ETV Bharat / state

ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ: ಭ್ರಷ್ಟಾಚಾರ ಕಾರ್ಡ್ ಬಿಡುಗಡೆ ಮಾಡಿದ ಪವನ್ ಖೇರಾ

author img

By

Published : May 5, 2023, 1:42 PM IST

ಎಐಸಿಸಿ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಅವರು ಬಿಜೆಪಿ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳನ್ನು ಮಾಡಿ ಭ್ರಷ್ಟಾಚಾರ ಕಾರ್ಡ್ ಬಿಡುಗಡೆ ಮಾಡಿದ್ದಾರೆ.

Corruption card released by Pawan Khera
ಪವನ್ ಖೇರಾರಿಂದ ಭ್ರಷ್ಟಾಚಾರ ಕಾರ್ಡ್ ಬಿಡುಗಡೆ

ಬೆಂಗಳೂರು: ಕಾಂಗ್ರೆಸ್ ಬಿಜೆಪಿ ವಿರುದ್ಧ ಭ್ರಷ್ಟಾಚಾರ ದರ ಕಾರ್ಡ್ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸ್ಥಾನಕ್ಕೆ 2,500 ಕೋಟಿ ರೂ. ವೆಚ್ಚವಾದರೆ, ಸಚಿವ ಸ್ಥಾನಕ್ಕೆ 500 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಭ್ರಷ್ಟಾಚಾರ ದರ ಕಾರ್ಡ್ ಬಿಡುಗಡೆ ಮಾಡಿ ಎಐಸಿಸಿ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ 1,50,000 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರು ಈ 40% ಕಮಿಷನ್ ಸರ್ಕಾರವನ್ನು ತೆಗೆದು ಹಾಕಲಿದ್ದಾರೆ. ರೈತರು, ಮಹಿಳೆಯರು, ಯುವಕರು, ಕಾರ್ಮಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳು ಈ 40% ಸರ್ಕಾರದ ದುರಾಡಳಿತಕ್ಕೆ ಬಲಿಯಾಗಿವೆ. ಬಿಜೆಪಿ ರಾಷ್ಟ್ರೀಯ ನಾಯಕರು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪ್ರವಾಸ ಮಾಡುತ್ತಿದ್ದು, ಉಳಿದ ನಾಲ್ಕು ದಿನಗಳಲ್ಲಿ ಈ ನಾಯಕರು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಉತ್ತರ ನೀಡಬೇಕು ಎಂದು ಖೇರಾ ಆಗ್ರಹಿಸಿದ್ದಾರೆ.

ಕಾಂಗ್ರೆಸ್​ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಕಾರ್ಡ್​​​ಬಲ್ಲಿ, ಕಮಿಷನ್ ವೆಚ್ಚಗಳ ವಿವರಗಳಿವೆ. ವಿವಿಧ ಡೀಲ್‌ಗಳಿಗೆ ಶೇ 40ರಷ್ಟು ಸರ್ಕಾರದ ಬೇಡಿಕೆ ಎಂದು ಕಾರ್ಡ್​​ನಲ್ಲಿ ಉಲ್ಲೇಖಿಸಲಾಗಿದೆ. ಇದು ಮಠದ ಅನುದಾನಗಳಿಗೆ 30% ಕಮಿಷನ್‌ನೊಂದಿಗೆ ಪ್ರಾರಂಭವಾಗುತ್ತದೆ. ರಸ್ತೆ ಒಪ್ಪಂದಗಳಿಗೆ 40% ಮತ್ತು ಕೋವಿಡ್ 19 ಪೂರೈಕೆಗಳಿಗೆ 75% ವರೆಗೆ ಹೋಗುತ್ತದೆ ಎಂದು ವಿವರಿಸಿದೆ. ಕಾಂಗ್ರೆಸ್ ಬಿಡುಗಡೆ ಮಾಡಿರುವ ಒಂದು ಭ್ರಷ್ಟಾಚಾರ ಕಾರ್ಡ್‌ನಲ್ಲಿ ಕಳೆದ 4 ವರ್ಷಗಳಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಎಲ್ಲ ಭ್ರಷ್ಟಾಚಾರ ಆರೋಪಗಳನ್ನು ಪ್ರದರ್ಶಿಸಲಾಗಿದೆ.

