದಲ್ಲಿ ಇಲ್ಲಿಯವರೆಗೆ ಕ್ಲೀನ್ ಚಿಟ್ ದೊರೆತಿಲ್ಲ. ಈ ವಿಚಾರವಾಗಿ ಅವರು ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ನೀಡದೇ ಈಗ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಕೋರುವುದಾಗಿ ಹೇಳಿರುವ ಜಾರಕಿಹೊಳಿರವರ ಹೇಳಿಕೆ ಅನೇಕ ಅನುಮಾನಗಳಿಗೆ ಅವಕಾಶ ನೀಡಿದೆ. ತಾವು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದಾಗಿ ಹೇಳಿರುವುದು ಅನೇಕ ಅನುಮಾನಗಳನ್ನು ಹುಟ್ಟಿಹಾಕಿದೆ. ಬಿಜೆಪಿ ಈ ತನಿಖಾ ಸಂಸ್ಥೆಗಳನ್ನು ತನ್ನ ಅಂಗ ಸಂಸ್ಥೆಗಳಂತೆ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ಪ್ರಕರಣವನ್ನು ಸಿಬಿಐಗೆ ನೀಡಲು ಒತ್ತಾಯಿಸಲಾಗುತ್ತಿದೆ' ಎಂದರು.

ಬಿಜೆಪಿಗೆ ಸಿಡಿ ಅಂಟು ರೋಗ ಬಡಿದಿದೆ : ಈ ಹಿಂದೆ ಜೆಡಿಎಸ್ ಬಿಜೆಪಿ ಮೈತ್ರಿ ಸರ್ಕಾರದ ಸಮಯದಲ್ಲಿ ಬಿಜೆಪಿಯಲ್ಲಿದ್ದ ಜನಾರ್ದನ ರೆಡ್ಡಿ ಅವರು ಆಗಿನ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಸಿಡಿ ಆರೋಪ ಮಾಡಿದಾಗ, ನಂತರ ಯಾವುದೇ ಸಿಡಿ ಬಿಡುಗಡೆ ಮಾಡಲಿಲ್ಲ. ಅಂದು ಆರಂಭವಾದ ಬಿಜೆಪಿಯ ಸಿಡಿ ಅಂಟು ರೋಗ, ಈಗ ಎಲ್ಲ ಹಂತಗಳಲ್ಲಿ ಮುಂದುವರಿಸುತ್ತಿದ್ದಾರೆ. ಪ್ರಾರಂಭದಲ್ಲಿ ಇವರ ಸಿಡಿ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ಈಗ ಇವರನ್ನು ಸಮರ್ಥನೆ ಮಾಡಿಕೊಳ್ಳುವುದರ ಮೂಲಕ ತನ್ನ ನಿಜ ಬಣ್ಣವನ್ನು ಬಯಲು ಮಾಡಿದೆ ಮತ್ತು ಷಡ್ಯಂತ್ರದ ಭಾಗವಾಗಿ ಕೆಪಿಸಿಸಿ ಅಧ್ಯಕ್ಷರ ಮೇಲೆ ಅಪಪ್ರಚಾರ ಮಾಡಲು ಮುಂದಾಗಿರುತ್ತದೆ. ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಸಂಬಂಧ ಮುಖ್ಯಮಂತ್ರಿಗಳ ಹೆಸರನ್ನೂ ಇವರು ಬಳಸಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿಗಳು ಈ ಷಡ್ಯಂತ್ರದಲ್ಲಿ ಭಾಗಿಯಾಗಿರುವ ಅನುಮಾನಗಳು ದಟ್ಟವಾಗುತ್ತಿವೆ. ಕರ್ನಾಟಕಕ್ಕೆ ಪ್ರಚಾರದ ಹೆಸರಿನಲ್ಲಿ ಎಡತಾಕುತ್ತಿರುವ ಕೇಂದ್ರ ಗೃಹಸಚಿವರು ಸಿಡಿ ಆರೋಪಿಗಳಿಗೆ ಬೆಂಬಲ ನೀಡುತ್ತಿರುವುದು ಇವರ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ ಎಂದು ರಮೇಶ್​ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಕೀಳು ಮಟ್ಟದ ಆರೋಪ ಸಲ್ಲ : ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಇಂದು ಶಾಸಕಿಯಾಗಿ ತಮ್ಮ ವೈಯಕ್ತಿಕ ಸಾಮರ್ಥ್ಯದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ ರಮೇಶ್ ಅವರು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೀಳು ಮಟ್ಟದ ಟೀಕೆಗೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಸಂತ್ರಸ್ತರು ದೂರು ನೀಡುತ್ತಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮಾಡದೇ, ಆರೋಪಿಯ ನಿರ್ದೇಶನದಂತೆ ಎಸ್ಐಟಿ ರಚಿಸಿ ತನಿಖೆ ಮಾಡಲಾಗಿದೆ. ಸಿಬಿಐ ತನಿಖೆ ಆಗಬೇಕು ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲವೇ ಅಥವಾ ಸಿಬಿಐ ಮೂಲಕ ಬೇರೆಯವರ ಮೇಲೆ ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿದ್ದಾರಾ? ಎಂದು ರಮೇಶ್​ ಬಾಬು ಪ್ರಶ್ನಿಸಿದರು.

