TC ಕೇಳಿದಾಗ ಕೊಡದಿದ್ರೆ ಖಾಸಗಿ ಶಾಲೆಗಳಿಗೆ ಸಂಕಷ್ಟ ಖಚಿತ.. ಕಾನೂನು ಕ್ರಮಕ್ಕೆ ಶಿಕ್ಷಣ ಇಲಾಖೆ ಆದೇಶ

author img

By

Published : Nov 25, 2021, 7:35 PM IST

private schools to face legal action if refuse to issue TC

ಪೋಷಕರು ಮಕ್ಕಳ ವರ್ಗಾವಣೆ ಪತ್ರ ಕೇಳಿದಾಗ ಕೊಡದೇ ಇದ್ದಲ್ಲಿ ಅಂತಹ ಖಾಸಗಿ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಶಿಕ್ಷಣ ಇಲಾಖೆ ಆದೇಶ ನೀಡಿದೆ.

ಬೆಂಗಳೂರು: ಕೊರೊನಾ ಸೋಂಕಿನಿಂದ ಪೋಷಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪರಿಣಾಮ ಖಾಸಗಿ ಅನುದಾನರಹಿತ ಶಾಲೆಗಳನ್ನ ತೊರೆದು ತಮ್ಮ ಮಕ್ಕಳನ್ನು ಪೋಷಕರು ಸರ್ಕಾರಿ, ಅನುದಾನಿತ ಮತ್ತು ಇತರ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಿದ್ದಾರೆ.‌ ಇದಕ್ಕಾಗಿ ವರ್ಗಾವಣೆ ಪತ್ರಕ್ಕೆ (ಟಿಸಿ) ಖಾಸಗಿ ಅನುದಾನರಹಿತ ಶಾಲೆಗಳಿಗೆ ಮನವಿಯನ್ನು ಸಲ್ಲಿಸಿದ್ದರೂ, ಸದ್ಯ ಆಡಳಿತ ಮಂಡಳಿಗಳು ವರ್ಗಾವಣೆ ಪತ್ರವನ್ನು ವಿತರಿಸುತ್ತಿಲ್ಲ. ಈ ಸಂಬಂಧ ಪೋಷಕರಿಂದ ದೂರುಗಳು ಬರುತ್ತಿವೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಬಂಧಪಟ್ಟ ಶಾಲೆಗೆ ವರ್ಗಾವಣೆ ಪತ್ರವನ್ನು ವಿತರಿಸುವಂತೆ ತಿಳಿಸಿದ್ದರೂ ವರ್ಗಾವಣೆ ಪತ್ರವನ್ನು ವಿತರಿಸದೇ ವಿಳಂಬ ಮಾಡುತ್ತಿದ್ದು, ಇಂತಹ ವಿದ್ಯಾರ್ಥಿಗಳು ಅಧಿಕೃತವಾಗಿ ಶಾಲೆಗೆ ದಾಖಲಾಗದೇ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುವ ಆತಂಕದಲ್ಲಿ ಸಿಲುಕಿದ್ದಾರೆ. ಈಗಾಗಲೇ 2021-22ನೇ ಸಾಲಿನ ಶೈಕ್ಷಣಿಕ ವರ್ಷವು ಪ್ರಾರಂಭವಾಗಿ ಅರ್ಧ ವಾರ್ಷಿಕ ಮುಕ್ತಾಯವಾಗಿದ್ದು, ಮಕ್ಕಳು ಈವರೆಗೂ ಅಧಿಕೃತವಾಗಿ ದಾಖಲಾತಿಯಾಗದೇ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ.

ಹೀಗಾಗಿ, ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಮಾಡಿದ್ದಾರೆ. ಆ ಶಾಲೆಗೆ ವರ್ಗಾವಣೆ ಪತ್ರವನ್ನು ವಿತರಿಸುವಂತೆ ಕೋರಿಕೆ ಸಲ್ಲಿಸಿದ್ದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009ರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ನೀತಿ 2016ರ ಅಡಿಯಲ್ಲಿ ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 133ರಡಿಯಲ್ಲಿ ಅಂತಹ ವರ್ಗಾವಣೆ ಪತ್ರವನ್ನು ಒಂದು ವಾರದೊಳಗೆ ವಿತರಿಸಬೇಕೆಂದು ಆದೇಶವಿದೆ.

