ETV Bharat / state

ಇದೇ ಮೊದಲ ಬಾರಿಗೆ ಬೆಂಗಳೂರು ಸೈಬರ್ ಕ್ರೈಂ ವಿಭಾಗಕ್ಕೆ ಎಸಿಪಿ ನೇಮಕ

author img

By ETV Bharat Karnataka Team

Published : Nov 28, 2023, 8:23 AM IST

Updated : Nov 28, 2023, 1:58 PM IST

ACP appointed for Bengaluru Cyber crime Division: ಸೈಬರ್ ಅಪರಾಧ ವಿಭಾಗಕ್ಕೆ ಎಸಿಪಿ ದರ್ಜೆಯ ಅಧಿಕಾರಿಯ ನಿಯೋಜನೆ ಸೇರಿ ಏಳು ಡಿವೈಎಸ್ಪಿ ಮತ್ತು 14 ಮಂದಿ ಇನ್ಸ್​ಪೆಕ್ಟರ್​ಗಳನ್ನು ಸರ್ಕಾರ ವರ್ಗಾಯಿಸಿದೆ.

Etv Bharat
Etv Bharat

ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳನ್ನು ಹತ್ತಿಕ್ಕಲು ಇದೇ ಮೊದಲ ಬಾರಿಗೆ ಸಿಸಿಬಿಯ ಸೈಬರ್ ವಿಭಾಗಕ್ಕೆ ಸಹಾಯಕ ಪೊಲೀಸ್ ಕಮೀಷನರ್ (ಎಸಿಪಿ) ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಸತ್ಯನಾರಾಯಣ್ ಸಿಂಗ್ ಅವರು ಎಸಿಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕುರಿತು ರಾಜ್ಯ ಪೊಲೀಸ್ ಇಲಾಖೆ ಆದೇಶಿಸಿದೆ. ಇನ್ನುಳಿದಂತೆ ಒಟ್ಟು ಏಳು ಡಿವೈಎಸ್ಪಿ ಹಾಗೂ 14 ಮಂದಿ‌ ಇನ್ಸ್​ಪೆಕ್ಟರ್​​ಗಳನ್ನು ವರ್ಗಾವಣೆಗೊಳಿಸಲಾಗಿದೆ.

ವರ್ಗಾವಣೆಗೊಂಡ ಡಿವೈಎಸ್​ಪಿಗಳು: ಗಿರೀಶ್ ಎಸ್​.ಬಿ., ಜೋಗಿನ ಗೋಪಾಲ ದೊಡ್ಡಕರಿಯಪ್ಪ, ಧಮೇಂದ್ರ ಹೆಚ್.ಎನ್., ಸತ್ಯನಾರಾಯಣಸಿಂಗ್, ಸಣ್ಣ ತಮ್ಮಪ್ಪಯ್ಯ ಒಡೆಯರ್, ಪುಟ್ಟಸ್ವಾಮಿಗೌಡ, ಪವನ್ ಎನ್.

ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿಯ ಸೈಬರ್ ವಿಭಾಗಕ್ಕೆ ಹೊಸದಾಗಿ‌ ಎಸಿಪಿ ದರ್ಜೆಯ ಹುದ್ದೆಯನ್ನು ಪೊಲೀಸ್ ಇಲಾಖೆ ಸೃಷ್ಟಿಸಿತ್ತು.

ಇದನ್ನೂ ಓದಿ: ಖಾಲಿಯಿರುವ 454 ಪೊಲೀಸ್ ಬ್ಯಾಕ್ ಲಾಗ್ ಹುದ್ದೆಗಳಿಗೆ‌ ಡಿ. 10ರಂದು ಲಿಖಿತ ಪರೀಕ್ಷೆ

ಪೊಲೀಸ್ ವರ್ಗಾವಣೆ ಬಗ್ಗೆ ಕಾನೂನು: ಪೊಲೀಸ್ ಇಲಾಖೆಯಲ್ಲಿ ಪ್ರತಿ ವರ್ಷ ವರ್ಗಾವಣೆ ಆಗುತ್ತಿದೆ. ಇನ್ನು ಮುಂದೆ ಎರಡು ವರ್ಷಗಳ ನಂತರ ವರ್ಗಾವಣೆ ಮಾಡಬೇಕು ಎಂಬ ಕಾನೂನು ರೂಪಿಸಲಾಗುವುದು ಎಂದು ಇತ್ತೀಚೆಗೆ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದರು.

ಶೀಘ್ರದಲ್ಲಿ ಪಿಎಸ್​ಐ ಸೇರಿ 4,547 ಮಂದಿ ನೇಮಕಾತಿ: ಆರು ತಿಂಗಳಲ್ಲಿ ಪೊಲೀಸ್ ಇಲಾಖೆಯಲ್ಲಿ 4,547 ಮಂದಿಯನ್ನು ಭರ್ತಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ಹೇಳಿದ್ದರು. 1,547 ಮಂದಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್​ಗಳು, 3,000 ಮಂದಿ ಕಾನ್ಸ್​​ಟೇಬಲ್​ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದರು.

ಹೈಕೋರ್ಟ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ 545 ಮಂದಿ ಪೊಲೀಸ್ ಸಬ್​ಇನ್ಸ್​ಪೆಕ್ಟರ್ ಹುದ್ದೆಗಳಿಗೆ ಡಿಸೆಂಬರ್ ಅಂತ್ಯದೊಳಗಾಗಿ ಮರುಪರೀಕ್ಷೆ ನಡೆಸಿ ಭರ್ತಿ ಮಾಡಿಕೊಳ್ಳಲಾಗುವುದು. ನಂತರ 402 ಪೊಲೀಸ್ ಸಬ್​ಇನ್ಸ್​​ಪೆಕ್ಟರ್​ಗಳ ಹುದ್ದೆ ನೇಮಕಾತಿ ನಡೆಯಲಿದೆ. ಆ ಬಳಿಕ 600 ಮಂದಿ ಪೊಲೀಸ್ ಸಬ್​ ಇನ್ಸ್​​ಪೆಕ್ಟರ್​ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದ್ದರು. ಹಾಗೆಯೇ ಮೂರು ಸಾವಿರ ಕಾನ್ಸ್​ಟೇಬಲ್​ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದಿದ್ದರು.

ಪೊಲೀಸ್ ಇಲಾಖೆಗೆ ಇನ್ನೂ ಹದಿನೈದು ಸಾವಿರ ಕಾನ್ಸ್​​ಟೇಬಲ್​ಗಳ ಅಗತ್ಯವಿದೆ. ಹಂತಹಂತವಾಗಿ ಇದನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದ ಅವರು, ಆಯ್ಕೆಯಾಗುವವರಿಗೆ ತರಬೇತಿ ನೀಡುವ ಅಗತ್ಯವಿರುವುದರಿಂದ ಒಂದೇ ಕಂತಿನಲ್ಲಿ ಇಷ್ಟು ಮಂದಿಯನ್ನು ನೇಮಕ ಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದರು.

Last Updated : Nov 28, 2023, 1:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.