ಜನರ ಹಾದಿ ತಪ್ಪಿಸುವ ವಿಚಾರ : 'ರಮೇಶ್ ಜಾರಕಿಹೊಳಿಯವರು ಮಾಧ್ಯಮಗಳ ಜೊತೆ ಮಾತನಾಡುವಾಗ ಬೆಂಗಳೂರಿನ ಶಾಂತಿನಗರ ಹೌಸಿಂಗ್‌ ಸೊಸೈಟಿ ವಿಚಾರವನ್ನು ಪ್ರಸ್ತಾಪ ಮಾಡಿರುತ್ತಾರೆ. ಇದು ಜನರನ್ನು ಹಾದಿ ತಪ್ಪಿಸುವ ಪ್ರಯತ್ನವಾಗಿದ್ದು, ಅಂದಿನ ಸಹಕಾರ ಸಚಿವರಾಗಿ ಅಕ್ರಮಗಳನ್ನು ಮುಚ್ಚಿಟ್ಟ ಕಾರಣಕ್ಕೆ ಇವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕಾಗಿರುತ್ತದೆ. ಸಹಕಾರ ಇಲಾಖೆಯ ಆದೇಶ ಸಂಖ್ಯೆ ಹೆಚ್‌ಎಸ್‌ 105/87-88 ದಿನಾಂಕ 10-03-1988ರ ಆದೇಶದ ಅನ್ವಯ ಕಲಂ 64ರ ಆಡಿಯಲ್ಲಿ ತನಿಖೆ ನಡೆಸಿರುವ ಆಂದಿನ ವಿಚಾರಣಾ ಅಧಿಕಾರಿಗಳು ಬೆಂಗಳೂರಿನ ಸುಮಾರು 98 ಹೌಸಿಂಗ್‌ ಸೊಸೈಟಿಗಳ ಸಂಬಂಧ ವರದಿಯನ್ನು ನೀಡಿರುತ್ತಾರೆ. ಇವುಗಳಲ್ಲಿ 45 ಸೊಸೈಟಿಗಳು ಗಂಭೀರ ಪ್ರಕರಣದಲ್ಲಿ 15 ಸೊಸೈಟಿಗಳು ಇತರ ಪ್ರಕರಣಗಳಲ್ಲಿ 26 ಸೊಸೈಟಿಗಳು ಸಾಮಾನ್ಯ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಇತರೆ ಸೊಸೈಟಿಗಳು ಮಾಹಿತಿ ನೀಡಿರುವುದಿಲ್ಲವೆಂದು ವರದಿ ಕೊಟ್ಟಿರುತ್ತಾರೆ.

