ಬೆಂಗಳೂರು: ಪಿಎಫ್ಐ ಸಂಘಟನೆ ನಿಷೇಧ ಮಾಡಿದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಎಸಿಪಿ ನೇತೃತ್ವದಲ್ಲಿ ನಗರದ ಪಿಎಫ್ಐ ಪ್ರಧಾನ ಕಚೇರಿ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೆ.ಸಿ.ನಗರ ಎಸಿಪಿ ಮನೋಜ್ ಕುಮಾರ್ ಅಂಡ್ ಟೀಂನಿಂದ ಭದ್ರತೆ ಮಾಡಲಾಗಿದೆ. ಪಿಎಫ್ಐ ಮುಖ್ಯ ಕಚೇರಿ ರಸ್ತೆಯಲ್ಲಿ ಖಾಕಿ ಸರ್ಪಗಾವಲು ಹಾಕಲಾಗಿದೆ.
ಯಾರಿಗೂ ಗುಂಪುಗೂಡಲು ಅವಕಾಶ ನೀಡದ ಪೊಲೀಸರು ಪಿಎಫ್ಐ ಕಚೇರಿಯ ರಸ್ತೆಯಲ್ಲಿ ವಾಹನಗಳನ್ನ ಸಹ ಬಿಡದೆ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಈಗಾಗಲೇ ಮುಸ್ಲಿಂ ಮುಖಂಡರ ಜೊತೆ ಮಾತುಕತೆ ನಡೆಸಿರುವ ಪೊಲೀಸರು ಪ್ರತಿಭಟನೆ ನಡೆಸದಂತೆ ತಾಕೀತು ಮಾಡಿದ್ದಾರೆ. ಇದನ್ನೂ ಮೀರಿ ಯಾರಾದ್ರೂ ಪ್ರತಿಭಟನೆ ಅಂತ ರಸ್ತೆಗೆ ಬಂದ್ರೆ, ಸೂಕ್ತ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೂಕ್ತ ಬಂದೋಬಸ್ತ್: ಪಿಎಫ್ಐ ಬ್ಯಾನ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಆದೇಶ ಈಗಾಗಲೇ ನಮ್ಮ ಕೈ ಸೇರಿದೆ. ಅದರ ಅಧಾರದ ಮೇಲೆ ರಾಜ್ಯ ಸರ್ಕಾರ ಪೂರಕ ಅದೇಶ ಹೊರಡಿಸುತ್ತದೆ. ಇದಕ್ಕೆ ಪೂರಕವಾಗಿ ನಾವು ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ.
ಇದನ್ನೂ ಓದಿ: ಪಿಎಫ್‌ಐ ಸಂಘಟನೆ ಬ್ಯಾನ್ .. ಧಾರವಾಡದಲ್ಲಿ ಪೊಲೀಸರಿಂದ ಕಟ್ಟೆಚ್ಚರ
ಈ ಆದೇಶದ ಹಿನ್ನೆಲೆ ನಾವು ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ನಮ್ಮ ಠಾಣಾ ಅಧಿಕಾರಿಗಳು, ಹಿರಿಯ ಅಧಿಕಾರಿಗಳು, ವಿವಿಧ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದಾರೆ. ಕೇಂದ್ರ ಸರ್ಕಾರದ ಅದೇಶ ಪಾಲನೆ ಮಾಡಲು ಸಿದ್ಧರಿದ್ದೇವೆ ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ.