ETV Bharat / state

ಗದಗದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ‌: ಬಿಜೆಪಿ ಸರ್ಕಾರಕ್ಕೆ ಸವಾಲೆಸೆದ ನಾಯಕರು

author img

By

Published : Jan 19, 2023, 7:58 AM IST

ಗದಗದಲ್ಲಿ ಕಾಂಗ್ರೆಸ್​ ಪಕ್ಷದ ಪ್ರಜಾಧ್ವನಿ‌ ಕಾರ್ಯಕ್ರಮ ನಡೆದಿದ್ದು, ಕೈ ನಾಯಕರು ಬಿಜೆಪಿ ನಾಯಕರನ್ನು ಟೀಕಿಸಿ, ಸವಾಲೆಸೆದು ಮಾತನಾಡಿದರು.

Prajadhwani program
ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಚಾಲನೇ ನೀಡುತ್ತಿರುವ ಕಾಂಗ್ರೆಸ್​ ನಾಯಕರು

ಗದಗ: ಕಾಂಗ್ರೆಸ್ ಮಾಡಿದ ಸಾಧನೆಗಳನ್ನು ‌ನೀವು ಮಾಡೋಕೆ ಸಾಧ್ಯವೇ?, ನೀವು ಮಾಡಿದ ಸಾಧನೆಗಳ‌ ಪಟ್ಟಿ ಮಾಡಿ ಹೇಳೋಕೆ ನಿಮಗೆ ಧಮ್, ತಾಕತ್ತಿದೆಯೇ? ಎಂದು ಕಾಂಗ್ರೆಸ್​ನ ಹಿರಿಯ ಮುಖಂಡ ಹಾಗು ಶಾಸಕ ಹೆಚ್.ಕೆ.ಪಾಟೀಲ್ ಬುಧವಾರ ಸಂಜೆ ಇಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಯೂರಿಯಾ ಗೊಬ್ಬರ ಕೇವಲ 474 ರೂ. ಇತ್ತು. ಈಗ 1,364 ರೂಪಾಯಿ ಆಗಿದೆ. ಸಿಮೆಂಟ್, ಕಬ್ಬಿಣ ಸೇರಿದಂತೆ ಇತರೆ ವಸ್ತುಗಳ ದರ ಹೆಚ್ಚಳ‌ ಮಾಡಿ ಶ್ರೀಮಂತರಿಗೆ ಅನುಕೂಲ‌ ಮಾಡಿಕೊಟ್ಟಿರಿ. ರೈತರು ಮತ್ತು ಬಡವರಿಗೆ ಬೇಕಾದ ವಸ್ತುಗಳ ಬೆಲೆ ಏರಿಕೆ ಮಾಡುವುದು ತಾಕತ್ತು ಅಲ್ಲ. ನಿಮ್ಮಲ್ಲಿ ಧಮ್ ಮತ್ತು ತಾಕತ್ತು ಅನ್ನೋದು ಇದ್ದರೆ ಅವುಗಳ ಬೆಲೆ ಕಡಿಮೆ ಮಾಡಿ ಎಂದರು.

ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿವೆ. ಬಡವರು ಬಡರಾಗಿಯೇ ಇದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಈ ಸರ್ಕಾರವನ್ನು ಹೀಗೆ ಆಳಲು ಬಿಟ್ಟರೆ ಬಡವರಿಗೆ ಉಳಿಗಾಲ ಇಲ್ಲ ಎಂದು ಹೇಳಿದರು.