ಮಣಿಪುರ ಉರಿಯುತ್ತಿದ್ದು, ಮೋದಿ, ಶಾ ಪ್ರಚಾರದಲ್ಲಿದ್ದಾರೆ: ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವಾಗ ಪ್ರಧಾನಿ ಹಾಗೂ 7 ಕೇಂದ್ರ ಸಚಿವರು ರಾಜ್ಯ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದಾರೆ. ಇದೊಂದು ಗಂಭೀರ ವಿಚಾರ. ಕೇಂದ್ರ ಬಿಜೆಪಿ ಸರ್ಕಾರದ ಆದ್ಯತೆಯೂ ಇಲ್ಲಿ ಬಹಿರಂಗವಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿರುವಾಗ, ಅನೇಕ ಜೀವಗಳ ಬಲಿಯಾಗಿರುವಾಗ ಪ್ರಧಾನಿ 9 ಗಂಟೆಗಳ ರೋಡೋ ಶೋನಲ್ಲಿ ಮಗ್ನರಾಗಿದ್ದಾರೆ. ಅವರಿಗೆ ಚುನಾವಣೆ ಹೊರತಾಗಿ ಬೇರೆ ಯಾವುದೂ ಮುಖ್ಯವಲ್ಲ. ಅವರಿಗೆ ಆಡಳಿತ ಗೊತ್ತಿಲ್ಲ. ಪ್ರಧಾನಮಂತ್ರಿಗಳು, ಗೃಹ ಸಚಿವರು ಹಾಗೂ ಮಂತ್ರಿಗಳು ಕರ್ನಾಟಕದಲ್ಲಿದ್ದಾರೆ. ಮಣಿಪುರದ ಜನ ನಿಮ್ಮನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಜನರು ಈ ಭ್ರಷ್ಟಾಚಾರದ ವಿಚಾರವಾಗಿ ಭಾವುಕರಾಗಿದ್ದಾರೆ. ಈ ವಿಚಾರವಾಗಿ ಆತಂಕ, ಭಯಗೊಂಡಿದ್ದಾರೆ. ಈ ಸರ್ಕಾರ ಮತ್ತೆ ಬಂದರೆ ಶೇ 40ರಷ್ಟು ಭ್ರಷ್ಟಾಚಾರ ಶೇ 80ಕ್ಕೆ ಏರಿಕೆಯಾಗಲಿದೆ. ಅಭಿವೃದ್ಧಿಗಾಗಿ, ಉದ್ಯೋಗ ಸೃಷ್ಟಿಗೆ ಬಳಕೆಯಾಗಬೇಕಿದ್ದ ಹಣ, ಬಿಜೆಪಿ ನಾಯಕರ ಜೇಬು ಸೇರಿದೆ ಎಂದು ಜನ ಬೇಸತ್ತಿದ್ದಾರೆ ಎಂದು ಆರೋಪಿಸಿದರು.

ಸೀತಾಮಾತೆಯಾಗಿ, ಶೂರ್ಪನಕಿ ಆಗಬೇಡಿ: ಕಾಂಗ್ರೆಸ್​ನವರು ಮೋದಿ ರೋಡ್ ಶೋಗೆ ತೊಂದರೆ ಕೊಡುವ ಆರೋಪದ ಬಗ್ಗೆ ಮಾತನಾಡಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣದಲ್ಲಿ ಸೀತೆ ಪಾತ್ರ ನಿರ್ವಹಣೆ ಮಾಡಲಿ, ಶೂರ್ಪನಕಿ ಪಾತ್ರ ನಿರ್ವಹಣೆ ಮಾಡುವುದು ಬೇಡ. ಕೇಂದ್ರ ಸಚಿವರಾಗಿ ನೀವು ಜನರಿಗೆ ತೊಂದರೆ ಆಗದಂತೆ ರೋಡ್ ಶೋ ಮಾಡಲು ಮೋದಿ ಅವರಿಗೆ ಸಲಹೆ ನೀಡಿ ಎಂದು ತಿರುಗೇಟು ನೀಡಿದರು.

