ETV Bharat / state

'ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು'

author img

By

Published : Nov 28, 2022, 7:04 PM IST

ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಡಿಸೆಂಬರ್ 1 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ನೌಕರರ ಸಂಘ ತಿಳಿಸಿದೆ.

press-conference-by-anganwadi-employees-association
'ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು'

ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಒತ್ತಾಯಿಸಿ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿಯರನ್ನಾಗಿ ಪರಿಗಣಿಸಲು ಡಿಸೆಂಬರ್ 1 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಿಳಿಸಿದೆ.

ಪ್ರೆಸ್ ಕ್ಲಬ್‌ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ, ಗ್ರಾಚ್ಯುಟಿ ಪಾವತಿಸಲು ಕೂಡಲೇ ಸರ್ಕಾರ ನಿರ್ದೇಶನ ನೀಡಬೇಕು. 2022 ಏಪ್ರಿಲ್ 25 ರಂದು ಸುಪ್ರೀಂ ಕೋರ್ಟ್ 1972 ರ ಗ್ರಾಚ್ಯುಟಿ ಕಾಯ್ದೆಯ ಪ್ರಕಾರ ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬ ಐತಿಹಾಸಿಕ ತೀರ್ಪು ನೀಡಿತ್ತು ಎಂದು ಮಾಹಿತಿ ನೀಡಿದರು.

ಕೋರ್ಟ್ ನಿರ್ದೇಶನದಂತೆ ರಾಜ್ಯಾದ್ಯಂತ ಸಾವಿರಾರು ನಿವೃತ್ತಿ ನೌಕರರು ಸಿಡಿಪಿಒ, ಡಿ.ಡಿ, ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಅರ್ಜಿಯನ್ನು ಸ್ವತಃ ಹಾಗೂ ಅಂಚೆ ಮುಖಾಂತರ ಸಲ್ಲಿಸಿದ್ದಾರೆ. ಆದರೆ ಕೆಲವೆಡೆ ಸಿಡಿಪಿಒ, ಡಿ.ಡಿ, ನಿರ್ದೇಶಕರು ಮತ್ತು ಪ್ರಧಾನ ಕಾರ್ಯದರ್ಶಿಗಳು ಅರ್ಜಿಗಳನ್ನು ತೆಗೆದುಕೊಳ್ಳಲು ಕೆಲವೆಡೆ ನಿರಾಕರಿಸಿದ್ದಾರೆ. ಮಾತ್ರವಲ್ಲ, ಹಲವಾರು ನೌಕರರಿಗೆ ನೇಮಕಾತಿ ಮತ್ತು ನಿವೃತ್ತಿಯ ಆದೇಶಗಳನ್ನು ನೀಡಿಲ್ಲ. ಈ ಸಂದರ್ಭದಲ್ಲಿ ಕೇಳಲು ಹೋದರೆ ನಿರಾಕರಿಸಿರುವ ಘಟನೆಗಳಿವೆ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ 48 ವರ್ಷಗಳ ಇತಿಹಾಸದಲ್ಲಿ ಬಂದಂತಹ ಒಂದು ಸವಲತ್ತನ್ನು ಪಡೆಯಲು ಬೇಕಾದ ದಾಖಲಾತಿಗಳನ್ನು ಹೊಂದಿಸಿಕೊಳ್ಳಲು ಬಿಡದ ಇಲಾಖೆಯ ವ್ಯವಸ್ಥೆಯನ್ನು ಸರಿಪಡಿಸಬೇಕು. ಗ್ರಾಚ್ಯುಟಿಗೆ ಸಲ್ಲಿಸಿರುವ ಅರ್ಜಿದಾರರಿಗೆ ಕೂಡಲೇ ಪರಿಹಾರ ನೀಡಲು ರಾಜ್ಯ ಸಚಿವ ಸಂಪುಟ ಆದೇಶಿಸಬೇಕು ಎಂದರು.

ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗಿರುವ ಮತ್ತು ಪ್ರಾರಂಭವಾಗುತ್ತಿರುವ ಎಲ್​ಕೆಜಿ, ಯುಕೆಜಿಯನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಕೂಡಲೇ ವಹಿಸಬೇಕು. 48 ವರ್ಷಗಳಿಂದ ಲಕ್ಷಾಂತರ ಅಂಗನವಾಡಿ ಮಹಿಳೆಯರಿಗೆ ಗೌರವ ಧನ ಮಾತ್ರ ಕೊಟ್ಟು ದುಡಿಸಿಕೊಳ್ಳುತ್ತಿವೆ. ಇತ್ತೀಚೆಗೆ ಅಂಗನವಾಡಿ ಕಾರ್ಯಕರ್ತೆ ತಪ್ಪು ಮಾಡಿದ ಕೂಡಲೇ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು. ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಿಸೆಂಬರ್ 1 ರಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇದೇ ದಿನದಂದು ಪ್ರತಿಭಟನೆ ನಡೆಯುತ್ತಿದೆ. ಕೂಡಲೇ ಸರ್ಕಾರ ಈ ನೌಕರರ ಬೇಡಿಕೆಗಳಿಗೆ ಸ್ಪಂದಿಸಲು ಮುಂದಾಗಬೇಕು ಎಂದು ಎಚ್ಚರಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಉಪಾಧ್ಯಕ್ಷೆ ಟಿ. ಲೀಲಾವತಿ, ಪ್ರಧಾನ ಕಾರ್ಯದರ್ಶಿ ಸುನಂದ ಹೆಚ್.ಎಸ್ ಉಪಸ್ಥಿತರಿದ್ದರು.

ಇದನ್ನೂ ಓದಿ:ದೆಹಲಿಯತ್ತ ಸಿಎಂ ಪ್ರಯಾಣ.. ಬೊಮ್ಮಾಯಿ ದಂಡಯಾತ್ರೆ ಯಶಸ್ವಿಯಾಗುತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.