ETV Bharat / state

ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಮಾತ್ರ ರಾಜಕಾರಣ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ

author img

By ETV Bharat Karnataka Team

Published : Jan 4, 2024, 2:53 PM IST

Updated : Jan 4, 2024, 3:44 PM IST

ರಾಮ ಮಂದಿರ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಾಮಾನ್ಯ ಜನರು ರಾಜಕಾರಣ ಮಾಡುತ್ತಿಲ್ಲ‌, ಕಾಂಗ್ರೆಸ್​‌ನವರು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

bommai
ಬಸವರಾಜ ಬೊಮ್ಮಾಯಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಮ ಮಂದಿರ ನಿರ್ಮಾಣ ಮಾಡುವುದರಲ್ಲಿ ಯಾವುದೇ ಸಾಮಾನ್ಯ ಜನರು ರಾಜಕಾರಣ ಮಾಡುತ್ತಿಲ್ಲ‌ ಹಾಗು ತಲೆ‌ಕೆಡಿಸಿಕೊಂಡಿಲ್ಲ. ಕಾಂಗ್ರೆಸ್​ನವರು ಮಾತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆರ್.ಟಿ ನಗರ ನಿವಾಸದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಶ್ರೀಕಾಂತ್​ ಪೂಜಾರಿ ವಿರುದ್ಧ ಎಷ್ಟೇ ಪ್ರಕರಣ ಇರಲಿ, ಅವು‌ ಕೋರ್ಟ್​ನಲ್ಲಿವೆ. ಆದರೆ, ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರನ್ನು ಬಂಧಿಸುವ ಉದ್ದೇಶವೇನಿತ್ತು. ಹುಬ್ಬಳ್ಳಿಯಲ್ಲಿ ಅನೇಕ ರಾಮ ಮಂದಿರ ಪರವಾಗಿ ಹೋರಾಟ ಮಾಡಿ ಗಡಿಪಾರು ಆದವರು ಇದ್ದಾರೆ. ಇವರೊಬ್ಬರ ಮೇಲೆ ಏಕೆ ಈ ಸಂದರ್ಭದಲ್ಲಿ ಕ್ರಮ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಅವರು ವಿತಂಡ ವಾದ ಮಾಡುವುದರಲ್ಲಿ ನಿಸ್ಸೀಮರು. ಅವರಿಗೆ ಹರಿಪ್ರಸಾದ್ ಮೇಲೆ ನಂಬಿಕೆ ಇಲ್ಲ. ಆದರೆ, ವಿತಂಡ ವಾದ ಮಾಡುವುದೇ ಅವರ ಸ್ವಭಾವ‌ ಎಂದು ಹರಿಹಾಯ್ದಿದ್ದಾರೆ.

ರಾಮಮಂದಿರ ಉದ್ಘಾಟನೆಗೆ ಕೇವಲ ಪ್ರಧಾನಿ ಮೋದಿ ಹೋಗುತ್ತಿಲ್ಲ. ರಾಮ ಮಂದಿರಕ್ಕಾಗಿ ಯಾರು ಸೇವೆ, ಸಹಾಯ ಮಾಡಿದ್ದಾರೋ ಅವರನ್ನು ರಾಮ ಮಂದಿರ ಸಮಿತಿಯವರು ಕರೆದಿದ್ದಾರೆ. ಕಾಂಗ್ರೆಸ್​ನವರು ಅದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಗುಜರಾತಿನ ಸೋಮನಾಥ ಮಂದಿರ ಅತ್ಯಂತ ಅದ್ಭುತ ಮಂದಿರ, ಆಗಿನ ಪ್ರಧಾನಿ ನೆಹರು ಹೋಗಿರಲಿಲ್ಲ. ಹಾಗಾಗಿ, ವಲ್ಲಭಭಾಯಿ ಪಟೇಲರು ಹೋಗಿದ್ದರು. ಈಗಿನ ಪ್ರಧಾನಿ ಆಸ್ತಿಕರಿದ್ದಾರೆ, ರಾಮನ ಭಕ್ತರಿದ್ದಾರೆ‌. ಹೀಗಾಗಿ, ಅವರು ಉದ್ಘಾಟನೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಆರೋಪಗಳಿಗೆ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಹರಿಪ್ರಸಾದ್​ ಅವರ ಹೇಳಿಕೆ ಬಗ್ಗೆ ಇಲಾಖೆಗೆ ಮಾಹಿತಿ ಇಲ್ಲ ಅಂತ ಹೇಳಿದ್ದಾರೆ. ಗೋಧ್ರಾ ಮಾದರಿ ಹಿಂಸೆ ನಡೆಯಬಹುದು ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಒಬ್ಬ ಎಂಎಲ್​ಸಿ ಗೆ ಇರುವ ಮಾಹಿತಿ ಗೃಹ ಇಲಾಖೆಗೆ ಇಲ್ಲ ಎಂದರೆ ಇಂಟೆಲಿಜೆನ್ಸ್ ವಿಫಲವಾಗಿದೆ.‌ ಗೃಹ ಸಚಿವರು ಅಗತ್ಯ ಬಿದ್ದರೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಪ್ರಚೋದನಾತ್ಮಕವಾಗಿ ಹೇಳಿಕೆ ನೀಡಿದ್ದಾರೆ, ಬೇರೆಯವರು ಮಾಡಿದ್ದರೆ ಇಷ್ಟೊತ್ತಿಗೆ ಬಂಧಿಸುತ್ತಿದ್ದರು. ಬಿಜೆಪಿಯವರು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದ್ದಾರೆ ಎಂದು ಪರಮೇಶ್ವರ್​ ಹೇಳಿದ್ದಾರೆ. ಆದರೆ, ಇವರ ಅವಧಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಮೇಲೆ ದೌರ್ಜನ್ಯ, ಅಕ್ರಮ ಸಾರಾಯಿ ದಂಧೆ, ಇಸ್ಪೀಟ್ ಅಡ್ಡೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗೃಹ ಇಲಾಖೆ ಮುಖ್ಯಸ್ಥರಾಗಿ ಪರಮೇಶ್ವರ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿಎಂ ಯಾವುದೇ ಅನುಮಾನದ ಮಾತುಗಳಿಗೆ ಉತ್ತರ ಕೊಡುವುದಿಲ್ಲ ಅಂತ ಹೇಳಿದ್ದಾರೆ. ಹರಿಪ್ರಸಾದ್ ಯಾವ ಆಧಾರದಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಅನ್ನುವುದನ್ನು ಕರೆದು ವಿಚಾರಣೆ ಮಾಡಬೇಕು. ಅದನ್ನು ಬಿಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಬಾರದು ಎಂದರು.

