ETV Bharat / state

'ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ, ಬ್ಯಾಂಡ್​ ಸೆಟ್ ನಾಯಕರನ್ನು ದೂರವಿಡಿ'

author img

By

Published : Mar 19, 2021, 4:56 PM IST

ಸಾರ್ವಜನಿಕ ವಿಷಯದ ಬಗ್ಗೆ ನಿಮ್ಮ ಕುಟುಂಬದ ಮೇಲಿನ ಖಾಸಗಿ ಪ್ರೇಮ ಮಧ್ಯಪ್ರವೇಶಿಸುವುದು ಬೇಡ. ನೀವು ಅಂತ:ಕರಣದಿಂದ ಆಡಳಿತ ಮಾಡಿ, ಅಂಕಿ-ಅಂಶಗಳ ಆಧಾರದ ಮೇಲೆ ಆಡಳಿತವನ್ನು ಸೀಮಿತಗೊಳಿಸಬೇಡಿ ಎಂದು ಕೆ.ಆರ್‌.ರಮೇಶ್ ಕುಮಾರ್ ಹೇಳಿದರು.

MLA Ramsesh Kumar speech at Assembly session
ಸದನದಲ್ಲಿ ಶಾಸಕ ರಮೇಶ್ ಕುಮಾರ್ ಮಾತು

ಬೆಂಗಳೂರು: ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ನೇರ ಸಲಹೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್ಥಿಕ ವಿಷಯಗಳ ಕುರಿತು ಮಾತನಾಡುವ ಬದಲು ಆಡಳಿತದ ಹಲವು ಅಂಶಗಳ ಕಡೆ ಗಮನ ಸೆಳೆದರು. ಮಾತಿನ ಕೊನೆಯಲ್ಲಿ ಸಿದ್ಧರಾಮಯ್ಯ ಹಾಗೂ ಯಡಿಯೂರಪ್ಪ ಅವರನ್ನು ಪ್ರಶಂಸಿಸಿದ ರಮೇಶ್ ಕುಮಾರ್, ಇದ್ದಕ್ಕಿದ್ದಂತೆ ಯಡಿಯೂರಪ್ಪ ಅವರನ್ನು ಕೇಂದ್ರೀಕರಿಸಿಕೊಂಡರು.

ಹೋರಾಟಗಳ ಮೂಲಕ ಬೆಳೆದ ಬಹುದೊಡ್ಡ ನಾಯಕ ಎಂದು ನಿಮ್ಮ ಬಗ್ಗೆ ಈ ಹಿಂದೆ ಹೇಳಿದ ಮಾತಿಗೆ ನಾನು ಬದ್ಧನಾಗಿದ್ದೇನೆ. ಆದರೆ, ಅದನ್ನು ನಿಮ್ಮ‌ ಕುಟುಂಬ ವ್ಯಾಮೋಹಕ್ಕೆ ಬಲಿ ಕೊಡಬೇಡಿ ಎಂದರು. ಈ ವೇಳೆ ಸಿಎಂ ಯಡಿಯೂರಪ್ಪ ಸೇರಿದಂತೆ ಇಡೀ ಸದನ ಮೂಕವಿಸ್ಮಿತವಾಗಿತ್ತು.

ಇತಿಹಾಸ ಕಂಡ ಮಹಾನ್ ಹೋರಾಟಗಾರ ನೆಪೋಲಿಯನ್, ಗಂಡು-ಹೆಣ್ಣಿನ ನಡುವೆ ಪರಸ್ಪರ ಸಮ್ಮತಿಯಿಂದ ಅರಳುವುದು ಪ್ರೇಮ. ಅದು ಸಂಪೂರ್ಣವಾಗಿ ಖಾಸಗಿ, ಸಾರ್ವಜನಿಕವಲ್ಲ ಎನ್ನುತ್ತಾನೆ. ಹಾಗೆಯೇ ಮುಖ್ಯಮಂತ್ರಿಯಾಗಿ ನಿಮ್ಮ ಹಾಗೂ ಜನರ ನಡುವೆ ಇರುವ ನಂಬಿಕೆ ಸಂಪೂರ್ಣವಾಗಿ ಸಾರ್ವಜನಿಕ, ಖಾಸಗಿಯಲ್ಲ ಎನ್ನುತ್ತಾನೆ. ಹೀಗಾಗಿ ಸಾರ್ವಜನಿಕ ವಿಷಯದ ಬಗ್ಗೆ ನಿಮ್ಮ ಕುಟುಂಬದ ಮೇಲಿನ ಖಾಸಗಿ ಪ್ರೇಮ ಮಧ್ಯಪ್ರವೇಶಿಸುವುದು ಬೇಡ ಎಂದರು. ನೀವು ಅಂತ:ಕರಣದಿಂದ ಆಡಳಿತ ಮಾಡಿ, ಅಂಕಿ-ಅಂಶಗಳ ಆಧಾರದ ಮೇಲೇ ಆಡಳಿತವನ್ನು ಸೀಮಿತಗೊಳಿಸಬೇಡಿ ಎಂದು ಸಲಹೆ ನೀಡಿದರು.

