ETV Bharat / state

ಮೊಮ್ಮಕ್ಕಳನ್ನು ಆಡಿಸುವುದು ಬಿಟ್ಟು ಕಾಂಗ್ರೆಸ್ ಸೇರ್ಪಡೆ ಯಾಕೆ?: ಶೆಟ್ಟರ್‌ ಬಗ್ಗೆ ಮುನಿರತ್ನ ವ್ಯಂಗ್ಯ

author img

By

Published : Apr 16, 2023, 9:48 PM IST

ಸಚಿವ ಮುನಿರತ್ನ ಅವರಿಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿ ಫಾರಂ ಸ್ವೀಕರಿಸಿದರು.

muniratna-reacts-on-jagdish-shettar-resignation
ಮೊಮ್ಮಕ್ಕಳನ್ನು ಆಡಿಸುವುದು ಬಿಟ್ಟು ಕಾಂಗ್ರೆಸ್ ಸೇರ್ಪಡೆ ಯಾಕೆ..?, ಶೆಟ್ಟರ್​​ಗೆ 27 ಅಲ್ಲ 67 ಆಗಿದೆ: ಮುನಿರತ್ನ

ಸಚಿವ ಮುನಿರತ್ನ ಪ್ರತಿಕ್ರಿಯೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಯಾಕೆ ಪಕ್ಷ ಬಿಟ್ಟರೋ ಗೊತ್ತಿಲ್ಲ. ಅವರು ತುಂಬಾ ಲೇಟಾಗಿ ಹೋಗ್ತಿದ್ದಾರೆ, ಆರಾಮಾಗಿ ಮಕ್ಕಳು, ಮೊಮ್ಮಕ್ಕಳನ್ನು ಆಡಿಸೊದು ಬಿಟ್ಟು ಕಾಂಗ್ರೆಸ್ ಸೇರ್ಪಡೆ ಯಾಕೆ ಬೇಕು?, ಅವರಿಗೇನು ಈಗ 27 ವರ್ಷವೇ? 67 ವರ್ಷವಾಗಿದೆ. ಅಲ್ಲಿ ಧೂಳು ಹೊಡೆಯೋಕೆ ಕೂಡ ಇವರನ್ನು ಬಳಸಿಕೊಳ್ಳಲ್ಲ ಎಂದು ಸಚಿವ ಮುನಿರತ್ನ ಟಾಂಗ್ ಕೊಟ್ಟರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿ ಫಾರಂ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ನಮ್ಮ ರಾಜರಾಜೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ಬಿ ಫಾರಂ ಪಡೆದಿದ್ದೇನೆ. ನಾಳೆ 10:30ಕ್ಕೆ ನಾಮಪತ್ರ ಸಲ್ಲಿಸುತ್ತೇನೆ. ನನ್ನನ್ನು ಗುರುತಿಸಿ ಟಿಕೆಟ್ ನೀಡಿದ ನಮ್ಮ ನಾಯಕರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಶೆಟ್ಟರ್​​ಗೆ ಸ್ಪೀಕರ್ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ, ಮುಖ್ಯಮಂತ್ರಿ ಸ್ಥಾನ ಸೇರಿ ಎಲ್ಲ ಸ್ಥಾನಗಳನ್ನೂ ಕೊಟ್ಟಿದೆ. ಎಲ್ಲೋ ನೆಮ್ಮದಿಯಾಗಿ ಪಕ್ಷದ ಕೆಲಸ ಮಾಡಿಕೊಂಡಿರುವುದು ಬಿಟ್ಟು ಈಗ ರಾಜೀನಾಮೆ ಕೊಟ್ಟು ಊರೂರು ಸುತ್ತುತ್ತಿದ್ದಾರೆ. ಕಾಂಗ್ರೆಸ್ ಸಹವಾಸ ಯಾಕೆ ಬೇಕು, ಅವರಿಗೆ ಬಿಜೆಪಿ ಏನು ಕಡಿಮೆ ಮಾಡಿದೆ. ಸಿಎಂ ಸ್ಥಾನಕ್ಕಿಂತ ಇನ್ನೇನು ಕೊಡಬೇಕು ತೃಪ್ತಿ ಮಾಡಲು. ಎಲ್ಲ ಅಧಿಕಾರ ಕೊಟ್ಟರೂ ಅಧಿಕಾರದ ದಾಹ ತೀರಲಿಲ್ಲ. ಹಾಗಾಗಿ ದೇವರು ಪ್ರತ್ಯಕ್ಷವಾದರೆ ಶೆಟ್ಟರ್​ಗೆ ಇನ್ನೂ 100 ವರ್ಷ ಆಯಸ್ಸು ಕೊಡಲಿ ಎಂದು ಕೇಳುತ್ತೇನೆ ಎಂದು ವ್ಯಂಗ್ಯವಾಡಿದರು.