ಇದನ್ನೂ ಓದಿ : ಬಿ.ಕೆ.ಹರಿಪ್ರಸಾದ್ ತಮ್ಮ ನಾಯಕರನ್ನು ಮೆಚ್ಚಿಸಲು ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ: ಬೊಮ್ಮಾಯಿ

ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬರಪೀಡಿತ ಅಂತ ಆಗಿವೆ. ಮುಂಗಾರು, ಹಿಂಗಾರು ವಿಫಲವಾಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಕಾಮಗಾರಿ ಆರಂಭಿಸಿಲ್ಲ. ಆರು ತಿಂಗಳು ಕಳೆದರೂ ಯಾವುದೇ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿಲ್ಲ. ಆಹಾರ ಉತ್ಪಾದನೆ ಕಡೆಮೆಯಾಗಲಿದೆ ಅಂತ ಕೃಷಿ ಇಲಾಖೆ ವರದಿ ಹೇಳುತ್ತಿದೆ. ಹೀಗಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಾರೆ. ಹಿಂದೆ ಎಲ್ಲ ಸರ್ಕಾರಗಳು ಕೇಂದ್ರದ ದಾರಿ ಕಾಯದೇ ಮೊದಲು ಜನರ ಸಂಕಷ್ಟಕ್ಕೆ ಸ್ಪಂದಿಸುವ‌ ಕೆಲಸ ಮಾಡುತ್ತಿದ್ದವು. ಆದರೆ ಈ ಸರ್ಕಾರ ಕೇಂದ್ರದ ಕಡೆ ಬೆರಳು ತೋರಿ ಸುಮ್ಮನಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಬೆಳಗಾವಿ ವಿಧಾನಸಭೆ ಅಧಿವೇಶನಕ್ಕೆ ಮೊದಲು ರೈತರ ಪ್ರತಿ ಹೆಕ್ಟೇರ್​ಗೆ 2000 ರೂ. ಹಾಕುವುದಾಗಿ ಹೇಳಿದ್ದರು. ಈಗ ಆಧಾರ ಲಿಂಕ್ ಮಾಡುವುದಾಗಿ ಹೇಳುತ್ತಿದ್ದಾರೆ. ಈಗಾಗಲೇ ಸಾಫ್ಟ್​​​ವೇರ್ ನಲ್ಲಿ ಸುಮಾರು 69 ಲಕ್ಷ ರೈತರ ಆಧಾರ್​ ಲಿಂಕ್ ಇರುವ ದಾಖಲೆ ಇದೆ. ಅದನ್ನು ಮರೆಮಾಚಿ ಸರ್ಕಾರದ ಆರ್ಥಿಕ ದುಸ್ಥಿತಿ ಮರೆಮಾಚಲು ತಾಂತ್ರಿಕ ಕಾರಣ ಎಂದು ಹೇಳುತ್ತಿದ್ದಾರೆ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದರೆ‌ ತಕ್ಷಣ 2000 ರೂ. ಖಾತೆಗೆ ಜಮಾ ಮಾಡಬೇಕು. ರೈತರು ತಿರುಗಿ ಬಿದ್ದರೆ ಯಾವ ಸರ್ಕಾರವೂ ನಡೆಯುವುದು ಕಷ್ಟವಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

Last Updated :Jan 4, 2024, 3:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.