ETV Bharat / state

’ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ’ : ಬಹಿರಂಗ ಪತ್ರದ ಮೂಲಕ ವಂದನೆ ತಿಳಿಸಿದ ಕಟೀಲ್

author img

By ETV Bharat Karnataka Team

Published : Nov 15, 2023, 10:25 PM IST

ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಹಿರಂಗ ಪತ್ರದ ಮೂಲಕ ಇಡೀ ಸಂಘಟನೆಗೆ ವಂದನೆ ತಿಳಿಸಿದ್ದಾರೆ.

ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು : ರಾಜ್ಯಾಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದು, ಅವಕಾಶ ನೀಡಿದ್ದ ವರಿಷ್ಠರು, ಸಹಕಾರ ನೀಡಿದ್ದ ಎಲ್ಲರನ್ನೂ ಸ್ಮರಿಸುತ್ತಾ, ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ. ಇನ್ನು ಮುಂದೆಯೂ ಸರ್ವರ ಸಹಕಾರ, ಪ್ರೀತಿ, ವಿಶ್ವಾಸ ಬಯಸುವೆ ಎಂದು ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಹಿರಂಗ ಪತ್ರದ ಮೂಲಕ ಪಕ್ಷದ ಇಡೀ ಸಂಘಟನೆಗೆ ವಂದನೆ ತಿಳಿಸಿದ್ದಾರೆ.

ಬಹಿರಂಗ ಪತ್ರದ ಮೂಲಕ ವಂದನೆ ತಿಳಿಸಿದ ಕಟೀಲ್
ಬಹಿರಂಗ ಪತ್ರದ ಮೂಲಕ ವಂದನೆ ತಿಳಿಸಿದ ಕಟೀಲ್

ಮಾತೃ ಸಮಾನವಾಗಿರುವ ನಮ್ಮ ಪಕ್ಷ ಮತ್ತು ಹಿರಿಯರು ಸಾಮಾನ್ಯ ಕಾರ್ಯಕರ್ತನಾದ ನನಗೆ ಪಕ್ಷದ, ರಾಜ್ಯದ ಅತ್ಯುನ್ನತ ಜವಾಬ್ದಾರಿ ವಹಿಸಿದ ಈ 4 ವರ್ಷ 3 ತಿಂಗಳ ಅವಧಿಯಲ್ಲಿ ಈ ಹೊಣೆಗಾರಿಕೆಯನ್ನು ನಿಮ್ಮೆಲ್ಲರ ಸಹಕಾರದಿಂದ ಪರಿಪೂರ್ಣತೆಯಿಂದ ನಿರ್ವಹಿಸಿದ್ದೇನೆ. ಈ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರ್ಗದರ್ಶನ ಮಾಡಿರುವ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ, ಜವಾಬ್ದಾರಿ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮತ್ತು ಈಗ ರಾಷ್ಟ್ರೀಯ ಗೃಹಸಚಿವರಾಗಿರುವ ಅಮಿತ್ ಶಾ ಅವರಿಗೆ, ಪಕ್ಷದ ಪ್ರಸ್ತುತ ರಾಷ್ಟ್ರಾಧ್ಯಕ್ಷರಾದ ಜೆ ಪಿ ನಡ್ಡಾ ಅವರಿಗೆ, ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ನೀಡುತ್ತಾ ಬಂದಿರುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ ಎಲ್ ಸಂತೋಷ್ ಅವರಿಗೆ, ನಮ್ಮ ಪಕ್ಷದ ಶಕ್ತಿ ಯಡಿಯೂರಪ್ಪ ಅವರಿಗೆ, ಪಕ್ಷದ ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರುಗಳಿಗೆ, ಪಕ್ಷದ ರಾಜ್ಯ ಪದಾಧಿಕಾರಿಗಳಿಗೆ, ಮೋರ್ಚಾಗಳ ಮುಖಂಡರುಗಳಿಗೆ ಹಾಗೂ ವಿಶೇಷವಾಗಿ ನಮ್ಮ ಪಕ್ಷದ ಎಲ್ಲಾ ದೇವದುರ್ಲಭ ಕಾರ್ಯಕರ್ತ ಬಂಧುಗಳಿಗೆ ಧನ್ಯವಾದಗಳು ಎಂದು ಪತ್ರದ ಮೂಲಕ ಕಟೀಲ್ ವಂದನೆಗಳನ್ನು ತಿಳಿಸಿದ್ದಾರೆ.

ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಕಾಯಾ, ವಾಚಾ, ಮನಸಾ ಪಕ್ಷದ ಸೇವೆ ಮಾಡುವ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಕೈ ಹಿಡಿದು ಮುನ್ನಡೆಸಿದ ಎಲ್ಲಾ ಪ್ರೀತಿಪಾತ್ರರಿಗೆ ಧನ್ಯವಾದಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಕೃಪೆ, ದೈವ ದೇವರುಗಳ ಅನುಗ್ರಹದಿಂದ ಪಕ್ಷದ ಬೆಳವಣಿಗೆಗೆ ನನ್ನ ಸೇವೆ ನಿರಂತರವಾಗಿರಲಿದೆ. ಇನ್ನು ಮುಂದೆಯೂ ಸರ್ವರ ಸಹಕಾರ, ಪ್ರೀತಿ, ವಿಶ್ವಾಸ ಬಯಸುವೆ ಎಂದು ಬಹಿರಂಗ ಪತ್ರದ ಮೂಲಕ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ನೊಗ ಹೊತ್ತ ವಿಜಯೇಂದ್ರ : ರಾಜ್ಯ ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಬಿಜೆಪಿಯ ಹಿರಿಯ ನಾಯಕ ಬಿ. ಎಸ್‌ ಯಡಿಯೂರಪ್ಪ ಅವರ ಪುತ್ರ ಬಿ. ವೈ ವಿಜಯೇಂದ್ರ ಇಂದು ಅಧಿಕಾರ ಸ್ವೀಕರಿಸಿದರು. ಈ ಮೂಲಕ ರಾಜ್ಯ ಬಿಜೆಪಿಗೆ ಯುವ ನೇತಾರನ ಸಾರಥ್ಯ ಸಿಕ್ಕಿದೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಿತು. ರಾಜ್ಯಾಧ್ಯಕ್ಷರ ಕಚೇರಿಯಲ್ಲಿ ಹಿರಿಯರ ಆಶೀರ್ವಾದ ಪಡೆದು, ನಳೀನ್​ ಕುಮಾರ್​ ಕಟೀಲ್ ಅವರಿಂದ ವಿಜಯೇಂದ್ರ ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ : ರಾಜ್ಯ ಬಿಜೆಪಿ ನೊಗ ಹೊತ್ತ ವಿಜಯೇಂದ್ರ: ಯುವ ನಾಯಕನಿಗೆ ಹಿರಿಯರ ಬೆಂಬಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.