ETV Bharat / state

ಪ್ರಶ್ನೆಗಳಿಗೆ ಉತ್ತರಿಸದೆ ಮೋದಿ‌ ಕೇವಲ ಸುಳ್ಳು ಭಾಷಣ ಮಾಡುತ್ತಾರೆ: ರಾಹುಲ್ ಗಾಂಧಿ

author img

By

Published : May 7, 2023, 10:26 PM IST

ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಭಾನುವಾರ ಕಾಂಗ್ರೆಸ್​​ ಅಭ್ಯರ್ಥಿ ಪರವಾಗಿ ಆನೇಕಲ್​ನಲ್ಲಿ​ ಬೃಹತ್​​ ರೋಡ್​​ ಶೋ ನಡೆಸಿ ಮತಯಾಚಿಸಿದರು.

modi-just-gave-false-speech-without-answering-questions-says-rahul-gandhi
ಮೋದಿ‌ ಪ್ರಶ್ನೆಗಳಿಗೆ ಉತ್ತರಿಸದೆ ಕೇವಲ ಸುಳ್ಳು ಭಾಷಣ ಮಾಡುತ್ತಾರೆ: ರಾಹುಲ್ ಗಾಂಧಿ

ಆನೇಕಲ್: ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚನೆ ಮಾಡುವಲ್ಲಿ ಬಿಜೆಪಿಯವರು ನಿಸ್ಸೀಮರು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದರು. ಆನೇಕಲ್ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೃಹತ್ ರೋಡ್ ಶೋ ಮುಗಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ತಮ್ಮ ಸ್ವತಂತ್ರ ಶಾಸಕರ ಬೆಂಬಲದಿಂದ ಸರ್ಕಾರ ರಚನೆ ಮಾಡಿಲ್ಲ. ಬಹುತೇಕ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿ ಆ ರಾಜ್ಯಗಳಿಂದ ಲೂಟಿ ಮಾಡಿರುವುದೇ ಅವರ ಸಾಧನೆ ಎಂದು ಕಿಡಿಕಾರಿದರು.

400 ರೂಪಾಯಿಗಳು ಇದ್ದಂತಹ ಗ್ಯಾಸ್ ಸಿಲಿಂಡರ್ ಮೇಲೆ ಮೋದಿ ಅಧಿಕಾರಕ್ಕೆ ಬಂದ ಮೇಲೆ 1,200 ರೂಪಾಯಿಗಳಿಗೆ ಏರಿಕೆ ಕಂಡಿದೆ. ನಿರುದ್ಯೋಗ ತಾಂಡವ ಆಡುತ್ತಿದ್ದು, ಇವೆಲ್ಲವನ್ನು ಸರಿದೂಗಿಸುವಲ್ಲಿ ಬಿಜೆಪಿ ವಿಫಲವಾಗಿದೆ. ನಾನು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಕಾರಣ ನನ್ನನ್ನು ಸಂಸತ್ತಿನಿಂದ ಹೊರ ಹಾಕಿದ್ದಾರೆ. ಇದಕ್ಕೆ ತಕ್ಕ ಬೆಲೆಯನ್ನು ಬಿಜೆಪಿಯವರು ತೆರುತ್ತಾರೆ ಎಂದು ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದರು.

