ETV Bharat / state

ನಾನು ಅಧಿಕಾರ ತ್ಯಾಗ ಮಾಡಿದ್ದೇನೆ, ನನಗೆ ಅನ್ಯಾಯವಾಗಿದೆ: ಎಂ ಪಿ ರೇಣುಕಾಚಾರ್ಯ ಅಸಮಾಧಾನ

author img

By

Published : Sep 29, 2022, 2:32 PM IST

ಸಚಿವ ಸ್ಥಾನ ವಂಚಿತ ರೇಣುಕಾಚಾರ್ಯ ಎಂದು ಟೀಕೆ ಮಾಡಿದರೂ ನಾನು ವಿಚಲಿತನಾಗಿಲ್ಲ. ಕಳೆದ ವಾರ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನಾನು ತ್ಯಾಗ ಮಾಡಿದ್ದೇನೆ, ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರದ ವಂಚನೆಯಾಗಿದೆ, ಅನ್ಯಾಯ ಆಗಿದೆ ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

mp renukacharya
ಎಂ ಪಿ ರೇಣುಕಾಚಾರ್ಯ

ಬೆಂಗಳೂರು: ನಾನು ಅಧಿಕಾರ ತ್ಯಾಗ ಮಾಡಿ ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ನನಗೆ ಅನ್ಯಾಯವಾಗಿದೆ. ಆದರೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸಚಿವ ಸ್ಥಾನ ಸಿಗದಿರುವುದಕ್ಕೆ ಶಾಸಕ ಎಂ ಪಿ ರೇಣುಕಾಚಾರ್ಯ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾವೆಲ್ಲ ಸಿಂಹದ ಮರಿಗಳು. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬಿಎಸ್​ವೈ. ಸದ್ಯಕ್ಕೆ ಬೊಮ್ಮಾಯಿ‌ ಅಧಿಕಾರ ಗಟ್ಟಿಯಾಗಿದೆ. ಈಶ್ವರಪ್ಪ, ರಮೇಶ್ ಜಾರಕಿಹೊಳಿ ಯಾರು ಅಸಮಾಧಾನ ಹೊಂದಿಲ್ಲ. ಕೆಲವರಿಗೆ ಎರಡ್ಮೂರು ಖಾತೆಗಳಿದೆ. ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡಬೇಕು.

ನನಗೆ ಮಾತ್ರ ಅವಕಾಶ ಕೊಡಿ ಅಂತಾ ಕೇಳ್ತಿಲ್ಲ. 6 ಖಾತೆಗಳು ಖಾಲಿ ಇದೆ ಅವರಿಗೆ ಸಚಿವ ಸ್ಥಾನ ನೀಡಬೇಕು, ಸಚಿವ ಸ್ಥಾನ ವಂಚಿತ ರೇಣುಕಾಚಾರ್ಯ ಅಂತ ಟೀಕೆ ಮಾಡಿದರೂ ನಾನು ವಿಚಲಿತನಾಗಿಲ್ಲ. ಕಳೆದ ವಾರ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ನಾನು ತ್ಯಾಗ ಮಾಡಿದ್ದೇನೆ, ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ನನಗೆ ಅಧಿಕಾರ ವಂಚನೆಯಾಗಿದೆ, ಅನ್ಯಾಯ ಆಗಿದೆ ಎಂದರು.

ಇದನ್ನೂ ಓದಿ: ಸಂಪುಟ ವಿಸ್ತರಣೆ ವಿಳಂಬಕ್ಕೆ ಶಾಸಕ ರೇಣುಕಾಚಾರ್ಯ ಅಸಮಾಧಾನ

ಬಿ ಎಸ್‌ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನನಗೆ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ, ಕೊಟ್ಟಿಲ್ಲ ಹಾಗಂತ‌ ನಾನು ಬಂಡಾಯ ಎದ್ದಿದ್ನಾ?, ಬಿಎಸ್‌ವೈ ವಿರುದ್ಧ ಮಾತನಾಡಿದ್ನಾ?. ಸಂಘಟನೆ ಮತ್ತು ಪಕ್ಷ ತಾಯಿ ಸಮಾನ. ನಾನು ನಮ್ಮ ನಾಯಕರ ಮುಂದೆ ಹೇಳಿಕೊಂಡಿದ್ದೇನೆ. ಆದರೆ ನನಗೆ ಅಸಮಾಧಾನವಿಲ್ಲ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದರು.

ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನತೆಯೇ ನನ್ನ ದೇವರು. ನನಗೆ ಯಾವುದೇ ಅಸಮಾಧಾನ ಇಲ್ಲ. ಕೋವಿಡ್ ಸಮಯದಲ್ಲಿ, ನೆರೆ ಸಮಯದಲ್ಲಿ ನಾನು ಮಾಡಿರುವ ಕೆಲಸ ಎಲ್ಲರಿಗೂ ಗೊತ್ತಿದೆ. ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದು ಸಚಿವ ಸ್ಥಾನ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಚಿವನಾಗಿ ಕ್ಷೇತ್ರವನ್ನು ಕಳೆದುಕೊಂಡಿದ್ದೆ, ಶಾಸಕನಾಗಿಯೇ ಮುಂದುವರಿಯುವೆ: ರೇಣುಕಾಚಾರ್ಯ

ನಾನು ಹಿಂದೆ ಸಚಿವ ಸ್ಥಾನ ಕೇಳಿದ್ದು ನಿಜ. ಸಂಘಟನೆ ದೃಷ್ಟಿಯಿಂದ ಸಚಿವ ಸ್ಥಾನ ಕೇಳಿದ್ದೆ. ಆದರೆ, ಎಲ್ಲೋ ಒಂದು ಕಡೆ ನೋವು ಇದೆ. ಅದನ್ನು ಎಲ್ಲಿ ಹೇಳಬೇಕೋ ಅಲ್ಲಿ ಹೇಳಿದ್ದೇನೆ. ಸಚಿವರ ಕಾರ್ಯವೈಖರಿ ಬಗ್ಗೆ ಹಿಂದೆ ಶಾಸಕಾಂಗ ಪಕ್ಷದ ಸಭೆಯಲ್ಲೇ ಚಾಟಿ ಬೀಸಿದ್ದೇನೆ. ಈಗ ಚುನಾವಣೆ ಹತ್ತಿರ ಇರುವಾಗ ಹೇಳಿ ಪಕ್ಷಕ್ಕೆ ಡ್ಯಾಮೇಜ್ ಮಾಡಲ್ಲ. ಸರ್ಕಾರ ಹಾಗೂ ಮುಖ್ಯಮಂತ್ರಿಗಳಿಗೆ ಮುಜುಗರ ಮಾಡಲ್ಲ ಎಂದರು.

ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ: ಸಿದ್ದರಾಮಯ್ಯ ಹಿರಿಯರು, ಅಪಾರ ಅನುಭವಸ್ಥರು. ಅವರು ಸಿಎಂ ಆಗಿದ್ದಾಗ 175 ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ತೆಗೆದುಕೊಂಡರು. ಯಾವ ಕಾರಣಕ್ಕೆ ಕೇಸ್ ವಾಪಸ್ ತೆಗೆದುಕೊಂಡರು ಅಂತ ಹೇಳಬೇಕು. ಆ ಕಾರಣದಿಂದ ಹರ್ಷ, ಹಿಂದೂ ಕಾರ್ಯಕರ್ತರ ಕೊಲೆಯಾಯ್ತು. ಭಾರತದಲ್ಲಿ ಹಿಂದುತ್ವ ಉಳಿಯಬೇಕು ಎಂದು ಹೇಳಿದರು.

ಇದನ್ನೂ ಓದಿ: 40 ಪರ್ಸೆಂಟ್ ಅನ್ನುವವರು ದಾಖಲೆ ಕೊಡಲಿ: ಶಾಸಕ ಎಂ ಪಿ ರೇಣುಕಾಚಾರ್ಯ

ದೇಶ ವಿರೋಧಿ ಚಟುವಟಿಕೆ ವಿರುದ್ಧ ಆರ್ ಎಸ್ ಎಸ್ ಧ್ವನಿ ಎತ್ತುತ್ತಿದೆ. ದೇಶದ್ರೋಹದ ಕೆಲಸ ಆರ್​ಎಸ್​ಎಸ್ ಮಾಡಿದ್ದರೆ ದಾಖಲೆ ಸಮೇತ ಚರ್ಚೆಗೆ ಬನ್ನಿ. ಪಿಎಫ್‌ಐ ಬ್ಯಾನ್ ಮಾಡಿ ಎಂದು ಹೇಳುತ್ತಿದ್ದಿರಲ್ಲ ಸಿದ್ದರಾಮಯ್ಯನವರೇ, ಕಾಶ್ಮೀರದಲ್ಲಿ ಪಂಡಿತರ ಹತ್ಯೆಯಾಯ್ತು, ಕಾಶ್ಮೀರದಲ್ಲಿ 370 ಅನ್ನು ರದ್ದು ಮಾಡಲಾಯಿತು.

