ETV Bharat / state

ರಾಜ್ಯದಲ್ಲಿ ಯಾರಿಗೂ ಝಿಕಾ ಪಾಸಿಟಿವ್ ಬಂದಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

author img

By ETV Bharat Karnataka Team

Published : Nov 2, 2023, 3:41 PM IST

Updated : Nov 2, 2023, 7:32 PM IST

ರಾಜ್ಯದಲ್ಲಿ ಯಾರಿಗೂ ಝಿಕಾ ಪಾಸಿಟಿವ್ ಬಂದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಕಾಣಸಿಕೊಂಡಿದೆ ಎನ್ನುವ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಯಾರಿಗೂ ಝಿಕಾ ಪಾಸಿಟಿವ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸೊಳ್ಳೆಗಳಿಗೆ ವೈರಸ್ ತಗುಲಿದೆ. ಅವುಗಳ ಪರೀಕ್ಷೆಯಲ್ಲಿ ಪೂಲ್​ನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. 10 ದಿನಗಳ ಹಿಂದೆಯೇ ಆರೋಗ್ಯ ಇಲಾಖೆಗೆ ರಿಪೋರ್ಟ್ ಬಂದಿದೆ. ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ ಎಂದರು.

  • ರಾಜ್ಯದ 68 ಕಡೆಗಳಲ್ಲಿ ನಡೆಸಲಾದ ಸೊಳ್ಳೆ ಪರೀಕ್ಷೆಗಳಲ್ಲಿ ಚಿಕ್ಕಬಳ್ಳಾಪುರದ ತಲಕಾಯಬೆಟ್ಟದ ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಅಧಿಕಾರಿಗಳು ವಿಶೇಷ ಸಭೆ ನಡೆಸಿದ್ದು, ವೈರಸ್ ಹರಡದಂತೆ ತಡೆಯಬೇಕಾದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

    ಇದುವರೆಗೂ ಮನುಷ್ಯರ ದೇಹದಲ್ಲಿ ಝೀಕಾ ವೈರಸ್…

    — Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 2, 2023 " class="align-text-top noRightClick twitterSection" data=" ">

ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿತ್ತು. ಝಿಕಾ ಮತ್ತು ನಿಫಾ ಬೇರೆ ಬೇರೆ ವೈರಾಣುವಾಗಿದೆ. ನಿಫಾ ಗಂಭೀರ ವೈರಾಣುವಾಗಿದೆ. ಝಿಕಾ ಅಷ್ಟು ಮನುಷ್ಯರಿಗೆ ಬಾಧಿಸುವುದಿಲ್ಲ. ಆದ್ದರಿಂದ ಜನರಿಗೆ ಈ ಬಗ್ಗೆ ಭಯ ಬೇಡ. ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಖಾಯಿಲೆ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. 3 ದಿನಗಳಲ್ಲಿ ಸ್ಪಷ್ಟವಾದ ರಿಪೋರ್ಟ್ ಬರುವ ಸಾಧ್ಯತೆ ಇದೆ. ಇಲಾಖೆಯಿಂದ ಮುಂಜಾಗ್ರತಾ ಕ್ರಮವನ್ನೂ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಸರ್ವಿಲೆನ್ಸ್ ಅಲ್ಲಿ ವೈರಸ್ ಇರುವುದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಮುಂದೆ ಝಿಕಾ ವೈರಸ್ ಹರಡದೆ ಇರುವುದಕ್ಕೆ ಅಲ್ಲಿನ ಸ್ಥಳೀಯ ಸಂಸ್ಥೆಯೊಂದಿಗೆ ಮಾತನಾಡಿಕೊಂಡು ನಮ್ಮ ಇಲಾಖೆಯವರು ಸೇರಿ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದ್ರೆ ನಮ್ಮ ಆಯುಕ್ತರೊಂದಿಗೆ ಮಾತನಾಡಬಹುದು. ಯಾರೂ ಕೂಡಾ ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ. ಖಂಡಿತವಾಗಿಯೂ ಇದನ್ನು ನಿಯಂತ್ರಣಕ್ಕೆ ತೆಗೆದುಕೊಂಡು ನಿಭಾಯಿಸುವ ಕೆಲಸವನ್ನು ಮಾಡುತ್ತೇವೆ ಎಂದರು.

ಅವಾಗವಾಗ ಸ್ಯಾಂಪ್ಲಿಂಗ್ ಟೆಸ್ಟ್​ ಮಾಡುತ್ತಿರುತ್ತೇವೆ. ಅದನ್ನು ತೆಗೆದುಕೊಂಡು ಲ್ಯಾಬ್​ಗೆ ಕಳುಹಿಸುತ್ತಿರುತ್ತೇವೆ. ಅದರಲ್ಲಿ ಸೊಳ್ಳೆಯಲ್ಲಿ ಝಿಕಾ ಇದೆ ಎಂದು ಪೂನಾದಲ್ಲಿರುವ ಎನ್​ಐವಿ (ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿ) ಅವರು ಹೇಳಿದ್ದಾರೆ. ಆದರೆ, ಮನುಷ್ಯರಿಗೆ ಯಾರಿಗೂ ಕೂಡಾ ಬಂದಿಲ್ಲ ಎಂದು ತಿಳಿಸಿದರು.