ಈಗಾಗಲೇ ಒಂದು ಬಾರಿ ನಿಮ್ಮ ಕುಟುಂಬ ವ್ಯಾಮೋಹದಿಂದಾಗಿ ಕಷ್ಟ ಅನುಭವಿಸಿದ್ದೀರಿ. ಪುನಃ ಆ ವ್ಯಾಮೋಹ ಬಲಿ ಪಡೆಯಬಾರದೆಂದರೆ ಕುಟುಂಬ ಸದಸ್ಯರನ್ನು ಆಡಳಿತದಿಂದ ದೂರವಿಡಬೇಕು. ಯಾರೊಬ್ಬರೂ ಆಡಳಿತದಲ್ಲಿ ಮೂಗು ತೋರದಂತೆ ಎಚ್ಚರಿಕೆ ವಹಿಸಿ ಎಂದು ಹೇಳಿದರು. ನೀವು ಈಗ ಬರಿ ಯಡಿಯೂರಪ್ಪನವರಲ್ಲ. ಈ ರಾಜ್ಯದ ಮುಖ್ಯಮಂತ್ರಿಗಳು. ಅಲ್ಲದೆ, ನೀವು ಸಾರ್ವಜನಿಕರ ಆಸ್ತಿಯೂ ಹೌದು. ನಿಮ್ಮ ತಪ್ಪು-ಒಪ್ಪುಗಳನ್ನು ಪ್ರಶ್ನಿಸುವ ಅಧಿಕಾರ ನನಗಿದೆ. ಆಡಳಿತ ಇದ್ದಾಗ ಮಾತ್ರ ಸುತ್ತಮುತ್ತ ಬ್ಯಾಂಡ್ ಸೆಟ್ ಬಾರಿಸುತ್ತಾರೆ. ಅಧಿಕಾರ ಹೋದಾಗ ಯಾರೂ ಹತ್ತಿರ ಬರುವುದಿಲ್ಲ ಎಂದರು. ಪ್ರಜಾಪ್ರಭುತ್ವದ ವಿಶೇಷ ಎಂದರೆ ಅನಕ್ಷರಸ್ಥ ತಂದೆ, ತಾಯಿಗಳ ಮಗ ಸಿದ್ಧರಾಮಯ್ಯ ಹನ್ನೆರಡು ಬಾರಿ ಈ ರಾಜ್ಯದ ಬಜೆಟ್ ಮಂಡಿಸುತ್ತಾರೆ. ಶಿಕಾರಿಪುರ ಪುರಸಭೆಯ ಅಧ್ಯಕ್ಷರಾಗಿದ್ದ ನೀವು ಹೋರಾಟಗಳ ಮೂಲಕ ಇಲ್ಲಿಯವರೆಗೆ ತಲುಪಿದ್ದೀರಿ ಎಂದು ಹೇಳಿದರು.

ಬ್ಯಾಂಡ್ ಸೆಟ್ ನಾಯಕರ ಗಿರಕಿ : ಇನ್ನು ಅಧಿಕಾರಕ್ಕೆ ಬಂದ ತಕ್ಷಣ ಬ್ಯಾಂಡ್‌ ಸೆಟ್ ನಾಯಕರು ಸುತ್ತಮುತ್ತ ಗಿರಕಿ ಹೊಡೆಯುತ್ತಾರೆ. ನೀವು ಉನ್ನತ ಸ್ಥಾನಕ್ಕೆ ಬಂದ ತಕ್ಷಣ ಅವರು ವಕ್ಕರಿಸಿಕೊಳ್ಳುತ್ತಾರೆ. ಇವರನ್ನೇ ನಾನು ಬ್ಯಾಂಡ್ ಸೆಟ್ ಎಂದು ಕರೆಯುತ್ತೇನೆ. ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗಲೂ ಇದೇ ಬ್ಯಾಂಡ್ ಸೆಟ್ ಇತ್ತು. ಆ ಬಗ್ಗೆ ಹೇಳಿ ನಿಷ್ಟುರ ಕಟ್ಟಿಕೊಂಡಿದ್ದೆ. ಬ್ಯಾಂಡ್ ಸೆಟ್‍ನವರಿಂದಾಗಿ ಹಿಂದೆ ಹಲವು ನಾಯಕರು ಬಲಿಯಾಗಿದ್ದಾರೆ ಎಂದು ಹೇಳಿದರು.

