ದೇವನಹಳ್ಳಿಯಲ್ಲಿ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್: ನಾಳೆ ಪ್ರಧಾನಿಯಿಂದ ಉದ್ಘಾಟನೆ

author img

By ETV Bharat Karnataka Desk

Published : Jan 18, 2024, 9:56 PM IST

Etv Bharat

ದೇವನಹಳ್ಳಿಯಲ್ಲಿ ನಿಮಾರ್ಣ ಆಗಿರುವ ಬೋಯಿಂಗ್ ವಿಮಾನ ಕಂಪನಿಯ ಜಾಗತಿಕ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕೇಂದ್ರವನ್ನು ಶುಕ್ರವಾರ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ದೇವನಹಳ್ಳಿ: ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಕಲಬುರಗಿಯಿಂದ ನಾಳೆ ಮಧ್ಯಾಹ್ನ 2.10 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ನೇರವಾಗಿ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್​​ನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಸ್ಥಳಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 2.45 ರಿಂದ 3.45 ರವರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 3.55 ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ.

ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಬೋಯಿಂಗ್ ಕೇಂದ್ರ ಮತ್ತು ಇದರ ಜೊತೆಗೆ ಬೋಯಿಂಗ್ ಸುಕನ್ಯಾ ಯೋಜನೆಯನ್ನು ಪ್ರಧಾನಿ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಕೇವಲ ಸೀಮಿತ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಪ್ರಧಾನಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಚೆನ್ನೈಗೆ ಪ್ರಯಾಣಿಸಲಿದ್ಧಾರೆ.

ಏರೋಸ್ಪೇಸ್ ದೊಡ್ಡ ಕ್ಯಾಂಪಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 43 ಎಕರೆ ವಿಶಾಲ ಪ್ರದೇಶದಲ್ಲಿ ಅಂತರಿಕ್ಷಯಾನ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕ್ಯಾಂಪಸ್ ತಲೆ ಎತ್ತಿದೆ. ಬೋಯಿಂಗ್ ಸಹಭಾಗಿತ್ವದ ಏರೋಸ್ಪೇಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರ 2018ರಲ್ಲಿ ಕಾರ್ಯಾರಂಭಿಸಿದೆ. ಭಾರತದಲ್ಲಿ ಅಂತರಿಕ್ಷಯಾನ ವಾಣಿಜ್ಯಿಕ ಮತ್ತು ರಕ್ಷಣಾ ಕ್ಷೇತ್ರವು ವಿಫುಲ ಅವಕಾಶಗಳನ್ನು ಸೃಷ್ಟಿಸಿದ್ದು, ಕಳೆದ ವರ್ಷವಷ್ಟೇ 1600 ಕೋಟಿ ರೂ ಬಂಡವಾಳವನ್ನು ಹೂಡಿಕೆ ಸಾಮರ್ಥ್ಯ ವಿಸ್ತರಿಸಿದ್ದು, ಅಂದಾಜು ಐದು ಸಾವಿರ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ.

ಮೋದಿ ಪ್ರವಾಸ ನಿಗದಿಯಾದ ಕಾರಣಕ್ಕೆ ಶುಕ್ರವಾರ ನಡೆಯಲಿದ್ದ ಪಕ್ಷದ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮೋದಿ ಭೇಟಿ ವೇಳೆ ರೋಡ್ ಶೋಗೂ ಚಿಂತನೆ ನಡೆಸಲಾಗಿತ್ತು. ಈ ಬಗ್ಗೆ ಪಕ್ಷದ ಸಭೆಯಲ್ಲಿ ಚರ್ಚಿಸಿ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಪ್ರಧಾನಿ ಕಾರ್ಯಾಲಯದಿಂದ ರೋಡ್ ಶೋಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ರೋಡ್ ಶೋ ಆಯೋಜನೆಯನ್ನು ಬಿಜೆಪಿ ನಾಯಕರು ಕೈಬಿಡಬೇಕಾಯಿತು.

ಇದನ್ನೂ ಓದಿ: ನಾಳೆ ಬೆಂಗಳೂರಿಗೆ ಮೋದಿ ಭೇಟಿ; ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ರಸ್ತೆಗಳಲ್ಲಿ ಮಾರ್ಗ ಬದಲಾವಣೆ

ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದ ಕೆಲ ಸಂಚಾರ ಮಾರ್ಗಗಳಲ್ಲಿ ಕೆಲ ಬದಲಾವಣೆಗಳನ್ನ ಮಾಡಿ ಬೆಂಗಳೂರು ನಗರ ಸಂಚಾರ ಪೊಲೀಸರು ಆದೇಶಿಸಿದ್ದಾರೆ. ನಾಳೆ ಮಧ್ಯಾಹ್ನ 2:10ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸಲಿರುವ ಹಿನ್ನೆಲೆ ಹೆಣ್ಣೂರು - ಬಾಗಲೂರು ರಸ್ತೆ ಸೇರಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕೆಲ ರಸ್ತೆಗಳಲ್ಲಿ ಬದಲಾವಣೆಗಳನ್ನ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.