ETV Bharat / state

ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು: ಅಧಿಕಾರಿಗಳಿಗೆ ಸಿಎಂ ಖಡಕ್​ ಸೂಚನೆ

author img

By ETV Bharat Karnataka Team

Published : Sep 30, 2023, 9:16 PM IST

ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ, ವಸ್ತುಗಳನ್ನು ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

CM Siddaramaiah checked materials quality  .
ವಸತಿ ನಿಲಯ ವಿದ್ಯಾರ್ಥಿಗಳಿಗೆ ಪೂರೈಕೆ ಆಗುವ ವಸ್ತುಗಳ ಗುಣಮಟ್ಟವನ್ನು ಸಿಎಂ ಸಿದ್ದರಾಮಯ್ಯ ಪರಿಶೀಲಿಸಿದರು.

ಬೆಂಗಳೂರು: ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ದಡ್ಡರನ್ನು ಜಾಣರನ್ನಾಗಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ಯಾವ ಮಕ್ಕಳೂ ದಡ್ಡರಲ್ಲ, ಅವಕಾಶ ಮತ್ತು ಉತ್ತಮ ಕಲಿಕೆಯ ವಾತಾವರಣ ಸಿಕ್ಕರೆ ಎಲ್ಲರೂ ರ‍್ಯಾಂಕ್ ಪಡೆಯುತ್ತಾರೆ. ಕಲಿಕೆಯ ವಾತಾವರಣ ಪರಿಣಾಮ ಬೀರುತ್ತದೆ. ಮೊರಾರ್ಜಿ ಶಾಲೆಗಳನ್ನು ಪ್ರಾರಂಭಿಸಿದ್ದೇ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ದಡ್ಡರನ್ನು ಜಾಣರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಇದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತೆ ಸೂಚಿಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಗಳ ವಸತಿ ನಿಲಯಗಳ 5,48,000 ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಟೂತ್ ಪೇಸ್ಟ್ , ಬ್ರಶ್, ಕೊಬ್ಬರಿ ಎಣ್ಣೆ, ಮೈ ಸೋಪು, ಬಟ್ಟೆ ಸೋಪು ಒಳಗೊಂಡ 93 ರೂ. ಕಿಟ್ ಗಂಡುಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ 135 ರೂ.ಗಳ ವೆಚ್ಚದಲ್ಲಿ ಶುಚಿ ಸಂಭ್ರಮ ಕಿಟ್ ನೀಡಲು ಟೆಂಡರ್ ಕರೆಯಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಕಿಟ್​​ಗಳ ವಿತರಣೆಗೆ ವರ್ಷಕ್ಕೆ 90 ಕೋಟಿ ರೂ ವೆಚ್ಚವಾಗಲಿದೆ. ಕಿಟ್ ನಲ್ಲಿರುವ ವಸ್ತುಗಳ ಗುಣಮಟ್ಟ ಹೆಚ್ಚಿಸಲು ಸಲಹೆ ನೀಡಿದರು.

75 ಗ್ರಾಂ.ಗಳ ಬದಲಿಗೆ 125 ಗ್ರಾಂ ಸೋಪು ಒದಗಿಸುವಂತೆ ಹಾಗೂ ಇದರಲ್ಲಿ ಕೇವಲ ಶೇ 5 ರಷ್ಟು ಮಾತ್ರ ಲಾಭ ಇಟ್ಟುಕೊಳ್ಳಬೇಕೆಂದು ಮೈಸೂರು ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದರು. ಟೂತ್ ಪೇಸ್ಟ್ ಪ್ರಮಾಣ ಹೆಚ್ಚಿಸುವಂತೆ ಹಾಗೂ ಹಲ್ಲುಜ್ಜುವ ಬ್ರಶ್ ಗಳ ಗುಣಮಟ್ಟ ಸೇರಿದಂತೆ ಇತರ ಗುಣಮಟ್ಟದ ವಸ್ತುಗಳನ್ನು ಮಕ್ಕಳಿಗೆ ಒದಗಿಸುವಂತೆ ಸೂಚಿಸಿದರು.

ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್: ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಪಿ.ಜಿ, ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಖರೀದಿಸಲು ತೀರ್ಮಾನಿಸಲಾಯಿತು.