1988ರ ಸಮಯದಲ್ಲಿ ಶಿವಕುಮಾರ್ ಅವರು ಶಾಸಕರೇ ಆಗಿರಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಈ ಸಹಕಾರ ಸಂಘಗಳ ಮೇಲೆ ಸರ್ಕಾರದ ವತಿಯಿಂದ ನಿರ್ದಿಷ್ಟ ಕಾನೂನು ಕ್ರಮ ಜರುಗಿರುವುದಿಲ್ಲ. ರಾಜ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇವುಗಳ ಮೇಲೆ ಕ್ರಮ ಕೈಗೊಳ್ಳದಿರುವ ಕುರಿತು ಸರ್ಕಾರ ಉತ್ತರಿಸಬೇಕಿದೆ. ಅಂದು ಈ ಪ್ರಕರಣವನ್ನು ಮುಚ್ಚಿಹಾಕಲು ಬಂದ ಒತ್ತಡಕ್ಕೆ ಮಣಿಯದಿದ್ದರೆ ಈ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಲಿಲ್ಲವೇಕೆ? ಈ ಪ್ರಕರಣವನ್ನು ಬಹಿರಂಗಪಡಿಸಲಿಲ್ಲವೇಕೆ? ಈ ಕುರಿತು ರಮೇಶ್ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಬೇಕು' ಎಂದು ಒತ್ತಾಯಿಸಿದರು.

ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಸಂಚು : ರಮೇಶ್ ಜಾರಕಿಹೊಳಿಯವರು ವೈಯಕ್ತಿಕ ದ್ವೇಷ ಮತ್ತು ಹತಾಶೆಯ ಕಾರಣಕ್ಕಾಗಿ ನಮ್ಮ ಪಕ್ಷದ ಅಧ್ಯಕ್ಷರ ಮೇಲೆ ಸಂಚಿನ ಭಾಗವಾಗಿ ಆರೋಪ ಮಾಡುತ್ತಿದ್ದಾರೆ. ಭಾರತೀಯ ಜನತಾ ಪಕ್ಷವು ತನ್ನ ಲಾಭಕ್ಕಾಗಿ ಇವರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದೆ. ಇವರ ಸಂಚಿನಲ್ಲಿ ಭಾಗಿಯಾಗಿರುವ ಕೇಂದ್ರ ಗೃಹ ಸಚಿವರು ಮತ್ತು ಬಿಜೆಪಿ ವ್ಯವಸ್ಥಿತವಾಗಿ ಸೆಕ್ಸ್ ಸಿಡಿ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಅತ್ಯಂತ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ. ಬಿಜೆಪಿ ಈ ಸಿಡಿಗಳ ವಿಚಾರವಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸುತ್ತೇವೆ ಎಂದು ರಮೇಶ್​ ಬಾಬು ಅಭಿಪ್ರಾಯಪಟ್ಟರು.

ಅವರಿಗೆ ಯಾವಾಗ ಜ್ಞಾನೋದಯ ಆಗುತ್ತದೆ ಗೊತ್ತಿಲ್ಲ : ರಮೇಶ್ ಜಾರಕಿಹೊಳಿ ಅವರನ್ನು ಸಹೋದರ ಲಕನ್ ಜಾರಕಿಹೊಳಿ ಅವರು ಸಮರ್ಥಿಸಿಕೊಂಡಿರುವುದರ ಬಗ್ಗೆ ಕೇಳಿದಾಗ, ‘ಅವರಿಗೆ ಯಾವಾಗ ಜ್ಞಾನೋದಯವಾಗುತ್ತದೆ ಎಂದು ಗೊತ್ತಿಲ್ಲ. 2019ರಲ್ಲಿ ಅವರು ಗೋಕಾಕ್ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾಗ ಯಾಕೆ ಈ ವಿಚಾರದ ಬಗ್ಗೆ ಮಾತನಾಡಲಿಲ್ಲ. ತಮ್ಮ ಸಹೋದರರ ಸಮರ್ಥನೆಗೆ ಇಲ್ಲಸಲ್ಲದ ಆರೋಪ ಮಾಡಬಾರದು’ ಎಂದರು. ಮಾಧ್ಯಮಗೋಷ್ಟಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳಾದ ಜಿ.ಸಿ. ರಾಜು, ದಿವಾಕರ್, ವಕ್ತಾರರಾದ ರಾಮಚಂದ್ರ ರೆಡ್ಡಿ, ಚಂದ್ರಶೇಖರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ : ಡಿಕೆಶಿ ನನ್ನ ಜೀವನ ಹಾಳು ಮಾಡಿದ್ದಾನೆ: ಸಿಡಿ ಪ್ರಕರಣ ಸಿಬಿಐಗೆ ನೀಡುವಂತೆ ಮನವಿ ಮಾಡ್ತೇನಿ: ರಮೇಶ್​ ಜಾರಕಿಹೊಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.