ETV Bharat / state

ಧರ್ಮಸ್ಥಳಕ್ಕೆ ಆಣೆ ಪ್ರಮಾಣ ಮಾಡಲು ಬರ್ತಿನಿ ನೀವೂ ಬನ್ನಿ: ಶರತ್ ಬಚ್ಚೇಗೌಡರಿಗೆ ಸಚಿವ ಎಂಟಿಬಿ ಸವಾಲ್

author img

By

Published : Mar 3, 2023, 7:08 PM IST

Updated : Mar 3, 2023, 7:50 PM IST

ಮಾಡಳ್ ವಿರೂಪಾಕ್ಷಪ್ಪ ಪುತ್ರನ ಲಂಚ ಪ್ರಕರಣದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿದುಬರಬೇಕಿದೆ - ಸಚಿವ ಎಂಟಿಬಿ ನಾಗರಾಜ್​

ಸಚಿವ ಎಂಟಿಬಿ ನಾಗರಾಜ್​
ಸಚಿವ ಎಂಟಿಬಿ ನಾಗರಾಜ್​

ಸಚಿವ ಎಂಟಿಬಿ ನಾಗರಾಜ್​

ಹೊಸಕೋಟೆ : ಶಾಸಕ ಶರತ್ ಬಚ್ಚೇಗೌಡ ಹೊಸಕೋಟೆ ಕ್ಷೇತ್ರಕ್ಕೆ ಬರುವ ಅನುದಾನವನ್ನ ಸಚಿವ ಎಂಟಿಬಿ ನಾಗರಾಜ್ ತಡೆಹಿಡಿದಿದ್ದಾರೆ ಅಂತಾ ನಿನ್ನೆ (ಗುರುವಾರ) ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸಚಿವ ಎಂಟಿಬಿ ನಾಗರಾಜ್ ಶಾಸಕ ಶರತ್​ಗೆ ತಿರುಗೇಟು ನೀಡಿದ್ದಾರೆ.

ಹೊಸಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಎಂಟಿಬಿ ನಾಗರಾಜ್, ಸಚಿವನಾಗಿ ಹೊಸಕೋಟೆಗೆ ನಾನು ಏನು ಮಾಡಿದ್ದೇನಿ ಅಂತ ಶಾಸಕ‌ ಶರತ್ ಕೇಳಿದ್ದಾರೆ. ನಾನು ನೋಡಲ್ ಉಸ್ತುವಾರಿಯಾಗಿ ಹೊಸಕೋಟೆಯನ್ನ ಆಯ್ಕೆ ಮಾಡಿದ್ದೇನೆ. ಪ್ರೋಟೋಕಾಲ್ ಪ್ರಕಾರ, ನನ್ನನ್ನ ಎಲ್ಲಾ ಕಾರ್ಯಕ್ರಮಕ್ಕೂ ಕರೆಯಬೇಕು. ಆದರೆ ಯಾವುದಕ್ಕೂ ಕರೆಯದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದರು.

ನಾನು ಈ ಬಗ್ಗೆ ಏನೂ ಕೇಳಿಲ್ಲ. ಆದರೂ ನನ್ನ ಬಗ್ಗೆ ತಂದೆ ಮಕ್ಕಳು ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ರು. ನಗರೋತ್ಥಾನ ಅಡಿ 30 ಕೋಟಿ ಅನುದಾನವನ್ನ ಹೊಸಕೋಟೆಗೆ ನೀಡಿದ್ದೇನೆ. ವಿಶೇಷ ಅನುದಾನದಲ್ಲಿ 30 ಕೋಟಿ ಸೇರಿ 60 ಕೋಟಿ ಕೊಟ್ಟಿದ್ದೇ‌ನೆ. ಹೊಸಕೋಟೆಯಲ್ಲಿ ಎಲ್ಲ ಕಡೆ‌ ಈಗಾಗಲೇ ಕಾಮಗಾರಿ ಸಹ ನಡೆಯುತ್ತಿದೆ. ಜತೆಗೆ ಕುಡಿಯುವ ನೀರಿನ ಯೋಜನೆಗೆ 16 ಕೋಟಿ ವಿಶೇಷ ಅನುದಾನ ಹೊಸಕೋಟೆಗೆ ಬಂದಿದೆ ಎಂದರು.

ಯುಜಿಡಿಗೆ 56 ಕೋಟಿ ತಂದಿದ್ದೇವೆ. ಶೇ 75ರಷ್ಟು ಕಾಮಗಾರಿ ಸಹ ನಡೆದಿದೆ. ಹೆಚ್ಚುವರಿಯಾಗಿ 28 ಕೋಟಿ ಯುಜಿಡಿ ಕಾಮಗಾರಿಗೆ ಬೇಕು ಅಂದಿದ್ರು. ಹೀಗಾಗಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಕೊಡಿಸಿದ್ದೇನೆ. ಆದರೂ ಸಹ ನಾನು ಏನು ಮಾಡಿದ್ದೇನೆ ಅಂತ ಕೇಳ್ತಾರೆ. 2020 ರಿಂದ 23 ರ ವರೆಗೂ ಬಿಜೆಪಿ ಸರ್ಕಾರ ಶಾಸಕರಿಗೆ ಇಲಾಖಾವಾರು ಅನುದಾನ ಬಿಡುಗಡೆ ಮಾಡಿದೆ ಎಂದರು.

