ETV Bharat / state

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ರಾಜ್ಯ ಕಟಿಕ ಸಮಾಜದ ನಿಯೋಗ: ಎಸ್ಸಿ ವರ್ಗಕ್ಕೆ ಸೇರಿಸುವಂತೆ ಮನವಿ

author img

By ETV Bharat Karnataka Team

Published : Sep 29, 2023, 3:46 PM IST

ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಕಟಿಕ ಸಮಾಜ ಸೇರಿಸಲ್ಪಟ್ಟಿದೆ. ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿಯೂ ಸಹ ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಿದೆ. ಕರ್ನಾಟಕದಲ್ಲಿ ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಸಮಾಜದ ಮುಖಂಡರು ಮನವರಿಕೆ ಮಾಡಿದರು.

Rajya Katika Samaj delegation visit CM Siddaramaiah
ರಾಜ್ಯ ಕಟಿಕ ಸಮಾಜದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು.

ಬೆಂಗಳೂರು: ರಾಜ್ಯ ಕಟಿಕ ಸಮಾಜದ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಸಮಾಜವನ್ನು ಎಸ್​​ಸಿಗೆ ಸೇರ್ಪಡೆಗೊಳಿಸಬೇಕೆಂದು ಮನವಿ ಮಾಡಿತು. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾದ ಕಟಿಕ ಸಮಾಜದ ನಿಯೋಗ, ತಮ್ಮ ಸಮುದಾಯದ ಹಲವು ಬೇಡಿಕೆಗಳನ್ನು ಮುಂದಿಟ್ಟು ಮಾತುಕತೆ ನಡೆಸಿತು. ಕಟುಕ, ಕಟಿಕ ಮತ್ತಿತರ ಹೆಸರುಗಳಿಂದ ಕರೆಯಲ್ಪಡುವ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ನಿಯೋಗ ಒತ್ತಾಯ ಮಾಡಿತು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

ವಿವಿಧ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಸೇರ್ಪಡೆ: ಕುರಿ, ಮೇಕೆ ಮಾಂಸ ಕಡಿಯುವುದು ಸಮಾಜದ ಕಸುಬು. ಹೀಗಾಗಿ ಕಟುಕ ಎನ್ನುವ ಹೆಸರು ಸಮಾಜಕ್ಕೆ ಅಂಟಿಕೊಂಡಿದ್ದು, ಸಾಮಾಜಿಕವಾಗಿ ಬಹಳ ಹಿಂದುಳಿದಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಕಟಿಕ ಸಮಾಜ ಸೇರಿಸಲ್ಪಟ್ಟಿದೆ. ದೆಹಲಿ, ರಾಜಸ್ತಾನ, ಉತ್ತರ ಪ್ರದೇಶ,ಮಹಾರಾಷ್ಟ್ರದಲ್ಲಿಯೂ ಪರಿಶಿಷ್ಟ ಜಾತಿಗೆ ಸೇರಲ್ಪಟ್ಟಿದೆ. 2012 ರಲ್ಲಿ ಕುಲಶಾಸ್ತ್ರೀಯ ಅಧ್ಯಯನದಲ್ಲಿಯೂ ಸಮುದಾಯದ ಕುರಿತು ಸ್ಪಷ್ಟವಾಗಿ ನಮೂದಾಗಿದೆ. ಕರ್ನಾಟಕದಲ್ಲಿಯೂ ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಶಿಫಾರಸು ಮಾಡಬೇಕು ಎಂದು ಸಮಾಜದ ಮುಖಂಡರು ಮನವರಿಕೆ ಮಾಡಿದರು.

ಕಟಿಕ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಕಟಿಕ ಸಮಾಜದ ಮುಖಂಡರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್.ಕೆ. ಸಿದ್ರಾಮಣ್ಣ ಮನವಿ ಮಾಡಿದರು. ಮಾಜಿ ಶಾಸಕ ಹೆಚ್.ಎಂ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಉಪಸ್ಥಿತರಿದ್ದರು.

ಮಾವುತರು ಕಾವಾಡಿಗರಿಗೆ ಉಪಹಾರ ಬಡಿಸಿದ ಸಚಿವರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅರಮನೆಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗರ ಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಬೆಳಗಿನ ಉಪಹಾರ ಬಡಿಸಿದರು.

ಉಪಹಾರ ಸೇವಿಸಿದ ಬಳಿಕ ದಸರಾ ಗಜಪಡೆ ಪೋಷಣೆ ಮಾಡುತ್ತಿರುವ ಮಾವುತರು ಹಾಗೂ ಕಾವಾಡಿಗರ ಯೋಗಕ್ಷೇಮ ವಿಚಾರಿಸಿದರು. ''ಕಾಡಿನ ಸಂಪತ್ತೇ ನಾಡಿನ ಸಂಪತ್ತು. ಕಾಡಿನ ಸಂರಕ್ಷಕರಾದ ನೀವು, ಅರಣ್ಯ ಸಂಪತ್ತಿನ ಭಾಗವೇ ಆಗಿದ್ದೀರಿ. ನಿಮಗೆ ಅಗತ್ಯ ಇರುವ ಮೂಲ ಸೌಕರ್ಯವನ್ನು ಸರ್ಕಾರದಿಂದ ಒದಗಿಸಿಕೊಡಲಾವುದು'' ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಮೈಸೂರು ಅರಮನೆ ಮಂಡಳಿ ಹಾಗೂ ಅಪೋಲೋ ಬಿಜಿಎಸ್ ಆಸ್ಪತ್ರೆ ಸಹಭಾಗಿತ್ವದಲ್ಲಿ ಮಾವುತರು ಮತ್ತು ಕಾವಾಡಿಗರ ಕುಟುಂಬದವರಿಗೆ ಆಯೋಜಿಸಿದ್ದ ಉಚಿತ ತಪಾಸಣೆ ಶಿಬಿರಕ್ಕೆ ಸಚಿವರು ಚಾಲನೆ ನೀಡಿದರು.

ಇದನ್ನೂಓದಿ:ಶಕ್ತಿಸೌಧಕ್ಕೆ ತಟ್ಟಿದ ಕರ್ನಾಟಕ ಬಂದ್ ಬಿಸಿ: ಪ್ರತಿಭಟನೆಗೆ ಬೆಂಬಲ ಸೂಚಿಸಿದ 89ರ ವೃದ್ಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.