ETV Bharat / state

ರಾಜ್ಯದಲ್ಲಿ ಹಿಂಗಾರು ಮಳೆ ಚುರುಕು: 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

author img

By ETV Bharat Karnataka Team

Published : Nov 8, 2023, 5:57 PM IST

Updated : Nov 8, 2023, 8:40 PM IST

Rain Yellow Alert: ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆ ಮುಂದಿನ 24 ಗಂಟೆಗಳ ಕಾಲ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

rain-forecast-in-karnataka-yellow-alert-announced-for-13-districts
ರಾಜ್ಯದಲ್ಲಿ ಹಿಂಗಾರು ಮಳೆ ಚುರುಕು: 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, ಮುಂದಿನ 24 ಗಂಟೆಗಳ ಕಾಲ 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡ, ಉತ್ತರ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡಿನ ಕೆಲ ಭಾಗದಲ್ಲಿ ಸುಳಿಗಾಳಿ ಉಂಟಾಗಿದೆ. ಅದರ ಪರಿಣಾಮ ರಾಜ್ಯದಲ್ಲಿ ಇನ್ನೂ ಮೂರು ದಿನ ಹೆಚ್ಚಾಗಿ ಕರಾವಳಿ ಮತ್ತು ದಕ್ಷಿಣ ಒಳನಾಡಿಗೆ ಮಳೆಯಾಗಲಿದೆ. ಮುಂದಿನ ವಾರ ಬಹುತೇಕ ಹಿಂಗಾರು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಪ್ರಸಾದ್ ಅವರು ತಿಳಿಸಿದ್ದಾರೆ.

ನಗರದಲ್ಲಿ ಸಂಜೆ ಅಥವಾ ರಾತ್ರಿ ಮಳೆ: ಇನ್ನೆರಡು ದಿನ ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದ್ದು, ಸಂಜೆ ಅಥವಾ ರಾತ್ರಿಯ ವೇಳೆಯಲ್ಲಿ ಭಾರಿ ಮಳೆಯಾಗಲಿದೆ. ಕೆಲವು ಕಡೆಗಳಲ್ಲಿ ಬೆಳಗಿನಜಾವ ಮಂಜು ಮುಸುಕಿದ ವಾತಾವರಣ ಇರಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳಿವೆ ಎಂದಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ: ನಿನ್ನೆ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಅತಿ ಹೆಚ್ಚು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ 9 ಸೆಮೀ ಮಳೆಯಾಗಿದೆ. ಹಗರಿಬೊಮ್ಮನಹಳ್ಳಿಯಲ್ಲಿ 5, ಕದ್ರಾ, ಕ್ಯಾಸಲ್ ರಾಕ್, ಜೇವರ್ಗಿ, ಗುಂಡಗುರ್ತಿ, ಶಿವಮೊಗ್ಗದಲ್ಲಿ 4 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇತರೆಡೆ ಮಳೆ: ಅಂಕೋಲಾ, ಮಂಗಳೂರು ವಿಮಾನ ನಿಲ್ದಾಣ, ಕಮಲಾಪುರ, ಚಿತ್ತಾಪುರ, ಬೆಂಗಳೂರು ನಗರ, ಲಿಂಗನಮಕ್ಕಿ ಎಚ್‌ಎಂಎಸ್ ಮತ್ತು ಹೊಸದುರ್ಗದಲ್ಲಿ ತಲಾ 3 ಸೆಂ.ಮೀ; ಮಾನ್ವಿ, ಕೊಟ್ಟಿಗೆಹಾರ, ಯಗಟಿ, ಅಜ್ಜಂಪುರ ಮತ್ತು ಹರಪನಹಳ್ಳಿಯಲ್ಲಿ ತಲಾ 2 ಸೆಂ.ಮೀ ಹಾಗೂ ಶಿರಾಲಿ, ಸಿದ್ದಾಪುರ, ಪಣಂಬೂರು, ಮೂಡಬಿ, ಸೇಡಂ, ಅಡಕಿ, ಅಫಜಲಪುರ, ಶಿಗ್ಗಾವಿ, ಮುದ್ದೇಬಿಹಾಳ, ಕೊಣನೂರು, ತೊಂಡೇಭಾವಿ, ಮಡಿಕೇರಿ, ಹಾಸನ, ಕನಕಪುರ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಂಗಾರು ಮಳೆ ಎಫೆಕ್ಟ್​: ಪಾಲಿಕೆಯಿಂದ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ

Last Updated : Nov 8, 2023, 8:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.