ಮೋದಿಯವರಿಗೆ ಬಡಜನರ ಕಷ್ಟ ಅರ್ಥವಾಗುವುದಿಲ್ಲ, ಚುನಾವಣೆ ಬಂದಾಗ ಮಾತ್ರ ಬಡವರು ನೆನಪಾಗುತ್ತಾರೆ. ಉಳಿದ ಸಮಯದಲ್ಲಿ ಶ್ರೀಮಂತರ ಅಭಿವೃದ್ಧಿಯನ್ನು ಮಾಡಿಕೊಂಡು ಕಾಲಹರಣ ಮಾಡುತ್ತಾರೆ ಎಂದು ಆರೋಪಿಸಿದರು. ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನ ಮಂತ್ರಿ ಮೋದಿಯವರು ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಮಾತನಾಡದೆ, ತಾವು ಏನು ಅಭಿವೃದ್ಧಿಯನ್ನು ಮಾಡಿದ್ದೇವೆ ಎಂದು ಎಲ್ಲಿಯೂ ತಿಳಿಸದೆ ಕೇವಲ ಮತಯಾಚನೆಗೆ ಬಂದು ಹೋಗಿದ್ದಾರೆ. ಕರ್ನಾಟಕದ ಚುನಾವಣೆ ಮೋದಿಯವರ ಚುನಾವಣೆ ಅಲ್ಲ, ಇದು ಕರ್ನಾಟಕದ ಜನತೆಯ ಚುನಾವಣೆ ಎಂದು ಹೇಳಿದರು.

ಕರ್ನಾಟಕದಲ್ಲಿ ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಇದನ್ನು ಭರ್ತಿ ಮಾಡುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಇದನ್ನು ಭರ್ತಿ ಮಾಡಿ ಯುವಕರಿಗೆ ಮತ್ತು ಮಹಿಳೆಯರಿಗೆ ಆದ್ಯತೆಯನ್ನು ನೀಡುತ್ತೇವೆ. ಕರ್ನಾಟಕದಲ್ಲಿ ಇರುವಂತಹ ಬಿಪಿಎಲ್ ಕಾರ್ಡ್ ಹೊಂದಿರುವವರು ಪ್ರತಿಯೊಬ್ಬರಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿ ಹಸಿವು ಮುಕ್ತ ಕರ್ನಾಟಕವನ್ನಾಗಿ ಮಾಡುತ್ತೇವೆ ಎಂದು ರಾಹುಲ್​ ಭರವಸೆ ನೀಡಿದ್ರು.

''ಬಿಜೆಪಿಯವರಿಗೆ ನಾನು ಹೇಳ ಬಯಸುವುದೆನೆಂದರೆ ನಿಮ್ಮ ರೀತಿ ಧಮ್ಕಿ ಹಾಕುವವರು, ಆತಂಕವಾದಿಗಳು ನಾವಲ್ಲ, ಅದಕ್ಕೆ ಉದಾಹರಣೆ ಎರಡು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಧಮ್ಕಿ ಹಾಕಿರುವುದೇ ಒಂದು ನಿದರ್ಶನ. ಇದರಿಂದ ನಿಮ್ಮ ಮನಸ್ಥಿತಿ ಏನೆಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ. ಖರ್ಗೆಯವರ ಬಗ್ಗೆ ಮಾತನಾಡುವ ಮೊದಲು ಬಹಳ ಎಚ್ಚರಿಕೆಯಿಂದ ಮಾತನಾಡಿ'' ಎಂದು ರಾಹುಲ್​ ಗಾಂಧಿ ಗುಡುಗಿದರು.

ರೋಡ್ ಶೋನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಶಾಸಕ ಬಿ ಶಿವಣ್ಣ, ಬ್ಲಾಕ್ ಅಧ್ಯಕ್ಷರುಗಳಾದ ಹರೀಶ್ ಗೌಡ, ಲಿಂಗಣ್ಣ, ರಘುಪತಿ ರೆಡ್ಡಿ ಪುರಸಭಾ ಅಧ್ಯಕ್ಷರು, ಮುಖಂಡರಾದ ಕೆ.ಸಿ ರಾಮಚಂದ್ರ, ಯಲ್ಲಪ್ಪ, ಮುನ್ವೀರಪ್ಪ, ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: ಕರ್ನಾಟಕದಲ್ಲಿ 40 ಪರ್ಸೆಂಟ್​​​​ ಕಮಿಷನ್, ಬೆಲೆ ಏರಿಕೆಯ ಆತಂಕವಾದ ಇದೆ: ಪ್ರಿಯಾಂಕಾ ಗಾಂಧಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.