ETV Bharat / state

ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅನುಷ್ಟಾನದಲ್ಲಿ ಸರ್ಕಾರದ ನಿರ್ಲಕ್ಷ್ಯ: ಹೈಕೋರ್ಟ್ ತರಾಟೆ

author img

By

Published : Feb 15, 2023, 9:25 PM IST

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ನಿಯಮಗಳ ಜಾರಿಗೊಳಿಸಲು ಸರ್ಕಾರದ ನಿರ್ಲಕ್ಷ್ಯ- ಹೈಕೋರ್ಟ್​ನಿಂದ ತೀವ್ರ ತರಾಟೆ.

High Court
ಹೈಕೋರ್ಟ್

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ನಿಯಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಲ್ಲಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಸ್ಥೆ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಸರ್ಕಾರವನ್ನು ತರಾಟೆ ತೆಗೆದುಕೊಂಡ ಹೈಕೋರ್ಟ್​: ''ಕಾಯ್ದೆ ಮತ್ತು ನಿಯಮಗಳ ಅಡಿಯಲ್ಲಿನ ನಿಬಂಧನೆಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿರಬೇಕು. ಕೇವಲ ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ'' ಎಂದು ಹೇಳಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರೂಪಿಸಿರುವ ನಿಯಮಗಳನ್ನು ಅನುಷ್ಠಾನಕ್ಕೆ ತರದ ಸರ್ಕಾರದ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಸರ್ಕಾರ ವಿರುದ್ಧ ಗರಂ ನ್ಯಾಯ ಪೀಠ ಆಕ್ರೋಶ: ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರದ ಪರ ವಕೀಲರು ದಿನಾಂಕ ನಿಗದಿ ಪಡಿಸಿದ್ದು, ಸಭೆ ನಡೆಸುವುದಾಗಿ ಹೇಳಿದ್ದರು. ಆದರೆ, ದಿನಾಂಕ ನಿಗದಿಯಾಗಿದ್ದರೂ ಸಭೆ ನಡೆಸಿರಲಿಲ್ಲ. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಸರ್ಕಾರ ವಿರುದ್ಧ ಗರಂ ಆಗಿದೆ. ನಿಯಮ 60ರ ಅಡಿಯಲ್ಲಿ ಪರಿಗಣಿಸಿ, ಉನ್ನತ ಅಧಿಕಾರದ ವಿಚಕ್ಷಣಾ ಮತ್ತು ಮೇಲ್ವಿಚಾರಣಾ ಸಮಿತಿಯ ಶಾಸನಬದ್ಧ ಸಭೆಗಳ ಕುರಿತು ರಾಜ್ಯ ಸರ್ಕಾರವು ಒದಗಿಸಿದ ಪ್ರಮಾಣಪತ್ರ ಮತ್ತು ಪಟ್ಟಿಯನ್ನು ನ್ಯಾಯಾಲಯವು ಪರಿಶೀಲಿಸಿತು.

ಕಾಯಿದೆಯ ಪ್ರಕಾರ ಪರಿಶಿಷ್ಟರಿಗೆ ಜಾಗೃತಿ ಮೂಡಿಸುವುದು ಎಚ್ಚರಿಕೆ ನೀಡುವುದಕ್ಕಾಗಿ ಪ್ರತಿವರ್ಷ ಕನಿಷ್ಠ ಎರಡು ಸಭೆಗಳನ್ನು ನಿಯಮಗಳಡಿ ನಿಗದಿಪಡಿಸಿದ್ದರೂ, 2022ರಲ್ಲಿ ಒಂದೂ ಸಭೆಯೂ ಕೂಡ ನಡೆದಿಲ್ಲ.

ಎರಡು ಸಭೆಗಳನ್ನು ನಡೆಸಲೇ ಬೇಕು: ಒಂದು ಕ್ಯಾಲೆಂಡರ್ ವರ್ಷದಲ್ಲಿ ಈ ಕಾಯ್ದೆಯಡಿ ಎರಡು ಶಾಸನಬದ್ಧ ಸಭೆಗಳನ್ನು ನಡೆಸಬೇಕಿತ್ತು. ಆದರೆ, ರಾಜ್ಯ ಸರ್ಕಾರವು ಅಂತಹ ವಿಷಯಗಳಲ್ಲಿ ಕೇವಲ ಮೂಕ ಪ್ರೇಕ್ಷಕನಾಗಿ ಇರಬಾರದಿತ್ತು. ಒಂದು ವರ್ಷದಿಂದ ಒಂದೇ ಒಂದು ಸಭೆಯನ್ನೂ ನಡೆಸದಿರುವುದು ಖಂಡಿತ. ನ್ಯಾಯಾಲಯ ನೀಡಿದ ಭರವಸೆ ಪಾಲನೆಯಲ್ಲ. ಭವಿಷ್ಯದಲ್ಲಿ ರಾಜ್ಯ ಸರ್ಕಾರವು ಅಂತಹ ಸಡಿಲಿಕೆಯನ್ನು ಮಾಡಬಾರದು. ದೌರ್ಜನ್ಯ ಕಾಯ್ದೆ ಮತ್ತು ನಿಯಮಗಳ ನಿಬಂಧನೆಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ನಾವು ನಿರೀಕ್ಷೆ ಮಾಡುತ್ತೇವೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅಲ್ಲದೆ, ಅರ್ಜಿಯ ಸಂಬಂಧದಂತೆ ಈ ಕಾಯಿದೆಯಡಿ ಕನಿಷ್ಟ ಎರಡು ವರ್ಷಗಳಿಗೊಂಮೆ ಸಭೆ ನಡೆಸಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರ ಯಾವುದೇ ರೀತಿಯ ಸಭೆಗಳನ್ನು ನಡೆಸುತ್ತಿಲ್ಲ ಎಂದು ಅರ್ಜಿಯಲ್ಲಿ ಕೋರಿದ್ದರು.

ಇದನ್ನೂ ಓದಿ: ಎರಡನೇ ವಿವಾಹ ಕಾನೂನು ಬಾಹಿರ, ಆದರೆ ಅನೈತಿಕವಲ್ಲ : ಜೀವನಾಂಶ ನೀಡಲು ಹೈಕೋರ್ಟ್ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.