ಪಿಎಂಜಿಎಸ್ ಅನುದಾನದಲ್ಲಿ 8 ಕೋಟಿ, ಟಿಎಸ್​ಪಿ ಸಿಸಿ ರಸ್ತೆ ಒಳಚರಂಡಿಗೆ ಪಿಡಬ್ಲ್ಯುಡಿಯಿಂದ 3 ಕೋಟಿ, ಬಯಲುಸೀಮೆ ಅನುದಾನದಲ್ಲಿ 20 ಲಕ್ಷ ಬಿಡುಗಡೆಯಾಗಿದೆ ಎಂದು ಪಟ್ಟಿಯನ್ನ ಓದಿದ್ರು. ಒಟ್ಟು 44 ಕೋಟಿ 73 ಲಕ್ಷ ಹಣ ಎರಡು ವರ್ಷದಲ್ಲಿ ನಮ್ಮ ಸರ್ಕಾರ ಶಾಸಕರಿಗೆ ವಿವಿಧ ಇಲಾಖೆಗಳಿಂದ ನೀಡಿದೆ. ಇವರೆಡನ್ನೂ ತಂದೆ ಸಂಸದ ಬಚ್ಚೇಗೌಡ ಮಗ ಶಾಸಕ ಶರತ್ ಇಬ್ಬರೆ ಹೋಗಿ ಶಂಕು ಸ್ಥಾಪನೆ ಮಾಡಿದ್ದಾರೆ. ನನ್ನ ಮೇಲೆ ವಿನಾಕಾರಣ ಆರೋಪಗಳನ್ನ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ರು.

ಇನ್ನೂ ಒಂದೂವರೆ ವರ್ಷದಿಂದ ಶಾಸಕರು ಸರ್ಕಾರಿ ಜಮೀನು ನುಂಗಿದ ಬಗ್ಗೆ ಚರ್ಚೆಗೆ ಬನ್ನಿ ಅಂತಿದ್ದೇನೆ. ಆದರೆ, ಆ ಬಗ್ಗೆ ದಾಖಲೆ‌ ಸಮೇತ ಬರಲು ಶಾಸಕ ಶರತ್ ಮತ್ತು ಅವರ ತಂದೆ ಸಿದ್ದವಿಲ್ಲ. ಕೇಳಿದ್ರೆ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ, ಸ್ಟೇ ತಂದಿದ್ದೇವೆ ಅಂತಾರೆ. ಮೊದಲು ಜನತಾ ನ್ಯಾಯಾಲಯದ ಮುಂದೆ ಬರಬೇಕು ಎಂದು ಸವಾಲು ಹಾಕಿದ್ರು.

ನನ್ನ ಆಣೆ ಪ್ರಮಾಣಕ್ಕೆ ಬನ್ನಿ ಅಂತ ಕರೆಯುತ್ತಿದ್ದಾರೆ: ನಾನು ಆಣೆ ಪ್ರಮಾಣ ಮಾಡಲು ಧರ್ಮಸ್ಥಳಕ್ಕೆ ಬರಲು ಸಿದ್ಧ. ನಾಳೆಯೆ ಧರ್ಮಸ್ಥಳಕ್ಕೆ ಆಣೆ ಪ್ರಮಾಣ ಮಾಡಲು ಬರ್ತಿನಿ, ನೀವು ಬನ್ನಿ. ಆದ್ರೆ ಮೊದಲು ನಾನು ಹೇಳಿರುವ ಶಾಂತನಪುರ ಸರ್ಕಾರಿ ಜಮೀನು ಆರೋಪ ಬಗ್ಗೆ ನೀವು ಪ್ರಮಾಣ ಮಾಡಿ ಎಂದು ಎಂಟಿಬಿ ಟಾಂಗ್ ನೀಡಿದ್ರು. ನಂತರ ನಾನು ನೀವು ಕೇಳಿದ ಬಗ್ಗೆ ನಾನು ಪ್ರಮಾಣ ಮಾಡ್ತೀನಿ. ಕುಣಿಯಲಾರದವನು ನೆಲಡೊಂಕು ಎಂಬಂತೆ ಕೆಲಸ ಮಾಡಲಾಗದೇ ಈ ರೀತಿ ಆರೋಪ ಮಾಡ್ತಿದ್ದಾರೆ ಎಂದು ಇದೇ ವೇಳೆ ಎಂಟಿಬಿ ತಿಳಿಸಿದ್ರು.

ಬಿಜೆಪಿ ಶಾಸಕನ ಪುತ್ರನ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ, ಯಾರೇ ಆಗಲಿ ತನಿಖೆಯಾಗಲಿ: ಸಚಿವ ಎಂಟಿಬಿ: ಬಿಜೆಪಿ ಶಾಸಕ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಹೊಸಕೋಟೆಯಲ್ಲಿ‌ ಮಾತನಾಡಿದ ಎಂಟಿಬಿ ಯಾವುದೇ ಪಕ್ಷ ಜಾತಿಯ ಅಧಿಕಾರಿಯಾಗಲಿ‌. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು, ಅಕ್ರಮಕ್ಕೆ ನಮ್ಮ ಬೆಂಬಲವಿಲ್ಲ ಎಂದಿದ್ದಾರೆ.

ಜತೆಗೆ ಕೋಟಿ ಕೋಟಿ ಸಿಕ್ಕಲ್ಲಿ ಲೋಕಾಯುಕ್ತ ಇಡಿ ಐಟಿಯಿಂದ ತನಿಖೆಯಾಗಲಿ. ಸಮಾನತೆ, ಸಾಮಾಜಿಕ ನ್ಯಾಯ ಸಿಗಬೇಕು ಎಂದರೆ ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು‌ ಎಂದು ಎಂಟಿಬಿ‌ ನಾಗರಾಜ್ ತಿಳಿಸಿದ್ರು. ಇನ್ನು ಮಾಡಳ್ ವಿರೂಪಾಕ್ಷಪ್ಪ ಪುತ್ರನ ಲಂಚದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ : ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಸರ್ಕಾರವಿದೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಗರಂ

Last Updated : Mar 3, 2023, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.