ETV Bharat / state

ಬಿಜೆಪಿ - ಜೆಡಿಎಸ್ ಮೈತ್ರಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Sep 8, 2023, 5:08 PM IST

Updated : Sep 8, 2023, 5:33 PM IST

BJP-JDS alliance in Lok Sabha Election: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

not-bothered-about-bjp-jds-alliance-in-lok-sabha-polls-says-cm-siddaramaiah
ಬಿಜೆಪಿ - ಜೆಡಿಎಸ್ ಮೈತ್ರಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿ - ಜೆಡಿಎಸ್ ಮೈತ್ರಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಯಾರು ಮೈತ್ರಿ ಮಾಡಿಕೊಳ್ಳುತ್ತಾರೆ, ಯಾರು ಪ್ರತ್ಯೇಕವಾಗಿ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನುವ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಜನರ ಬಳಿ ಮತ ಕೇಳುತ್ತೇವೆ. ಜನ ನಮ್ಮ ಪರವಾಗಿದ್ದಾರೆ, ನಮಗೆ ಮತ ಹಾಕುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಒಪ್ಪಿಕೊಂಡಿದ್ದು, ನಾಲ್ಕು ಕ್ಷೇತ್ರಗಳನ್ನು ಜೆಡಿಎಸ್​​ಗೆ ನೀಡಲು ಅಮಿತ್ ಶಾ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿಯನ್ನು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.

ಡಿಸಿಎಂ ಡಿಕೆಶಿ ಪ್ರತಿಕ್ರಿಯೆ: ಮೈತ್ರಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಹಿರಿಯರಾದ ದೇವೇಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಹೋಗುವುದಿಲ್ಲ ಎಂದಿದ್ದರು. ಒಂದು ಸಿದ್ಧಾಂತ ಇಟ್ಟುಕೊಂಡು ಪಕ್ಷ ಕಟ್ಟಿರುತ್ತಾರೆ, ಈಗ ಆ ಪಕ್ಷ ಉಳಿಯುತ್ತದೋ, ಏನಾಗುತ್ತದೊ ಗೊತ್ತಿಲ್ಲ? ಹಾಲಿ ಶಾಸಕರು, ಮಾಜಿ ಶಾಸಕರು ಏನಾಗುತ್ತಾರೋ ಅದರ ಬಗ್ಗೆ ನನಗೆ ಗೊತ್ತಿಲ್ಲ. ಹೊಂದಾಣಿಕೆ ಮಾಡುವುದಾದರೆ ಬೆಸ್ಟ್ ಆಫ್ ಲಕ್ ಎಂದು ತಿಳಿಸಿದ್ದಾರೆ.

ಹೆಚ್ ಡಿ ರೇವಣ್ಣ ಹೇಳಿದ್ದೇನು?: ಬಿಜೆಪಿ ಜೊತೆಗಿನ ಮೈತ್ರಿ ಸಂಬಂಧ ಪಕ್ಷದ ವರಿಷ್ಠರ ನಿರ್ಧಾರ ಅಂತಿಮ. ನಮ್ಮ ಪಕ್ಷದ ಮುಖಂಡರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವು ಬದ್ಧ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಬೆಂಗಳೂರಿನಲ್ಲಿ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ರೇವಣ್ಣ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆ. ಬೇರೆ ವಿಚಾರಗಳ ಬಗ್ಗೆ ಯಾವ ಚರ್ಚೆ ನಡೆದಿದೆ ಎಂಬುದರ ಕುರಿತು ಗೊತ್ತಿಲ್ಲ ಎಂದರು.

ನಮ್ಮ ನಾಯಕರಾದ ದೇವೇಗೌಡರು, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಎಲ್ಲರೂ ಸೇರಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಸೆಪ್ಟೆಂಬರ್​ 10 ರಂದು ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಅಂತಿಮ ನಿರ್ಧಾರದ ಬಗ್ಗೆ ಅಲ್ಲಿ ಚರ್ಚೆ ಮಾಡುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ದೂರ ಇರಬೇಕಾ ಎಂಬುದರ ಕುರಿತು ನಿರ್ಧರಿಸುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: 'ಲೋಕ' ಸಮರಕ್ಕೆ ಬಿಜೆಪಿ-ಜೆಡಿಎಸ್ ದೋಸ್ತಿ... 'ದಳ'ಕ್ಕೆ ಸಿಗಲಿರುವ 4 ಕ್ಷೇತ್ರಗಳು ಯಾವುವು?

Last Updated : Sep 8, 2023, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.