ಖಾಸಗಿ ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ಒಂದು ವಾರದೊಳಗೆ ಕಡ್ಡಾಯವಾಗಿ ವರ್ಗಾವಣೆ ಪತ್ರವನ್ನು ವಿತರಿಸಬೇಕು. ಒಂದು ವೇಳೆ ವಿಫಲವಾದಲ್ಲಿ ಪೋಷಕರು ಸಂಬಂಧಪಟ್ಟ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಬಹುದು.‌ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆ ಶಾಲೆಯ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕರಿಗೆ ಒಂದು ವಾರದೊಳಗೆ ವರ್ಗಾವಣೆ ಪತ್ರವನ್ನು ವಿತರಿಸುವಂತೆ ತಿಳುವಳಿಕೆ ಪತ್ರ ನೀಡಬಹುದು. ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಕಾಲಾವಧಿಯಲ್ಲಿ ವರ್ಗಾವಣೆ ಪತ್ರ ನೀಡಲು ವಿಫಲವಾದರೆ ಆಡಳಿತ ಮಂಡಳಿ ಮತ್ತು ಮುಖ್ಯ ಶಿಕ್ಷಕರ ವಿರುದ್ಧ ಕಾನೂನಿನ ಅಡಿ ಕ್ರಮವಹಿಸಿಬಹುದೆಂದು ಸೂಚಿಸಲಾಗಿದೆ. ಮಕ್ಕಳು ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗದಂತೆ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆ ನಿಯಮ 1983ರ ಸೆಕ್ಷನ್ 106(2)(ಬಿ) ರಲ್ಲಿ ತಿಳಿಸಿರುವಂತೆ ಕ್ರಮವಹಿಸಲು ಸೂಚಿಸಿದೆ.

ಇಲಾಖೆಯ ಕ್ರಮಕ್ಕೆ ಕ್ಯಾಮ್ಸ್ ಕೆಂಡಾಮಂಡಲ:

ಶಿಕ್ಷಣ ಇಲಾಖೆಯ ಈ ಆದೇಶಕ್ಕೆ ಖಾಸಗಿ ಅನುದಾನರಹಿತ ಒಕ್ಕೂಟ(ಕ್ಯಾಮ್ಸ್) ಆಕ್ರೋಶ ಹೊರಹಾಕಿದೆ. ಕ್ಷೇತ್ರದ ಶಿಕ್ಷಣಾಧಿಕಾರಿಗಳೇ ಟಿಸಿ ವಿತರಣೆ ಮಾಡೋದು ಅಪರಾಧವಾಗುತ್ತೆ. ಇದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಿದ್ದು, ಪಾಲಕ-ಪೋಷಕರು ಬಹುತೇಕರು ಶಾಲೆಗೆ ಕಟ್ಟಬೇಕಿರುವ ಶುಲ್ಕವನ್ನ ವಂಚನೆ ಮಾಡುವ ಉದ್ದೇಶದಿಂದ ಸರ್ಕಾರಿ ಶಾಲೆ ನೆಪವೊಡ್ಡುತ್ತಿದ್ದಾರೆ ಅಂತ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಆರೋಪಿಸಿದ್ದಾರೆ. ಅಧಿಕಾರಿಗಳೇ ಟಿಸಿ ಕೊಡುವುದಾದರೆ ಖಾಸಗಿ ಶಿಕ್ಷಣ ಸಂಸ್ಥೆಯ ನಿಯಮ ಉಲ್ಲಂಘನೆ ಮಾಡಿದಂತೆ ಆಗುತ್ತೆ. ಇಲಾಖೆ ಈ ಆದೇಶ ಹಿಂಪಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.

ಇಲಾಖೆಯ ಕ್ರಮಕ್ಕೆ ಕ್ಯಾಮ್ಸ್ ಆಕ್ರೋಶ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.