ETV Bharat / state

ಏಪ್ರಿಲ್​ 27 ರಂದು 50 ಲಕ್ಷ ಬಿಜೆಪಿ ಕಾರ್ಯಕರ್ತರ ಜೊತೆ ಪ್ರಧಾನಿ ಸಂವಾದ

author img

By

Published : Apr 25, 2023, 3:01 PM IST

ಕಾಂಗ್ರೆಸ್​ ಸುಳ್ಳು, ಒಡೆದಾಳುವ, ದಾರಿ ತಪ್ಪಿಸುವ, ಒಂದು ಸಮುದಾಯವನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 27ರಂದು ಬೆಳಿಗ್ಗೆ 9.30ಕ್ಕೆ ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುಯಲ್ ಮೂಲಕ ನೇರ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 58,112 ಬೂತ್‍ಗಳಲ್ಲಿ, 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈ ಸಂವಾದ ಹಮ್ಮಿಕೊಳ್ಳಲಾಗಿದೆ. ಬೂತ್‍ಗಳಲ್ಲಿ ಟಿವಿಗಳನ್ನು, ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಎಲ್‍ಇಡಿ ಸ್ಕ್ರೀನ್ ಅಳವಡಿಸಲಾಗುವುದು. ಈ ಸಂವಾದಕ್ಕಾಗಿ ಈಗಾಗಲೇ 24 ಲಕ್ಷ ಕಾರ್ಯಕರ್ತರು ಮೋದಿ ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಬೂತ್ ಮಟ್ಟದಲ್ಲಿ 58 ಸಾವಿರ ಸ್ಥಳಗಳಲ್ಲಿ ಈ ಆ್ಯಪ್​ಗಳ ಮೂಲಕ ಕಾರ್ಯಕರ್ತರು ಸಂವಾದವನ್ನು ವೀಕ್ಷಿಸಲಿದ್ದಾರೆ. ಎಲ್‍ಇಡಿ ಸ್ಕ್ರೀನ್ ಇರುವ ಕಡೆ ಸುಮಾರು 1,000 ಕಾರ್ಯಕರ್ತರನ್ನು, ಬೂತ್‍ಗಳಲ್ಲಿ 200 ಕಾರ್ಯಕರ್ತರನ್ನು ಈ ಕಾರ್ಯಕ್ರಮಕ್ಕಾಗಿ ಸಂಯೋಜಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5,000 ನಮೋ ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ 15 ಕಡೆ ಪ್ರಧಾನಿಯವರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿ ಬೃಹತ್ ಪ್ರಮಾಣದಲ್ಲಿ ನೇರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಡಬಲ್ ಇಂಜಿನ್ ಸರ್ಕಾರದ ಸಾಧನೆ ತಿಳಿಸಲಿದ್ದಾರೆ: ಬಿಜೆಪಿ ಮಾತ್ರ ಗರಿಷ್ಠ ಕಾರ್ಯಕರ್ತರನ್ನು ಹೊಂದಿದೆ. ಕಾರ್ಯಕರ್ತರ ಆಧಾರಿತ ಬಿಜೆಪಿ, ಈ ಶ್ರಮದ ಮೇಲೆ ಗೆಲ್ಲುವ ಪಕ್ಷವಾಗಿದೆ. ನರೇಂದ್ರ ಮೋದಿಯವರು ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಅಪೇಕ್ಷೆ ಹೊಂದಿದ್ದಾರೆ. ಕಾರ್ಯಕರ್ತರ ಶ್ರಮಕ್ಕೆ ನರೇಂದ್ರಮೋದಿಯವರು ಬೆನ್ನೆಲುಬಾಗಿರಲು ಸಿದ್ಧರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಅಭ್ಯರ್ಥಿಗಳು ಎಲ್ಲ ಮನೆಗಳಿಗೆ ಭೇಟಿ ನೀಡಲು ಕಷ್ಟ ಸಾಧ್ಯವಾದ್ದರಿಂದ ಕಾರ್ಯಕರ್ತರು ಒಂದೊಂದು ಮನೆಯನ್ನು ಎರಡರಿಂದ ಮೂರು ಬಾರಿ ಸಂಪರ್ಕಿಸಿ, ಡಬಲ್ ಇಂಜಿನ್ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ತಿಳಿಸಲಿದ್ದಾರೆ ಎಂದು ಶೋಭಾ ಕರಂದ್ಲಾಜೆ ವಿವರಿಸಿದರು.

ಇಂದಿನಿಂದ ಎರಡು ದಿನದ ‘ವಿಶೇಷ ಮಹಾ ಪ್ರಚಾರ ಅಭಿಯಾನ’ ಆರಂಭವಾಗಿದೆ. ಎಲ್ಲ 224 ಕ್ಷೇತ್ರಗಳಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬೆಳಗ್ಗೆ ಮಠ-ಮಂದಿರಗಳಿಗೆ ಭೇಟಿ ನೀಡಿ ಆ ನಂತರ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ. ಮನೆ-ಮನೆಗೂ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳು ಮತ್ತು ಯೋಜನೆಗಳ ಬಗ್ಗೆ ತಿಳಿಸುತ್ತಿದ್ದಾರೆ. ಅಭಿಯಾನದ ಭಾಗವಾಗಿ ಸುದ್ದಿಗೋಷ್ಠಿಗಳು, ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಂವಾದ, ರೋಡ್‍ಶೋಗಳು, ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಲಿದ್ದಾರೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನವ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಸುಳ್ಳು, ಒಡೆದಾಳುವ, ದಾರಿತಪ್ಪಿಸುವ, ಒಂದು ಸಮುದಾಯವನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : ಕಾಂಗ್ರೆಸ್ ಭ್ರಷ್ಟಾಚಾರ ಕುರಿತು ಮಾತನಾಡುವುದೇ ಹಾಸ್ಯಾಸ್ಪದ : ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.