ಶೆಟ್ಟರ್ ಹಿರಿಯ ನಾಯಕರು, ರಾಜ್ಯ ಸುತ್ತಾಡಿ, ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲಿ. ಅದನ್ನು ಬಿಟ್ಟು ಮಗನಿಗೆ ಮದುವೆ ಮಾಡು ಎಂದರೆ ಅಪ್ಪನೇ ಮದುವೆ ಮಾಡಿಕೊಂಡಂತೆ ಅಭ್ಯರ್ಥಿ ಗೆಲ್ಲಿಸಿಕೊಂಡು ಬಾ ಎಂದರೆ ನಾನೇ ಅಭ್ಯರ್ಥಿ ಎಂದು ಹೋಗುತ್ತಿದ್ದಾರೆ. ಶೆಟ್ಟರ್​ಗೆ ಇದೆಲ್ಲಾ ಬೇಕಾ? ಯಡಿಯೂರಪ್ಪ ರೀತಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಇದೆಯಾ? ಶೆಟ್ಟರ್ ತಮ್ಮ ಪಕ್ಕದ ಕ್ಷೇತ್ರ ಗೆಲ್ಲಿಸಲಿ ನೋಡೋಣ, ಅವರೇ ಬಿಜೆಪಿ ಚಿಹ್ನೆ ಇಲ್ಲದಿದ್ದರೆ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್ ತಪ್ಪಿನಿಂದ ನಾವು ಬಿಜೆಪಿಗೆ ಬಂದಿದ್ದೇವೆ: ನಾವು ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿರೋದು ಅವರ ತಪ್ಪಿನಿಂದ. ನಾವೇನು ಇಲ್ಲಿಗೆ ಬರಬೇಕು ಎಂದು ಬಂದಿಲ್ಲ. ಸಮ್ಮಿಶ್ರ ಸರ್ಕಾರ ರಚನೆ ಮಾಡಿದಾಗ ಯಾರನ್ನು ಕೇಳಿಕೊಂಡು ಹೋಗಿ ಮಾಡಿದೀರಿ, ಸಂತೆಯಲ್ಲಿರುವ ಕುರಿಗಳ ರೀತಿ ತೆಗೆದುಕೊಂಡು ಹೋಗಿ ನಮ್ಮನ್ನು ಅಲ್ಲಿ ನಿಲ್ಲಿಸಿ ನಾವು ಮೈತ್ರಿ ಸೇರಿಕೊಂಡಿದ್ದೇವೆ ಎಂದರೆ ನಾವು ಎಷ್ಟು ದಿನ ಅಲ್ಲಿ ತಾಳ್ಮೆಯಿಂದ ಇರಬೇಕು. ನಾವು ಸರಿಯಾಗಿಯೇ ಬಿಜೆಪಿಗೆ ಬಂದಿದ್ದೇವೆ. ಚುನಾವಣೆ ಎದುರಿಸಿ ಬಂದಿದ್ದೇವೆ. ನಾವು ಅಧಿಕಾರಕ್ಕೆ ಹೋಗಿದ್ದು ನಿಜ, ಆದರೆ ನಾವೇನು ಮುಖ್ಯಮಂತ್ರಿ ಆಗಿದ್ದೇವಾ? ಶಾಸಕರಾಗಿದ್ದೇವೆ. ಮಂತ್ರಿಯಾಗಿದ್ದೇವೆ ಅಷ್ಟೇ ಎಂದರು.

ಇದನ್ನೂ ಓದಿ: ಪ್ರಚಾರಕ್ಕೆ ತೆರಳಿದ ಬಿ.ವೈ.ವಿಜಯೇಂದ್ರರಿಗೆ ತರಲಘಟ್ಟ ತಾಂಡಾದಲ್ಲಿ ವಿರೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.