Prajadhwani program
ಗದಗದಲ್ಲಿ ಕಾಂಗ್ರೆಸ್‌ ಪ್ರಜಾಧ್ವನಿ‌ ಸಮಾವೇಶ

'ಮೋದಿ ಸುಳ್ಳಿನ ಸರದಾರ': ವಿಧಾನಸೌಧದಲ್ಲಿ ಹತ್ತು ಲಕ್ಷ ಹಣ ಸಿಕ್ಕಿರುವ ವಿಚಾರ ಪ್ರಸ್ತಾಪಿಸಿದ‌ ಅವರು, ಈ‌ ಜಿಲ್ಲೆಯ ಸಚಿವರೊಬ್ಬರಿಗೆ ಹತ್ತು ಲಕ್ಷ ರೂಪಾಯಿ ಕೊಡಲು ಅಧಿಕಾರಿಗಳು ವಿಧಾನಸೌಧಕ್ಕೆ ಬರುತ್ತಾರೆ. ವಿಧಾನಸೌಧವನ್ನು ಬಿಜೆಪಿ ಮಂತ್ರಿಗಳು ವಾಣಿಜ್ಯೋದ್ಯಮ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಪರೋಕ್ಷವಾಗಿ ಸಿ.ಸಿ.ಪಾಟೀಲ್ ವಿರುದ್ದ ವಾಗ್ದಾಳಿ ಮಾಡಿದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರೂ ಸಹ ಭಾಷಣದಲ್ಲಿ ಏನೂ ಕಡಿಮೆ ಇಲ್ಲ. ರಾಷ್ಟ್ರದಲ್ಲಿ ಸುಳ್ಳಿನ ಸರ್ದಾರ ಎಂದು ಅವರು ಖ್ಯಾತಿಯಾಗಿದ್ದಾರೆ ಎಂದು ಕೇಂದ್ರ ವಿರುದ್ಧವೂ ಕಿಡಿ ಕಾರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್​ ಕಟೀಲ್​ ಜನಸಾಮಾನ್ಯರ ಕಷ್ಟಗಳ‌ ಬಗ್ಗೆ ಮಾತನಾಡುವುದಿಲ್ಲ. ಹಿಂದೂಸ್ಥಾನ, ಲವ್ ಜಿಹಾದ್ ಬಗ್ಗೆಯೇ ಮಾತನಾಡುತ್ತಾರೆ. ಬಿಜೆಪಿಯಲ್ಲಿ ಅವರೊಬ್ಬ ಜೋಕರ್ ಎಂದು ಕಾಲೆಳೆದರು. ಇದಕ್ಕೂ ಮುನ್ನ ಪ್ರಜಾಧ್ವನಿ ಸಮಾವೇಶ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ‌ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ಉಸ್ತುವಾರಿ ರಣದೀಪ‌ಸಿಂಗ್ ಸುರ್ಜೆವಾಲಾ, ಮುಖಂಡರಾದ ಬಿ.ಕೆ.ಹರಿಪ್ರಸಾದ, ಹೆಚ್.ಕೆ.ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶ ಮೂರು ಗಂಟೆ ತಡವಾಗಿ ಆರಂಭವಾಗಿದ್ದರೂ ಜನಸ್ತೋಮ ಕಂಡುಬಂತು.

'ಬಿಜೆಪಿ ಸುಳ್ಳಿನ ಕಾರ್ಖಾನೆ': ಸಿದ್ದರಾಮಯ್ಯ ಪತ್ರಿಕಾ ಹೇಳಿಕೆಯಲ್ಲಿ, ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಆಗಮಿಸುತ್ತಿರುವ ಕುರಿತು ವ್ಯಂಗವಾಡಿದ್ದು, ಅವರು ಬರುವ ಸಂದರ್ಭದಲ್ಲಿ ಬಿಜೆಪಿ ಸುಳ್ಳಿನ ಕಾರ್ಖಾನೆಯ ಕಾರ್ಮಿಕರು(ಬಿಜೆಪಿ ನಾಯಕರು) ಸುಳ್ಳುಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದ್ದಾರೆ. ಅಲ್ಲದೇ ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೋದಿಯವರು ಕರ್ನಾಟಕಕ್ಕೆ ಬರುತ್ತಿರುವುದರ ಕುರಿತು, ಅವರಿಗೆ ಸಂಪ್ರದಾಯದಂತೆ ಕರ್ನಾಟಕ ನೆನಪಾಗುತ್ತಿದೆ, ಆದ್ದರಿಂದ ಮೇಲಿಂದ ಮೇಲೆ ರಾಜ್ಯಕ್ಕೆ ಸೈಕಲ್​ ತುಳಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಸಂಪ್ರದಾಯದಂತೆ ಕರ್ನಾಟಕ ನೆನಪಾಗಿದೆ: ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.