ETV Bharat / state

ಕರ್ನಾಟಕದಲ್ಲಿ ಮೀಸಲಾತಿ ರದ್ದು ಕ್ರಮಕ್ಕೆ ಮುಸ್ಲಿಂ ನಾಯಕರ ಆಕ್ರೋಶ: ಕಾನೂನು ಹೋರಾಟಕ್ಕೆ ನಿರ್ಧಾರ

author img

By

Published : Mar 26, 2023, 5:51 PM IST

Updated : Mar 26, 2023, 9:40 PM IST

ಇತರೆ ಹಿಂದುಳಿದ ವರ್ಗಗಳ ಪ್ರವರ್ಗದಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಮೀಸಲಾತಿಯನ್ನು ತೆಗೆದುಹಾಕಿರುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ಮುಸಲ್ಮಾನ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Muslim leaders slam Karnataka govt for scrapping reservation, to challenge move in court
ಕರ್ನಾಟಕದಲ್ಲಿ ಮೀಸಲಾತಿ ರದ್ದು ಕ್ರಮಕ್ಕೆ ಮುಸ್ಲಿಂ ನಾಯಕರ ಆಕ್ರೋಶ: ಕಾನೂನು ಹೋರಾಟಕ್ಕೆ ನಿರ್ಧಾರ

ಬೆಂಗಳೂರು: ಶೇಕಡಾ 4 ರಷ್ಟು ಮೀಸಲಾತಿ ನೀಡುವ 2ಬಿ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಪ್ರವರ್ಗದಿಂದ ಮುಸ್ಲಿಂ ಸಮುದಾಯವನ್ನು ತೆಗೆದುಹಾಕಿರುವ ಕ್ರಮಕ್ಕೆ ಮುಸ್ಲಿಂ ಸಮುದಾಯದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಸರ್ಕಾರದ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಅವರು ಹೇಳಿದ್ದಾರೆ. ಶುಕ್ರವಾರ ಸಭೆ ಸೇರಿದ್ದ ಕರ್ನಾಟಕ ಸಚಿವ ಸಂಪುಟವು ಈ ಶೇಕಡ 4ರಷ್ಟು ಮೀಸಲಾತಿಯಲ್ಲಿ ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತರಿಗೆ ತಲಾ ಶೇಕಡ ಎರಡರಂತೆ ಸಮಾನವಾಗಿ ಹಂಚಿಕೆ ಮಾಡಲು ನಿರ್ಧರಿಸಿದೆ.

ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುನ್ನ ಕೈಗೊಳ್ಳಲಾಗಿರುವ ಸರ್ಕಾರದ ನಿರ್ಧಾರವನ್ನು ರಾಜಕೀಯವಾಗಿ ಪ್ರಭಾವಿಯಾಗಿರುವ ಎರಡೂ ಸಮುದಾಯಗಳು ಸ್ವಾಗತಿಸಿವೆ. ಸರ್ಕಾರದ ನಿರ್ಧಾರದಿಂದ, ಕುಟುಂಬ ಆದಾಯದ ಆಧಾರದ ಮೇಲೆ ನಿರ್ಧರಿಸಲಾಗುವ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಮೀಸಲಾದ 10 ಪ್ರತಿಶತ ಮೀಸಲಾತಿಗಾಗಿ ಸಾಮಾನ್ಯ ವರ್ಗದೊಂದಿಗೆ ಈಗ ಮುಸ್ಲಿಮರು ಸ್ಪರ್ಧಿಸುವಂತಾಗಿದೆ. ಇದು ತಮ್ಮ ಸಮುದಾಯಕ್ಕೆ ಮಾಡಿದ ಗಂಭೀರ ಅನ್ಯಾಯ ಎಂದು ಮುಸ್ಲಿಂ ನಾಯಕರು ಹೇಳಿದ್ದಾರೆ.

ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಕ್ಯಾಬಿನೆಟ್ ಶಿಫಾರಸುಗಳನ್ನು ಮಾಡಿದೆ. ಶೇಕಡಾ 6 ರಷ್ಟು ಎಸ್‌ಸಿ (ಎಡ) ಕ್ಕೆ, ಶೇಕಡಾ 5.5 ರಷ್ಟು ಎಸ್‌ಸಿ (ಬಲ), ಶೇಕಡಾ 4.5 ಸ್ಪೃಶ್ಯರಿಗೆ ಮತ್ತು ಶೇಕಡಾ 1 ರಷ್ಟು ಇತರರಿಗೆ (ಒಟ್ಟು 17 ಶೇಕಡಾ) ಮೀಸಲಾತಿಯನ್ನು ಕರ್ನಾಟಕ ಸಚಿವ ಸಂಪುಟ ಶಿಫಾರಸು ಮಾಡಿದೆ. ಆದರೆ ದಲಿತ ನಾಯಕರು ಈ ಒಳಮೀಸಲಾತಿಯಿಂದ ಖುಷಿಯಾಗಿಲ್ಲ ಮತ್ತು ಕರ್ನಾಟಕ ಶಾಸಕಾಂಗವು ಅಂಗೀಕರಿಸಿದ ಎಸ್‌ಸಿ ಸಮುದಾಯಕ್ಕೆ ಶೇಕಡಾ 17 ರಷ್ಟು ಮೀಸಲಾತಿಗೆ ಸಾಂವಿಧಾನಿಕ ಮಾನ್ಯತೆ ಸಿಗುವವರೆಗೆ ಏನೂ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಸಮುದಾಯದ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಮುಸ್ಲಿಂ ಮುಖಂಡರೊಬ್ಬರು ಆರೋಪಿಸಿದ್ದಾರೆ. ಕರ್ನಾಟಕದ ಕೆಲವು ಉನ್ನತ ಮುಸ್ಲಿಂ ಧಾರ್ಮಿಕ ಮುಖಂಡರು ಶನಿವಾರ ಸಭೆ ನಡೆಸಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿದರು. ಈ ವಿಚಾರದಲ್ಲಿ ಕಾನೂನು ಮಾರ್ಗದಲ್ಲಿ ಹೋರಾಡಲು ಅವರು ಪ್ರತಿಜ್ಞೆ ಮಾಡಿದ್ದಾರೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಸರ್ಕಾರದ ರಾಜಕೀಯ ನಡೆಯಾಗಿದೆ ಎಂದೂ ಅವರು ಹೇಳಿದ್ದಾರೆ.

ಇಂದು ಮುಸ್ಲಿಮರು ಶಿಕ್ಷಣದ ವಿಷಯದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಿಂತ ಕೆಳಗಿದ್ದಾರೆ. ಮುಸ್ಲಿಮರ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ ಎಲ್ಲರಿಗೂ ಕಾಣಿಸುತ್ತಿದೆ ಎಂದು ಜಾಮಿಯಾ ಮಸೀದಿಯ ಮೌಲವಿ ಮಕ್ಸೂದ್ ಇಮ್ರಾನ್ ಮತ್ತು ಉಲೇಮಾ ಕೌನ್ಸಿಲ್ ಸದಸ್ಯರೊಬ್ಬರು ಮಾಧ್ಯಮಕ್ಕೆ ತಿಳಿಸಿದರು. ನಾವು ಬೀದಿಗಿಳಿಯುವುದಿಲ್ಲ ಅಥವಾ ರಸ್ತೆಯಲ್ಲಿ ಗಲಾಟೆ ಮಾಡುವುದಿಲ್ಲ. ಆದರೆ ನಾವು ನಮ್ಮ ಹಕ್ಕುಗಳಿಗಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡಲಿದ್ದೇವೆ. ಒಕ್ಕಲಿಗರು ಮತ್ತು ಲಿಂಗಾಯತರು ಹೆಚ್ಚುವರಿ ಮೀಸಲಾತಿ ಪಡೆಯಲು ಯಾವುದೇ ಅಭ್ಯಂತರವಿಲ್ಲ, ಆದರೆ ಬೇರೆಯವರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಅದು ಆಗಬಾರದು ಎಂದು ಅವರು ಹೇಳಿದರು.

ಇತರರಿಂದ ಹಕ್ಕುಗಳನ್ನು ಕಸಿದುಕೊಂಡ ಹಕ್ಕುಗಳನ್ನು ಪಡೆಯಲು ಬಯಸುತ್ತಾರೆಯೇ ಎಂಬುದನ್ನು ನಾವು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದವರಿಗೆ ಕೇಳಲು ಬಯಸುತ್ತೇವೆ. ಅವರು ತಮ್ಮ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರಕ್ಕೆ ಒತ್ತಾಯಿಸಲಿ. ಆದರೆ ಮುಸ್ಲಿಮರ ಮೀಸಲಾತಿ ಕಡಿಮೆ ಮಾಡದೆ ಒಕ್ಕಲಿಗರು ಹಾಗೂ ಲಿಂಗಾಯತರ ಮೀಸಲಾತಿ ಹೆಚ್ಚಿಸಲು ಸಾಧ್ಯ ಎಂದು ಅವರು ಹೇಳಿದರು. ಮಿಲ್ಲರ್ಸ್ ರಸ್ತೆಯ ಖಾದರಿಯಾ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಹೋರಾಟವನ್ನು ಕಾನೂನುಬದ್ಧವಾಗಿ ಮುನ್ನಡೆಸುವ ಕುರಿತು ವಕೀಲರೊಂದಿಗೆ ಸಮಾಲೋಚನೆ ನಡೆಸಿದರು.

ಇದನ್ನೂ ಓದಿ : ಮೀಸಲಾತಿ ವಿಚಾರ.. ಡಿಕೆಶಿ ಹೇಳಿಕೆಗೆ ಖಡಕ್​ ಉತ್ತರ ಕೊಟ್ಟ ಯತ್ನಾಳ್​

Last Updated : Mar 26, 2023, 9:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.