ಗುಣಮಟ್ಟದ ಆಹಾರಧಾನ್ಯ ವಿತರಿಸಿ: ಪ್ರಸ್ತುತ ತಲಾ 1650 ರೂ. ಫ್ರಿ ಮೆಟ್ರಿಕ್, 1750 ರೂ.ಗಳನ್ನು ಪೋಸ್ಟ್ ಮೆಟ್ರಿಕ್ ಮಕ್ಕಳಿಗೆ ಆಹಾರಧಾನ್ಯಗಳಿಗಾಗಿ ನಿಗದಿಪಡಿಸಿದೆ. ರಾಗಿ, ಧಾನ್ಯ, ಎಣ್ಣೆಯನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ತಾಲೂಕುವಾರು ಪ್ಯಾಕೇಜ್​​ಗಳ ಟೆಂಡರ್ ಕರೆದು ಪಡೆಯಲಾಗುತ್ತಿದೆ. ಈ ವ್ಯವಸ್ಥೆಯನ್ನು ಸರಿಪಡಿಸಿ ಗುಣಮಟ್ಟದ ಆಹಾರಪದಾರ್ಥಗಳನ್ನು ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಟೆಂಡರ್ ಕರೆಯುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಲು ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಆಹಾರ ಧ್ಯಾನ ಪಡೆಯುವ ಕುರಿತ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಬೇಕು ಎಂದು ಸೂಚಿಸಿದರು. ಮೈಸೂರು ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿನಿಲಯಕ್ಕೆ ಟೆಂಡರ್ ಅವಧಿ ಮುಕ್ತಾಯವಾಗಿದ್ಧು, ಆಹಾರಧಾನ್ಯಗಳ ಟೆಂಡರ್ ಕರೆಯುವಂತೆ ಸೂಚನೆ ನೀಡಿದರು.

ಹೋಬಳಿಗೆ ಒಂದರಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆ ಇರಬೇಕು ಎಂದು ಆದೇಶಿಸಿದ್ದು, 178 ಹೋಬಳಿಗಳಲ್ಲಿ ಕ್ರೈಸ್ ಶಾಲೆಗಳಿಲ್ಲ. ಕೆಲವು ಹೋಬಳಿಗಳಲ್ಲಿ 3-4 ಶಾಲೆಗಳಿವೆ. ಕಸಬಾ ಹೋಬಳಿ ತೆಗೆದರೆ 134 ಶಾಲೆಗಳನ್ನು ತೆರೆಯಬೇಕಿದೆ. ಸ್ವಂತ ಕಟ್ಟಡ ಇಲ್ಲದ ಶಾಲೆಗಳಿದ್ದರೆ , ಅದೇ ಕ್ಷೇತ್ರದ ಮತ್ತೊಂದು ಹೋಬಳಿಗೆ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಸೂಚಿಸಿದರು.

ಮೊರಾರ್ಜಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕಡ್ಡಾಯ: ಮೊರಾರ್ಜಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತೆ ಸೂಚಿಸಿದ್ದು, ಶಿಕ್ಷಕರ ಗುಣಮಟ್ಟವೂ ಮುಖ್ಯ. ಶಿಕ್ಷಕರಿಗೆ ತರಬೇತಿ (ಓರಿಯೆಂಟೇಷನ್) ಕಾರ್ಯಕ್ರಮ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಮಟ್ಟಕ್ಕೆ ತರಬೇಕು ಎಂದು ಸೂಚಿಸಿದರು. ಐಸೆಕ್ ಮತ್ತು ಐಐಎಸ್​ಸಿ ಸಂಸ್ಥೆಗಳ ಮೂಲಕ ಕ್ರೈಸ್ ಶಾಲೆಗಳ ಶಿಕ್ಷಕರ ಮೌಲ್ಯಮಾಪನ ಮಾಡಿಸುವಂತೆ ಸೂಚಿಸಿದರು.

ಶಾಲೆಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಶೇ. 80 ರಷ್ಟು ಅರ್ಹತೆ ಆಧಾರದ ಮೇಲೆ ಹಾಗೂ ಶೇ. 20 ರಷ್ಟು ಸ್ಥಳೀಯರಿಗೆ ಮೀಸಲಿಡಬೇಕು. ಈ ನಿಟ್ಟಿನಲ್ಲಿ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ಪ್ರಥಮ ಆದ್ಯತೆ ಆಗಿರಲಿ ಎಂದು ಸೂಚಿಸಿದರು.

ಇದನ್ನೂಓದಿ:3ನೇ ತರಗತಿ ವಿದ್ಯಾರ್ಥಿನಿ ಪತ್ರಕ್ಕೆ ಸಿಎಂ ಕಚೇರಿ ಸ್ಪಂದನೆ : ತಂಬಾಕು ಅಂಗಡಿ ಮೇಲೆ ಪೊಲೀಸರ​ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.