ETV Bharat / state

ಅಯೋಧ್ಯೆಯಲ್ಲಿ ನಡೆಯುತ್ತಿರುವುದು ಕಾಂಗ್ರೆಸ್ ಪಕ್ಷದ ಚುನಾವಣಾ ರ್‍ಯಾಲಿ ಅಲ್ಲ: ಪ್ರಹ್ಲಾದ ಜೋಶಿ

author img

By ETV Bharat Karnataka Team

Published : Jan 11, 2024, 3:13 PM IST

ಅಯೋಧ್ಯೆಯಲ್ಲಿ ನಡೆಯುತ್ತಿರುವುದು ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರ್‍ಯಾಲಿ ಅಲ್ಲ ಎಂದು ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.

ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ

ಬೆಂಗಳೂರು : ಅಯೋಧ್ಯೆಯಲ್ಲಿ ನಡೆಯುತ್ತಿರುವುದು 140 ಕೋಟಿ ಭಾರತೀಯರ ಅಸ್ಮಿತೆ, ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯೇ ಹೊರತು, ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರ್‍ಯಾಲಿ ಅಲ್ಲ ಎಂದು ರಾಮ ಮಂದಿರ ಉದ್ಘಾಟನೆ ಆಮಂತ್ರಣ ತಿರಸ್ಕರಿಸಿದ ಕಾಂಗ್ರೆಸ್​ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.

  • ಮುಖ್ಯಮಂತ್ರಿ ಸಿದ್ದರಾಮಯ್ಯನವರೇ,
    ಅಯೋಧ್ಯೆಯಲ್ಲಿ ರಾಜಕೀಯ ಮಾಡಲು, ಅಲ್ಲಿ ನಡೆಯುತ್ತಿರುವುದು 140 ಕೋಟಿ ಭಾರತೀಯರ ಅಸ್ಮಿತೆ ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಹೊರತು ವಿದೇಶಿ ವ್ಯಕ್ತಿಯೊಬ್ಬ ಸ್ಥಾಪಿಸಿದ ಕಾಂಗ್ರೆಸ್ ಪಕ್ಷದ ಚುನಾವಣಾ ರ‌್ಯಾಲಿ ಅಲ್ಲ.

    ಶ್ರೀರಾಮನ ಮೇಲೆ ನಂಬಿಕೆ ಭಕ್ತಿ ಶ್ರದ್ಧೆ ಇದ್ದವರು ಖಂಡಿತವಾಗಿಯೂ ಯಾವುದೇ… https://t.co/JTRsCk8LyG

    — Pralhad Joshi (@JoshiPralhad) January 11, 2024 " class="align-text-top noRightClick twitterSection" data=" ">

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಜೋಶಿ, ಕಾಂಗ್ರೆಸ್​ನವರು ರಾಮಮಂದಿರ ಉದ್ಘಾಟನೆ ಆಮಂತ್ರಣ ತಿರಸ್ಕರಿಸುವ ಮೊದಲೇ ದೇಶದ ಜನ ಮತ್ತು ರಾಮ ಭಕ್ತರು ಕಾಂಗ್ರೆಸ್ ಅನ್ನು ತಿರಸ್ಕರಿಸಿ ಆಗಿದೆ. ಶ್ರೀರಾಮನ ಮೇಲೆ ನಂಬಿಕೆ, ಭಕ್ತಿ, ಶ್ರದ್ಧೆ ಇದ್ದವರು ಖಂಡಿತವಾಗಿಯೂ ಯಾವುದೇ ರಾಜಕೀಯ ಮಾಡದೇ ಮಂದಿರಕ್ಕೆ ಭೇಟಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ನೀವು ನಿಮ್ಮ ಆಡಳಿತ ವೈಫಲ್ಯ ಮರೆಮಾಚಲು ಇಂತಹ ವಿಚಾರ ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತಿದ್ದೀರಿ. ಇಂಥ ರಾಜಕೀಯವನ್ನು ತಾವು ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ ಜೋಶಿ, ರಾಜ್ಯ ಮಾತ್ರವಲ್ಲ ಇಡೀ ದೇಶದ ಜನತೆಗೆ ಇದು ಅರ್ಥವಾಗಿದೆ. ಕರ್ನಾಟಕದಲ್ಲಿ ನಿಮ್ಮ "ಸುಳ್ಳಿನ ಸರ್ಕಾರ ಎತ್ತ ಸಾಗುತ್ತಿದೆ" ಎಂಬುದು ಜನರಿಗೆ ಈಗ ಗೊತ್ತಾಗಿದೆ ಎಂದರು.