ಮೋದಿ ಅವರ ರೋಡ್ ಶೋ ವಿಚಾರವಾಗಿ ಕಾಂಗ್ರೆಸ್ ಕಾನೂನು ಘಟಕ ನೀಡಿರುವ ದೂರಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ನಮಗೆ ಮೋದಿ ಅವರ ರೋಡ್ ಶೋ ಬಗ್ಗೆ ತಕರಾರು ಇಲ್ಲ. ರಿಂಗ್ ರೋಡ್​ನಲ್ಲಿ ನಡೆದ ರೋಡ್ ಶೋನಲ್ಲಿ ಜನರಿಗೆ ಆದ ತೊಂದರೆಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಸಾರ್ವಜನಿಕರ ಹಿತಾಸಕ್ತಿಯಿಂದ ನಾವು ಕೆಲವು ಪ್ರಶ್ನೆ ಎತ್ತಿದ್ದೇವೆ. ಶೋಭಾ ಕರಂದ್ಲಾಜೆ ಅವರು ಉತ್ತಮ ಮ್ಯಾನಿಪುಲೇಟರ್ ಆಗಿದ್ದು, ಇದೇ ಕಾರಣಕ್ಕೆ ಅವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ಮಾಡಿದ್ದಾರೆ. ನಿನ್ನೆ ಮಳೆಯಾಗಿದ್ದು, ಮುಂದಿನ ಮೂರು ದಿನ ಮಳೆ ಬೀಳುವ ಸಾಧ್ಯತೆ ಇದೆ. ಇವರು ರೋಡ್ ಶೋ ಮಾಡಿದರೆ, ದಿನನಿತ್ಯದ ಬದುಕು ನಡೆಸುವವರ ಕಥೆ ಏನಾಗಬೇಕು?. ಪ್ರಧಾನಮಂತ್ರಿಗಳ ಭದ್ರತೆಗಾಗಿ ರಸ್ತೆ ಬದಿಯ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗುತ್ತದೆ. ಇದರಿಂದ ಮಂತ್ರಿಯಾಗಿರುವ ಶೋಭಾ ಅವರಿಗೆ ತೊಂದರೆ ಆಗದಿರಬಹುದು. ಜನಸಾಮಾನ್ಯರಿಗೆ ತೊಂದರೆ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಮೋದಿ ರೋಡ್ ಶೋ ಮಾರ್ಗದಲ್ಲಿ ನೀಟ್ ಪರೀಕ್ಷಾ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ: ಶೋಭಾ ಕರಂದ್ಲಾಜೆ

ರಾಹುಲ್ ಗಾಂಧಿ ಅವರು ರೋಡ್ ಶೋ ಮಾಡುವುದಿಲ್ಲವೇ ಎಂದು ಕೇಳಿದಾಗ, ರಾಹುಲ್ ಗಾಂಧಿ ಅವರು ಪ್ರಧಾನಿಯೂ ಅಲ್ಲ, ರಾಷ್ಟ್ರಪತಿಗಳೂ ಅಲ್ಲ. ಅವರಿಗೆ ಇರುವ ಶಿಷ್ಟಾಚಾರಗಳು ಬೇರೆ, ಪ್ರಧಾನಮಂತ್ರಿಗಳಿಗೆ ಇರುವ ಶಿಷ್ಟಾಚಾರಗಳು ಬೇರೆ. ನಡ್ಡಾ ಅವರಿಗೆ ಇರುವ ಶಿಷ್ಟಾಚಾರ ಬೇರೆ. ನಾವು ಮೋದಿ ಅವರಂತೆ ಬೆಳಗಿನಿಂದ ರಾತ್ರಿವರೆಗೂ ರಸ್ತೆ ಕಬಳಿಸಿಕೊಂಡು ರೋಡ್ ಶೋ ಮಾಡುತ್ತಿಲ್ಲ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.