ಈಗಾಗಲೇ ಒಂದೇ ಜಾಗದಲ್ಲಿ ವಾಸವಿದ್ದ ಮೂರು ನಾಲ್ಕು ಜನರಿಗೆ ಜ್ವರ ಬಂದಿದ್ದು, ಅವರ ಸ್ಯಾಂಪಲ್​ ಅನ್ನು ಕೂಡಾ ಕಳುಹಿಸಿಕೊಟ್ಟಿದ್ದೇವೆ. ಆ ವರದಿ ಬಂದ ಮೇಲೆ ಗೊತ್ತಾಗುತ್ತೆ. ಆ ರಿಪೋರ್ಟ್​ ಇನ್ನು ಬಂದಿಲ್ಲ. ಆದರೆ, ಅದರಲ್ಲಿ ಕೆಲವರು ಜ್ವರ ಬಂದವರು ಡಿಸ್ಚಾರ್ಜ್​ ಆಗಿದ್ದಾರೆ. ಎರಡನೆಯದಾಗಿ ಇದು ಯಾವುದೇ ಭಯಪಡುವಂತಹ ವೈರಾಣು ಅಲ್ಲ. ನಮ್ಮ ಜೀವಕ್ಕೆ ತೊಂದರೆಯಾಗುವಂತದ್ದು ಹಾಗೂ ಆರೋಗ್ಯ ತೀರಾ ಹದಗೆಡುವಂತದ್ದು ಏನಿಲ್ಲ ಎಂದಿದ್ದಾರೆ.

ಗರ್ಭಿಣಿಯರಿಗೆ ಮುನ್ನೆಚ್ಚರಿಕೆ ನೀಡಿದ ಆರೋಗ್ಯ ಇಲಾಖೆ: ಗರ್ಭಿಣಿಯರಿಗೆ ಝಿಕಾ ವೈರಸ್ ಮಾರಕ ಕಾಯಿಲೆಯಾಗಿದೆ. ಸೌಮ್ಯ ಲಕ್ಷಣಗಳಿಂದ ಪ್ರಾರಂಭವಾಗುವ ಜ್ವರವು ಜೀವ ತೆಗೆಯುವ ರೋಗವಾಗಿ ಬದಲಾಗುತ್ತದೆ. ಗರ್ಭಿಣಿ ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ಹೀಗಾಗಿ ಗರ್ಭಿಣಿಯರ ಆರೋಗ್ಯದ ಬಗ್ಗೆೆ ಕಾಳಜಿ ವಹಿಸಬೇಕಾಗಿದೆ ಎಂದು ಆರೋಗ್ಯ ಇಲಾಖೆ ಮುನ್ನೆೆಚ್ಚರಿಕೆ ನೀಡಿದೆ.

ಮುನ್ನೆಚ್ಚರಿಕೆ ಕ್ರಮಗಳೇನು? : ಪ್ರಸ್ತುತ ಝಿಕಾ ವೈರಸ್‌ಗೆ ಯಾವುದೇ ನಿಗದಿತ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಇಲ್ಲ. ಝಿಕಾ ಹಗಲಿನಲ್ಲಿ ಬರುವ ಸೊಳ್ಳೆಗಳು ಕಚ್ಚುವುದರಿಂದ ಹರಡುತ್ತದೆ. ಈಗ ಚಳಿಗಾಲವಾದ್ದರಿಂದ ಸೊಳ್ಳೆ ಉತ್ಪತ್ತಿಯೂ ಹೆಚ್ಚು. ಹೀಗಾಗಿ, ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೊಳ್ಳೆ ನಿವಾರಕ ಕ್ರೀಮ್‌ಗಳ ಬಳಕೆ, ಮೈತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಬಳಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ತಡೆಗಟ್ಟಬಹುದು. ಮುಖ್ಯವಾಗಿ, ಈ ಕಾಯಿಲೆ ಇರುವ ಜಾಗಕ್ಕೆ ತೆರಳಿದಾಗ ಸಂಭೋಗ ಕ್ರಿಯೆ ನಡೆಸಬಾರದು. ಈ ವೇಳೆ ಗರ್ಭ ಧಾರಣೆಯೂ ಒಳ್ಳೆಯದಲ್ಲ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ ಪತ್ತೆ: ಗರ್ಭಿಣಿಯರ ಆರೋಗ್ಯದ ಮೇಲೆ ಹೆಚ್ಚು ನಿಗಾ

Last Updated : Nov 2, 2023, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.