ETV Bharat / state

ರಾಜ್ಯದ 16 ನೇ ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ ಪ್ರಕಟ :ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

author img

By

Published : Apr 13, 2023, 12:13 PM IST

ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ ಹೊರಬಿದ್ದಿದ್ದು, ಇಂದಿನಿಂದ ನಾಮಪತ್ರಿಕೆ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.

election commission
ಚುನಾವಣೆ ಆಯೋಗ

ಬೆಂಗಳೂರು: ರಾಜ್ಯದ 16 ನೇ ವಿಧಾನಸಭೆ ಚುನಾವಣೆಗೆ ಇಂದು (ಏ.13) ಅಧಿಸೂಚನೆ ಹೊರಬಿದ್ದಿದೆ. ಮೇ 10 ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. 30 ದಿನಗಳ ಕಾಲ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ. ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.

election notification
ಅಧಿಸೂಚನೆ ಪತ್ರ

ಏಪ್ರಿಲ್​ 14 ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ಮತ್ತು 16 ರಂದು ಭಾನುವಾರ ರಜಾ ದಿನವಾಗಿರುವುದರಿಂದ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಸಲು ಕೇವಲ 6 ದಿನ ಮಾತ್ರ ಸಮಯ ಸಿಗಲಿದೆ. ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದರ ಜೊತೆಗೆ ಚುನಾವಣ ಆಯೋಗ ನೀತಿ ಸಂಹಿತೆ ಜಾರಿಯನ್ನು ಇನ್ನಷ್ಟು ಬಿಗಿಗೊಳಿಸಲಿದೆ. ಕೇಂದ್ರ ಚುನಾವಣ ಆಯೋಗ ಮಾರ್ಚ್ 29 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಕ್ಷಣದಿಂದ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಇದೀಗ ಅಧಿಸೂಚನೆ ಹೊರಬಿದ್ದಿದೆ.

election notification
ಅಧಿಸೂಚನೆ ಪತ್ರ

ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ: ರಾಜ್ಯದಲ್ಲಿ ಮೇ 10 ರಂದು ಮತದಾನ ಮತ್ತು ಮೇ 13ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಣೆಯಾಗಲಿದೆ. ಏಪ್ರಿಲ್ 20 ಕ್ಕೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಆಯಾ ಜಿಲ್ಲಾಧಿಕಾರಿಗಳು ಅಧಿಸೂಚನೆ ಪ್ರಕಟಿಸಿದ್ದಾರೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಏಪ್ರಿಲ್ 24 ರಂದು ಕೊನೆಯ ದಿನವಾಗಿದೆ. ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ಓದಿ: ಎರಡನೇ ಪಟ್ಟಿ ಪ್ರಕಟ.. ಬಿಜೆಪಿ ಏಳು ಹಾಲಿ ಶಾಸಕರ ಬದಲಿಗೆ ಟಿಕೆಟ್​ ಪಡೆದ ಹೊಸ ಅಭ್ಯರ್ಥಿಗಳಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.