ETV Bharat / state

ಬಿಜೆಪಿಗೆ ಕೈ ಕೊಡ್ತಾರಾ ಹೆಚ್ ವಿಶ್ವನಾಥ್ ?: ಅಚ್ಚರಿ ಮೂಡಿಸಿದ ಸಿದ್ದರಾಮಯ್ಯ ಭೇಟಿ

author img

By

Published : Dec 6, 2022, 3:04 PM IST

ಬಿಜೆಪಿ ನಾಯಕರ ನಡೆಯಿಂದ ಬೇಸತ್ತಿರುವ ಹೆಚ್ ವಿಶ್ವನಾಥ್ ಕಾಂಗ್ರೆಸ್​ಗೆ ಮರಳಲು ನಿರ್ಧರಿಸಿದ್ದು, ಮೈಸೂರಿನಿಂದಲೇ ತಮ್ಮ ರಾಜಕೀಯ ಚಟುವಟಿಕೆ ಮುಂದುವರಿಸಲು ಯೋಚಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಹೆಚ್​ ವಿಶ್ವನಾಥ್​
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಹೆಚ್​ ವಿಶ್ವನಾಥ್​

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್​ ವಿಶ್ವನಾಥ್ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಲು ವಿಶ್ವನಾಥ್ ಆಗಮಿಸಿದ್ದಾರೆ. ಆದರೆ, ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಬೇರೇನೋ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕರ ನಡೆಯಿಂದ ಬೇಸತ್ತಿರುವ ಹೆಚ್ ವಿಶ್ವನಾಥ್ ಕಾಂಗ್ರೆಸ್​ಗೆ ಮರಳಲು ನಿರ್ಧರಿಸಿದ್ದು, ಮೈಸೂರಿನಿಂದಲೇ ತಮ್ಮ ರಾಜಕೀಯ ಚಟುವಟಿಕೆ ಮುಂದುವರಿಸಲು ಯೋಚಿಸಿದ್ದಾರೆ.

ಇದರಿಂದ ಈ ಭಾಗದ ಪ್ರಭಾವಿ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಸಮಾಲೋಚಿಸಲು ಮುಂದಾಗಿದ್ದಾರೆ. ವಿಶ್ವನಾಥ್ ಇಂದು ಮಧ್ಯಾಹ್ನ ಶಿವಾನಂದ ವೃತ್ತದ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ್ದು, ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಮೂಡಿದೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಹೆಚ್​ ವಿಶ್ವನಾಥ್​

ಸಚಿವ ಸ್ಥಾನ ಸಿಗಲಿಲ್ಲ: ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಶ್ವನಾಥ್, ಜೆಡಿಎಸ್​ ರಾಜ್ಯಾಧ್ಯಕ್ಷ ಸ್ಥಾನ ತೊರೆದು, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, ನಂತರ ಹುಣಸೂರಿನಿಂದ ನಡೆದ ಉಪಚುನಾವಣೆಯಲ್ಲಿ ಸೋತಿದ್ದರು. ವಿಧಾನ ಪರಿಷತ್​ಗೆ ಇವರನ್ನು ನಾಮ ನಿರ್ದೇಶನ ಮಾಡಲಾಯಿತಾದರೂ, ಸಚಿವ ಸ್ಥಾನ ಸಿಗಲಿಲ್ಲ. ಸಾಕಷ್ಟು ಬೇಸತ್ತಿದ್ದ ಅವರು ಹಲವು ಬಾರಿ ಬಿಜೆಪಿ ನಾಯಕರ ವಿರುದ್ಧವೇ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ ಭೇಟಿ ಕುತೂಹಲಕ್ಕೆ ಕಾರಣ: ಇದೀಗ ಕಾಂಗ್ರೆಸ್ ಸೇರುವತ್ತ ಆಸಕ್ತಿ ವಹಿಸಿದ್ದು, ದಿಲ್ಲಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿಯಾಗಿ ಸಮಾಲೋಚಿಸಿದ್ದಾರೆ. ಇದಾದ ಬಳಿಕ ಸಾಲು ಸಾಲಾಗಿ ರಾಜ್ಯ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿದ್ದು, ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

ನಿನ್ನೆ ಖರ್ಗೆ ಅವರನ್ನು ಭೇಟಿಯಾಗಿದ್ದ ವಿಶ್ವನಾಥ್ ಇಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದ್ದು, ಮತ್ತೆ ತವರಿಗೆ ಮರಳಲು ವಿಶ್ವನಾಥ್ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಇದೆ.

ಓದಿ: ಟಿಪ್ಪು ಸುಲ್ತಾನ್​ ಮೈಸೂರಿನ ಹುಲಿ: ಎಂಎಲ್​ಸಿ ವಿಶ್ವನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.