ETV Bharat / state

ವಂಚನೆ ಆರೋಪ ಪ್ರಕರಣ: ನಿರ್ಮಾಪಕ ರಾಕ್​ಲೈನ್ ಪುತ್ರನಿಗೆ ಪೊಲೀಸರ ನೋಟಿಸ್​

author img

By ETV Bharat Karnataka Team

Published : Dec 24, 2023, 12:58 PM IST

Updated : Dec 24, 2023, 1:03 PM IST

ವಂಚನೆ ಆರೋಪ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

Notice to Rockline Venkatesh son under fraud case
ವಂಚನೆ ಆರೋಪ: ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಪುತ್ರನಿಗೆ ನೋಟಿಸ್​!

ಬೆಂಗಳೂರು: ವೃದ್ಧೆಯೋರ್ವರಿಗೆ ಸಂಬಂಧಿಸಿದ ಆಸ್ತಿಗಳ ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್ ಖಾತೆ ತೆರೆದು ವಂಚಿಸಿರುವ ಆರೋಪ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಪುತ್ರನ ಹೆಸರು ಕೂಡ ಕೇಳಿ ಬಂದಿದೆ. ರಾಕ್​​ಲೈನ್ ವೆಂಕಟೇಶ್ ಅವರ ಪುತ್ರ ಅಭಿಲಾಷ್ ಮಾಲೀಕತ್ವದ ಕಂಪನಿಯೊಂದಕ್ಕೆ ಹಣ ವರ್ಗಾವಣೆಯಾಗಿರುವುದು ಸಿಸಿಬಿ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದ್ದು, ಕಂಪನಿಯ ನಿರ್ದೇಶಕನಾಗಿರುವ ಮಿಥುನ್ ಎಂಬುವರನ್ನು ಶನಿವಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಅಭಿಲಾಷ್​ಗೆ ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಬುಜಾಕ್ಷಿ ಎಂಬ ವೃದ್ಧೆಯ ಜಮೀನಿನ ದಾಖಲೆಗಳನ್ನ ನಕಲುಗೊಳಿಸಿ 3 ಬ್ಯಾಂಕ್‌ಗಳಿಂದ ಬರೋಬ್ಬರಿ 3.85 ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಆರೋಪದಡಿ ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್ ಅರುಣ್, ಟಿ.ಪಿ ಶಿವಕುಮಾರ್ ಎಂಬಾತನನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಜೆ.ಪಿ ನಗರದ ನಿವಾಸಿಯಾಗಿರುವ ಅಂಬುಜಾಕ್ಷಿ (75) 1,350 ಅಡಿ ವಿಸ್ತೀರ್ಣದ ಬಿಡಿಎ ನಿವೇಶನದಲ್ಲಿ ಎರಡು ಅಂತಸ್ತಿನ ಸ್ವಂತ ಡೂಪ್ಲೆಕ್ಸ್ ಮನೆ ಹೊಂದಿದ್ದಾರೆ. ಅಂಬುಜಾಕ್ಷಿಯವರ ಮಕ್ಕಳು ವಿದೇಶದಲ್ಲಿದ್ದು, ಇವರೂ ಸಹ ವಿದೇಶಕ್ಕೆ ಹೋಗಿ ನೆಲೆಸಲು ಚಿಂತಿಸಿದ್ದರು.

ಈ ಸಂಬಂಧ ತಮ್ಮ ಮನೆ ಮಾರಾಟ ಮಾಡುವ ವಿಚಾರವನ್ನು ರಿಯಲ್ ಎಸ್ಟೇಟ್ ಬ್ರೋಕರ್‌ಗಳಾಗಿದ್ದ ಆರೋಪಿಗಳಿಗೆ ತಿಳಿಸಿದ್ದರು. ಇದೇ ನೆಪದಲ್ಲಿ ಅಂಬುಜಾಕ್ಷಿಯವರ ನಿವೇಶನದ ದಾಖಲೆಗಳನ್ನು ಪಡೆದುಕೊಂಡಿದ್ದ ಆರೋಪಿಗಳು, ಅಸಲಿ ದಾಖಲೆಗಳ ರೀತಿಯಲ್ಲೇ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರ ಸಹಿ ಫೋರ್ಜರಿ ಮಾಡಿ, 3 ಬ್ಯಾಂಕ್‌ಗಳಿಗೆ ನೀಡಿ, 3.85 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಸಾಲದ ವಿಚಾರವಾಗಿ ಬ್ಯಾಂಕ್ ಸಿಬ್ಬಂದಿ ಅಂಬುಜಾಕ್ಷಿಯವರನ್ನು ಸಂಪರ್ಕಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಬಿಗ್​ ಬಾಸ್​ಗೆ ಶೈನ್​ ಶೆಟ್ಟಿ, ಶುಭಾ ಪೂಂಜಾ ಎಂಟ್ರಿ: ಈ ವಾರ ಡಬಲ್​ ಎಲಿಮಿನೇಶನ್​!

ಡಿ. 14ರಂದು ವೃದ್ಧೆಯು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಬಳಿಕ ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಆರೋಪಿಗಳು ಸಾಲ ಪಡೆದಿದ್ದ ಬ್ಯಾಂಕ್‌ಗಳಿಂದ ಮಾಹಿತಿ, ಸಾಕ್ಷ್ಯ ಸಂಗ್ರಹಿಸಿದ ಸಿಸಿಬಿ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: ಅಬ್ಬರದ ಓಟ ಮುಂದುವರಿಸಿದ 'ಸಲಾರ್​': ಎರಡನೇ ದಿನವೂ ಭರ್ಜರಿ ಕಲೆಕ್ಷನ್​​​!

ಸಾಲ ಪಡೆದು ವಂಚಿಸಿರುವ ಹಣದ ವರ್ಗಾವಣೆಯ ಕುರಿತು ಪರಿಶೀಲಿಸಿದಾಗ 'ಗೋ ಗ್ರೀನ್' ಹೆಸರಿನ ಚಾರ್ಟರ್ಡ್ ಅಕೌಂಟೆಂಟ್ ಕಂಪನಿಯ ಖಾತೆಗೆ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಹಂತಹಂತವಾಗಿ ಲಕ್ಷಾಂತರ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಕಂಪನಿಯ ನಿರ್ದೇಶಕರಾದ ಅಭಿಲಾಶ್ ವೆಂಕಟೇಶ್ ಹಾಗೂ ಅವರ ಸ್ನೇಹಿತ ಮಿಥುನ್ ಅವರಿಗೆ ಸ್ಪಷ್ಟೀಕರಣ ನೀಡುವಂತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು. ಶನಿವಾರ ಮಿಥುನ್ ಅವರ ವಿಚಾರಣೆ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Dec 24, 2023, 1:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.