ETV Bharat / state

ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ಹೆಸರು: ಕಾರ್ಯಕ್ರಮದ ಫ್ಲೆಕ್ಸ್​ನಲ್ಲಿ ಅಪ್ಪು ಫೋಟೋಗಿಲ್ಲ ಜಾಗ

author img

By

Published : Feb 7, 2023, 10:19 PM IST

ನಾಯಂಡಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರನ್ನಿಡುವ ಕಾರ್ಯಕ್ರಮದ ಫ್ಲೆಕ್ಸ್​ನಲ್ಲಿ ಪುನೀತ್​ ಅವರ ಫೋಟೋ ಹಾಕದೇ ಇರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

puneeth rajkumar
ಕಾರ್ಯಕ್ರಮದ ಫ್ಲೆಕ್ಸ್​ನಲ್ಲಿ ಅಪ್ಪು ಫೋಟೋಗಿಲ್ಲ ಜಾಗ

ಬೆಂಗಳೂರು: ಕರ್ನಾಟಕ ರತ್ನ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ನಾಯಂಡಳ್ಳಿ ಜಂಕ್ಷನ್​ನಿಂದ ಬನ್ನೇರುಘಟ್ಟ ವರೆಗಿನ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರಿಡಲಾಗಿದೆ. ಅದ್ಧೂರಿ ಕಾರ್ಯಕ್ರಮದ ಫ್ಲೆಕ್ಸ್​ನಲ್ಲಿ ಪುನೀತ್ ರಾಜ್‍ಕುಮಾರ್ ಫೋಟೋ ಇಲ್ಲದೇ ಇದ್ದುದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುನೀತ್ ನಿಧನದ ನಂತರದಲ್ಲಿ ಅವರನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವ ಕಾರ್ಯ ನಡೆಯುತ್ತಿದೆ. ರಸ್ತೆ, ವೃತ್ತ, ಪಾರ್ಕ್​ಗೆ ಅವರ ಹೆಸರಿಡಲಾಗುತ್ತಿದೆ. ಈಗ ಮೈಸೂರು ರಸ್ತೆಯಿಂದ ಬನ್ನೇರುಘಟ್ಟವರೆಗಿನ ರಸ್ತೆಗೆ ಪುನೀತ್ ಹೆಸರಿಡುವ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದೆ. ಇಂದು ಈ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡಲಾಯಿತು. ಆದರೆ ಈ ಕಾರ್ಯಕ್ರಮಕ್ಕಾಗಿ ಫ್ಲೆಕ್ಸ್ ಮಾಡಿಸಲಾಗಿದ್ದು, ಪುನೀತ್ ಫೋಟೋ ಅಲ್ಲಿ ಕಂಡುಬಂದಿಲ್ಲ.

"ಪುನೀತ್ ರಾಜ್‌ಕುಮಾರ್ ರಸ್ತೆ ನಾಮಕರಣ ಸಮಾರಂಭವಂತೆ. ಆದರೆ ನಮ್ಮ ಅಪ್ಪು ಫೋಟೋ ಹಾಕಬೇಕು ಎಂಬ ಪ್ರಬುದ್ಧತೆ ಇಲ್ಲ. ಈ ರೀತಿ ರಾಜಕೀಯಕ್ಕಾಗಿ ಪುನೀತ್ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆಯುವ ನೀಚ ರಾಜಕೀಯ ಬಿಡಿ" ಅಂತಾ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉದ್ಘಾಟನಾ ಸಮಾರಂಭದ ದೊಡ್ಡದ ಫ್ಲೆಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರ ಫೋಟೋಗಳಿವೆ. ಆದರೆ ಯಾರಿಗೋಸ್ಕರ ಈ ಕಾರ್ಯಕ್ರಮ ಮಾಡಲಾಗುತ್ತಿದೆಯೋ ಅವರ ಫೋಟೋವನ್ನು ಎಲ್ಲಿಯೂ ಹಾಕಿಲ್ಲ. ಇದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬೆಂಗಳೂರಿನ ರಿಂಗ್ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು: ಸಚಿವ ಆರ್ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.