ಮೋದಿ, ಅಮಿತ್ ಶಾ ಕೇವಲ ಬಾಯಿ ಮಾತಿಗೆ ಮಾತನಾಡಲ್ಲ, ಕೃತಿಯಲ್ಲಿ ಮಾಡಿ ತೋರಿಸುತ್ತಾರೆ. ಸಿದ್ದರಾಮಯ್ಯನ ತರ ಹರಕು ಬಾಯಿಯಲ್ಲ. ಭಯೋತ್ಪಾದಕರು, ಉಗ್ರರನ್ನು ನಮ್ಮ ಸೈನಿಕರು ಮಟ್ಟ ಹಾಕಿದ್ದಾರೆ ಎಂದು ಅನೇಕ ಸೈನಿಕರು ನನ್ನ ಬಳಿ ಹೇಳಿದ್ದಾರೆ. ಇದು ಅಲ್ಲವೇ ತಾಕತ್ ಅಂದ್ರೆ. ಪಿಎಫ್‌ಐ ಕಾಂಗ್ರೆಸ್‌ನ ಮತ್ತೊಂದು ಮುಖವಾಡ. ಅಲ್ಪಸಂಖ್ಯಾತ ಮುಗ್ಧ ಯುವಕರನ್ನು ಇಂತಹ ಕೃತ್ಯಗಳಿಗೆ ಬಳಸಿಕೊಂಡಿದ್ದು, ಪಿ‌ಎಫ್‌ಐ ಸಂಘಟನೆ ಎಂದು ಆರೋಪಿಸಿದರು.

ಇದನ್ನೂ ಓದಿ: ಸರ್ಕಾರದ ಅನುದಾನದಲ್ಲಿ 30 ಎಕರೆ ಜಮೀನು ಬೆಳವಣಿಗೆ.. ರೇಣುಕಾಚಾರ್ಯ ವಿರುದ್ಧ ಮಾಜಿ ಶಾಸಕ ಆರೋಪ

ರಾಹುಲ್ ಗಾಂಧಿಯದ್ದು ಐರನ್ ಲೆಗ್: ರಾಹುಲ್‌ ಗಾಂಧಿಯನ್ನು ಕಾಮಿಡಿ ಪೀಸ್ ಎಂದು ಲೇವಡಿ ಮಾಡಿದ ರೇಣುಕಾಚಾರ್ಯ, ರಾಹುಲ್ ಗಾಂಧಿಯವರದ್ದು ಭಾರತ್ ಜೋಡೋ ಯಾತ್ರೆಯಲ್ಲ, ಭಾರತ್ ತೋಡೋ ಯಾತ್ರೆ. ರಾಹುಲ್ ಗಾಂಧಿಗೆ ಪ್ರಬುದ್ಧತೆ ಇಲ್ಲ, ಕಾಮಿಡಿ ಪೀಸ್. ನಿಮ್ಮ ಪಕ್ಷ ಅಖಂಡ ಭಾರತವನ್ನು ಒಡೆದು ಹಾಕಿದೆ ಎಂದರು.

ಬಿಜೆಪಿಗೆ ಡಿಕೆಶಿ ಯಾವ ಲೆಕ್ಕ ಅಂತಾ ಟಾರ್ಗೆಟ್ ಮಾಡಬೇಕು: ಸಿಬಿಐ, ಇಡಿಯಿಂದ ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಎಂ ಪಿ ರೇಣುಕಾಚಾರ್ಯ, ಡಿ ಕೆ ಶಿವಕುಮಾರ್ ಬಿಜೆಪಿಗೆ ಯಾವ ಲೆಕ್ಕ, ಉಪ್ಪು ತಿಂದವನು ನೀರು ಕುಡಿಯಲೇಬೇಕು.

ನೀನು ಯಾರು ಅಂತಾ ಬಿಜೆಪಿ ಟಾರ್ಗೆಟ್ ಮಾಡಬೇಕಪ್ಪ, ನಿಮ್ಮ ರಾಷ್ಟ್ರೀಯ ಅಧ್ಯಕ್ಷರನ್ನೇ ಬಿಜೆಪಿ ಪರಿಗಣಿಸಿಲ್ಲ. ಇನ್ನೂ ನೀನು ಯಾವ ಲೆಕ್ಕ ಅಂತಾ ನಿನ್ನನ್ನು ಟಾರ್ಗೆಟ್ ಮಾಡ್ತಾರೆ ಎಂದು ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದರು‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.