ರಾಮ ಈ ದೇಶದ ಸಂಸ್ಕೃತಿ. ರಾಮನಿಗಾಗಿ ಅಳಿಲು ಸೇವೆಯೂ ಕಾಂಗ್ರೆಸ್​ನವರಿಂದ ಆಗಿಲ್ಲ.‌ ಹೀಗಿರುವಾಗ ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್​ನವರು ಯಾವ ಮುಖ ಇಟ್ಕೊಂಡು ಬರುತ್ತಾರೆ?. ಅದಕ್ಕಾಗಿ ಈ ರೀತಿ ಆಮಂತ್ರಣ ತಿರಸ್ಕರಿಸಿದ ಪ್ರಹಸನ ಮಾಡುತ್ತಿದ್ದಾರೆ. ಇವರಿಗಿಂತ ಮೊದಲು ರಾಮ ಭಕ್ತರು ಇವರನ್ನ ತಿರಸ್ಕರಿಸಿ ಆಗಿದೆ. ಧಾರ್ಮಿಕವಾಗಿ ಅಲ್ಲದಿದ್ದರೂ, ರಾಮನನ್ನ ನಮ್ಮ ಸಾಂಸ್ಕೃತಿಕ ದೃಷ್ಠಿಯಿಂದ ನೋಡುವ ಮುಸ್ಲಿಂ, ಕ್ರಿಶ್ಚಿಯನ್ ಅನ್ಯ ಧರ್ಮದವರು ಕಾಂಗ್ರೆಸ್ ಅನ್ನ ತಿರಸ್ಕರಿಸುವ ಕಾಲ ಸನ್ನಿಹಿತದಲ್ಲಿದೆ ಎಂದು ಇದೇ ವೇಳೆ ಕೇಂದ್ರ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್​​​ನ ಜಾತ್ಯತೀತತೆ ಬಣ್ಣ ಬಯಲು- ಕೋಟ ಶ್ರೀನಿವಾಸ್​ : ಭಾರತ ದೇಶದಲ್ಲಿ ಇಲ್ಲಿಯವರೆಗೆ ಜಾತ್ಯತೀತತೆಯ ಮುಖವಾಡ ಹಾಕಿದ್ದ ಕಾಂಗ್ರೆಸ್ ಬಣ್ಣ ಬಯಲಾಗಿದೆ ಎಂದು ರಾಜ್ಯ ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಿಶ್ಲೇಷಿಸಿದರು.

ನಗರದ ಹೋಟೆಲ್ ರಮಾಡದಲ್ಲಿ ಬಿಜೆಪಿ ಲೋಕಸಭಾ ಚುನಾವಣೆ 2024ರ ಸಿದ್ಧತಾ ಸಭೆಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇಲ್ಲಿವರೆಗೂ ಕಾಂಗ್ರೆಸ್ಸಿಗರು ತಾವು ಜಾತ್ಯತೀತರು, ಜಾತ್ಯತೀತರು ಎನ್ನುತ್ತಿದ್ದರು. ಶ್ರೀರಾಮಮಂದಿರದ ಆಹ್ವಾನಪತ್ರ ತಿರಸ್ಕರಿಸುವ ಮೂಲಕ ಅದು ಮತೀಯವಾದ ರಾಜಕೀಯ ಪಕ್ಷ ಎಂಬುದಕ್ಕೆ ಸ್ಪಷ್ಟ ನಿದರ್ಶನ ಲಭಿಸಿದೆ ಎಂದರು.

ಶ್ರೀರಾಮಮಂದಿರವನ್ನು ಸುಪ್ರೀಂ ಕೋರ್ಟಿನ ತೀರ್ಪಿನಡಿ ನಿರ್ಮಿಸಲಾಗಿದೆ. ಭಕ್ತಾದಿಗಳೇ ದೇಣಿಗೆ ಹಾಕಿ ನಿರ್ಮಾಣ ಕಾರ್ಯ ನಡೆದಿದೆ. ಇದೊಂದು ಅದ್ಭುತ ದೇವಸ್ಥಾನ. ಈ ಐತಿಹಾಸಿಕ ವಿಚಾರದಲ್ಲಿ ಶ್ರೀರಾಮ ಮಂದಿರಕ್ಕೆ ಬಂದು ಭಾಗವಹಿಸುವುದನ್ನು ಬಿಟ್ಟು ಅದನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿನವರು ರಾಮನೇ ಕಾಲ್ಪನಿಕ ಎಂದು ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದರು. ನಂತರ ರಾಮಮಂದಿರದ ಶಿಲಾನ್ಯಾಸದ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸಿ ಬಂದರು. ಅವೆಲ್ಲವನ್ನೂ ಮರೆತು ಹಿಂದೂಗಳು ಅವರ ಬಗ್ಗೆ ಸಹಾನುಭೂತಿಯಿಂದ ಇದ್ದರೆ ಇವತ್ತು ಶ್ರೀರಾಮಮಂದಿರದ ಉದ್ಘಾಟನಾ ಸಮಾರಂಭ ಬಹಿಷ್ಕರಿಸಿದ್ದರಿಂದ ಕಾಂಗ್ರೆಸ್ ಪಕ್ಷ ಒಂದು ಮತಕ್ಕೆ ಸೀಮಿತ ಎಂದು ಜಗಜ್ಜಾಹೀರಾಗಿದೆ ಎಂದರು.

ಕಾಂಗ್ರೆಸ್ ನಿಲುವು ಅತ್ಯಂತ ಖಂಡನೀಯ. ಇದರ ಫಲಿತಾಂಶವನ್ನು ಮತ್ತು ಫಲವನ್ನು ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಣ್ಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಮಮಂದಿರ ವಿಷಯದಲ್ಲಿ ಸಿದ್ದರಾಮಯ್ಯರು ಹೊರತುಪಡಿಸಿ ಬೇರೆಲ್ಲರೂ ಒಟ್ಟಾಗಿದ್ದಾರೆ. ಅವರಿಗೆ ಯಾವ ಆತಂಕವೂ ಬೇಡ ಎಂದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸದಿರುವ ಕಾಂಗ್ರೆಸ್‌ ನಾಯಕರ ನಿರ್ಧಾರಕ್ಕೆ ಸಿದ್ದರಾಮಯ್ಯ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.