ETV Bharat / state

Vidhana Parishad Oath: ವಿಧಾನಪರಿಷತ್​ಗೆ ನೂತನವಾಗಿ ಆಯ್ಕೆಯಾದ ಎಮ್​ಎಲ್​ಸಿಗಳ ಪ್ರಮಾಣವಚನ ಸ್ವೀಕಾರ

author img

By

Published : Jul 3, 2023, 1:14 PM IST

Updated : Jul 3, 2023, 3:28 PM IST

ವಿಧಾನಪರಿಷತ್​ಗೆ ನೂತನವಾಗಿ ಆಯ್ಕೆಯಾದ ಜಗದೀಶ್​ ಶೆಟ್ಟರ್ ಮತ್ತು ಎನ್. ಎಸ್. ಬೋಸರಾಜ್ ಅವರು ಭಗವಂತನ ಹೆಸರಿನ ಮೇಲೆ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕಾರ
ಪ್ರಮಾಣ ವಚನ ಸ್ವೀಕಾರ

ವಿಧಾನಪರಿಷತ್​ಗೆ ನೂತನವಾಗಿ ಆಯ್ಕೆಯಾದ ಎಮ್​ಎಲ್​ಸಿಗಳ ಪ್ರಮಾಣವಚನ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ಜಗದೀಶ್ ಶೆಟ್ಟರ್, ಎನ್.ಎಸ್. ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಜಗದೀಶ್​ ಶೆಟ್ಟರ್ ಮತ್ತು ಎನ್.ಎಸ್. ಭೋಸರಾಜು ಅವರು ಭಗವಂತನ ಹೆಸರಿನ ಮೇಲೆ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ನೂತನ ಸದಸ್ಯರುಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಭಾಪತಿಗಳು ನೂತನ ಶಾಸಕತ್ರಯರಿಗೆ ಸದನದ ನಿಯಮಾವಳಿಗಳು ಒಳಗೊಂಡ ಕಿಟ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ ಬಿಟಿ ಮತ್ತು ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್, ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ, ಶಾಸಕರುಗಳು ಇದ್ದರು.

ಇದನ್ನೂ ಓದಿ: ವಿಧಾನಮಂಡಲ ಜಂಟಿ ಅಧಿವೇಶನಕ್ಕೂ ಮುನ್ನ ಪ್ರತಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ!

ನೂತನ ನೇಮಕ: ವಿಧಾನಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕರನ್ನಾಗಿ ಶಾಸಕ ಅಶೋಕ ಪಟ್ಟಣ ಅವರು ನೇಮಗೊಂಡಿದ್ದಾರೆ.‌ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದೆ. ಹಿರಿಯ ಶಾಸಕ, ಮಾಜಿ ಸಚಿವ ಟಿ. ಬಿ. ಜಯಚಂದ್ರ ಅವರು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಸಭಾಪತಿ ಸ್ಥಾನದ ಕುರಿತು ಶೆಟ್ಟರ್​ ಪ್ರತಿಕ್ರಿಯೆ: ವಿಧಾನ ಪರಿಷತ್​ ಸದಸ್ಯ ಜಗದೀಶ್​ ಶೆಟ್ಟರ್ 'ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು, ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ‌. ಮುಂದಿನ ದಿನಮಾನಗಳಲ್ಲಿ ಸಭಾಪತಿ ಮಾಡುವುದು ಕಾಂಗ್ರೆಸ್​ಗೆ ಬಿಟ್ಟ ವಿಚಾರ' ಎಂದು ತಮ್ಮ ಇಂಗಿತವನ್ನು ಜೂನ್​ ತಿಂಗಳಲ್ಲಿ ಮಾಧ್ಯಮದವರ ಮುಂದೆ ವ್ಯಕ್ತಪಡಿಸಿದ್ದರು. ವಿಧಾನ ಪರಿಷತ್​ನಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನನಗೊಂದು ಅವಕಾಶ ಮಾಡಿಕೊಟ್ಟಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟ್ರ ಹಾಗೂ ರಾಜ್ಯದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದರು.

ಲೋಕಸಭಾ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ನಾನು ಸಿದ್ಧನಿದ್ದೇನೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಈಗಾಗಲೇ ನಮ್ಮ ಪಕ್ಷದ ವರಿಷ್ಠರ ಜೊತೆಗೆ ಚರ್ಚೆ ಮಾಡಿದ್ದೇನೆ. ಎಲ್ಲೇ ಪ್ರವಾಸ ಮಾಡಿ ಎಂದರೂ ನಾನು ನನ್ನ ಸಮಯವನ್ನು ಕೊಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಗೆಲ್ಲಲು ನಾನೂ ಪ್ರಯತ್ನ ಮಾಡುತ್ತೇನೆ. ಚುನಾವಣೆಯಲ್ಲಿ ನಿಮ್ಮ ಉಪಯೋಗ ತೆಗೆದುಕೊಳ್ಳುತ್ತೇವೆ ಎಂದು ನಮ್ಮ ಕಾಂಗ್ರೆಸ್ ಪಕ್ಷ ಹೇಳಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ವಿಧಾನಮಂಡಲ ಜಂಟಿ ಅಧಿವೇಶನಕ್ಕೂ ಮುನ್ನ ಪ್ರತಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ!

Last Updated : Jul 3, 2023, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.