ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ, ಹಾಗಾಗಿ ಪ್ರಧಾನಿ ಮೋದಿ ಪದೇ ಪದೆ ಬರುತ್ತಾರೆ: ಎಂ ಬಿ ಪಾಟೀಲ್

author img

By

Published : Jan 19, 2023, 3:40 PM IST

KPCC Campaign Committee President M B Patil

ಪ್ರಧಾನಿ ಮೋದಿ ಇಂದು ರಾಜ್ಯಕ್ಕೆ ಆಗಮಿಸಿದ್ದು, ಇದನ್ನು ಟೀಕಿಸಿ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್​ ಮಾತನಾಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ, ಹಾಗಾಗಿ ಪ್ರಧಾನಿ ಮೋದಿ ಪದೇ ಪದೆ ರಾಜ್ಯಕ್ಕೆ ಬರುತ್ತಾರೆ: ಎಂ ಬಿ ಪಾಟೀಲ್

ಬೆಂಗಳೂರು: ಬಿಜೆಪಿಯಲ್ಲಿ ನಾಯಕತ್ವ ಇಲ್ಲ. ಅದಕ್ಕೆ ಪ್ರಧಾನಿ ಮೋದಿ ಪದೇ‌ ಪದೆ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ರಾಜ್ಯ ಪ್ರವಾಸದ ಹಿನ್ನೆಲೆ ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ರಾಜ್ಯಕ್ಕೆ ಪದೇ ಪದೆ ಬರ್ತಾರೆ. ಅದು ಗೊತ್ತಿರುವ ವಿಚಾರ. ಚುನಾವಣೆ ಸಮಯದಲ್ಲಿ ಮಾತ್ರ ಪ್ರಚಾರಕ್ಕೆ ಬರ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹೆಸರು ಕೆಟ್ಟಿದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯ. ಬಿಜೆಪಿಗೆ ಒಂದೇ ಆಸರೆ ಅದು ಮೋದಿ. ಅದಕ್ಕೆ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇದೆ. ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ನಾಯಕತ್ವ ಇದೆ. ಆದರೆ, ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಹಿಂದೆ ಯಡಿಯೂರಪ್ಪ ಇದ್ದರು, ಈಗ ಯಾರೂ ಇಲ್ವಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷದ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಪ್ರಧಾನಿ ಮೋಡಿ ನಡೆಯಲ್ಲ ಎಂದು ಟೀಕಿಸಿದರು.

ಬಿಜೆಪಿ ರಾಜ್ಯ ನಾಯಕರ ಬಳಿ ಯಾವುದೇ ಬಂಡವಾಳ ಇಲ್ಲ. ಹೀಗಾಗಿ ಮೋದಿ ಪದೇ ಪದೆ ಬರುತ್ತಿದ್ದಾರೆ. ರಾಜ್ಯದ ಜನರಿಗೆ ಇವರ ಅಭಿವೃದ್ಧಿ ಶೂನ್ಯ ಎಂಬುದು ಗೊತ್ತಿದೆ. ಬಿಜೆಪಿ ಸರ್ಕಾರ 5 ಲಕ್ಷ ಕೋಟಿ ಸಾಲ ಮಾಡಿದೆ. ರಾಜ್ಯದಲ್ಲಿ ಇವರು ಮೋದಿ ಹೆಸರು ಹೇಳಿಕೊಂಡೇ ಬದುಕಬೇಕು. ಗೃಹ ಸಚಿವ ಅಮಿತ್ ಶಾ, ಬಿಜಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಆಯ್ತು, ಈಗ ಮೋದಿ ಬಂದಿದ್ದಾರೆ. ಮೋದಿಯವರ ಮೋಡಿ ಏನೂ ಇಲ್ಲಿ ನಡೆಯಲ್ಲ ಎಂದು ಕಿಡಿ ಕಾರಿದರು.

ರಾಜ್ಯ ನಾಯಕರಲ್ಲಿ ಮತ ಸೆಳೆಯುವ ಶಕ್ತಿ ಇಲ್ಲ. ಮೋದಿ ರಾಜ್ಯಕ್ಕೆ ಎಷ್ಟು ಬಾರಿ ಬಂದರೂ ಅದರಲ್ಲಿ ಯಾವುದೇ ವ್ಯತ್ಯಾಸ ಆಗೋದಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಂದರೂ ಯಾವುದೇ ವ್ಯತ್ಯಾಸ ಆಗೋದಿಲ್ಲ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಸಾಧನೆ ಹೆಚ್ಚಲಿದೆ. ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸಾಧನೆ ಮಾಡುತ್ತೇವೆ.‌ ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದ ಕಲ್ಪವೃಕ್ಷ, ಕಾಮಧೇನು ಇದ್ದಂತೆ ಎಂದರು.

ಕಾಂಗ್ರೆಸ್ ಟ್ವೀಟ್: ಯಾದಗಿರಿಯಲ್ಲಿ ಪ್ರಧಾನಿಯಿಂದ ಉದ್ಘಾಟನೆಗೊಳ್ಳುತ್ತಿರುವ ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬಿಜೆಪಿ ಟ್ವೀಟ್​ಗೆ ತಿರುಗೇಟು ನೀಡಿದೆ. ಬಿಜೆಪಿ ಹಂಚಿಕೊಂಡಿರುವ ಈ ದಾಖಲೆಯಲ್ಲಿ 'ಸ್ಕಾಡಾ' ದ ಉಲ್ಲೇಖ ಎಲ್ಲಿದೆ? 'ಜಿಐಎಸ್' ಆಧಾರಿತ ನೀರು ನಿರ್ವಹಣಾ ಪದ್ಧತಿಗೂ 'ಸ್ಕಾಡಾ' ಗೂ ವ್ಯತ್ಯಾಸ ತಿಳಿದಿಲ್ಲವೇ ಬಿಜೆಪಿಗೆ? ಯೋಜನೆ ಹಾಗೂ ಯೋಜನಾ ವೆಚ್ಚ ಮಾರ್ಪಾಡಾಗಿದ್ದು, ತಿಳಿದಿಲ್ಲವೇ? ಕಾಂಗ್ರೆಸ್ ಸಾಧನೆಯನ್ನು ಹೈಜಾಕ್ ಮಾಡಲು ಇನ್ನೂ ಅದೆಷ್ಟು ತಂತ್ರಗಳನ್ನು ಹುಡುಕುತ್ತದೆ ಬಿಜೆಪಿ? ಎಂದು ವಾಗ್ದಾಳಿ ನಡೆಸಿದೆ.

ಬಿಜೆಪಿ ಟ್ವೀಟ್ ಮಾಡಿ, ನಾರಾಯಣಪುರ ಎಡದಂಡೆ ಕಾಲುವೆ ಯೋಜನೆ ನಮ್ಮದೆಂದು ಬೀಗುತ್ತಿರುವ ಎಂ.ಬಿ. ಪಾಟೀಲ್ ಅವರೆ, ಸುಳ್ಳು ಹೇಳುವ ಚಾಳಿ ಬಿಡಿ. ದಾಖಲೆಗಳು ಇಲ್ಲಿವೆ, ಕಣ್ತೆರೆದು ನೋಡಿ ಎಂದು ದಾಖಲೆಗಳನ್ನು ಟ್ಯಾಗ್ ಮಾಡಿತ್ತು.

ಇದನ್ನೂ ಓದಿ: ಯಾದಗಿರಿ ಐತಿಹಾಸಿಕ, ಪಾರಂಪರಿಕ ಭೂಮಿ, ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿ: ಕನ್ನಡದಲ್ಲಿ ಶುಭಕೋರಿದ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.