ಸರ್ಕಾರ ದಿಕ್ಕು ತಪ್ಪಿದಾಗ ಚಾಟಿ : ವಿರೋಧಕ್ಕಾಗಿ ವಿರೋಧ ಪಕ್ಷ ಇರಬಾರದು. ಸರ್ಕಾರ ದಿಕ್ಕು ತಪ್ಪಿದಾಗ ಅವರಿಗೆ ಚಾಟಿ ಬೀಸುವುದು ನಮ್ಮ ಕರ್ತವ್ಯ. ವಿರೋಧಕ್ಕಾಗಿ ಎಲ್ಲವನ್ನೂ ವಿರೋಧಿಸುವುದು ನಮ್ಮ ಕೆಲಸವಲ್ಲ. ಜನರ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡಾಗ ನಾವು ಇಲ್ಲಿ ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತೇವೆ. ವಿರೋಧ ಪಕ್ಷದವರು ಹೇಗಿರಬೇಕೆಂದು ಹಿಂದೆ ಶಾಂತವೇರಿ ಗೋಪಾಲಗೌಡ, ರಾಮ್‍ ಮನೋಹರ್ ಲೋಹಿಯ ಅವರು ಸದನದಲ್ಲಿ ನಡೆದುಕೊಂಡಿದ್ದನ್ನು ಉದಾಹರಣೆ ನೀಡಿದ ರಮೇಶ್‍ಕುಮಾರ್, ಸರ್ಕಾರ ಹಳಿ ತಪ್ಪಿದಾಗ ಹೇಗೆ ಚಾಟಿ ಬೀಸಿದ್ದಾರೆ ಎಂಬುವುದಕ್ಕೆ ನಮ್ಮಲ್ಲಿ ನಿದರ್ಶನಗಳಿವೆ ಎಂದರು. ವಿರೋಧ ಪಕ್ಷಗಳು ಜನರ ಕರುಳಿನ ದ್ವನಿಯಾಗಬೇಕು. ಆಡಳಿತದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ವಿರೋಧ ಪಕ್ಷವಾಗಬಾರದು. ಎಲ್ಲವನ್ನು ವಿರೋಧಿಸುವುದು ನಮ್ಮ ಕೆಲಸವಲ್ಲ. ಜನರ ಸಮಸ್ಯೆ ಆಧಾರದ ಮೇಲೆ ದನಿ ಎತ್ತಬೇಕೆಂದು ಕಿವಿಮಾತು ಹೇಳಿದರು.

ಆಡಳಿತ ಪಕ್ಷದ ಶಾಸಕರ ವಿರುದ್ಧ ಚಾಟಿ ಬೀಸಿದ ರಮೇಶ್‍ ಕುಮಾರ್, ನಿಮ್ಮ ಪಂಚೇಯಂದ್ರಿಗಳು ಸರಿ ಇರಬೇಕು. ರಾಜನೊಬ್ಬ ಕಿರೀಟ ಹಾಕಿಕೊಂಡು ಮಂತ್ರಿಗೆ ಪ್ರಶ್ನೆ ಮಾಡುತ್ತಾನೆ. ಮಂತ್ರಿ ಹೇಳಿದ್ದನ್ನೇ ರಾಜ ಕೇಳುತ್ತಾನೆ. ಆದರೆ, ಇದು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲಾ ಇಂದ್ರಿಯಗಳು ಸಕ್ರಿಯವಾಗಿರಬೇಕು. ಸರ್ಕಾರದ ಆಡಳಿತ ಹೇಗಿರಬೇಕೆಂದು ಸಲಹೆ ನೀಡಿದರು.

ಶಾಲಾ-ಕಾಲೇಜುಗಳ ಮೂಲಸೌಕರ್ಯಗಳನ್ನು ಸರ್ಕಾರವೇ ಮಾಡಬೇಕೆಂಬ ನಿಯಮವಿಲ್ಲ. ನಾವು ಬೇರೆಯವರ ಜೊತೆ ಹೊಂದಾಣಿಕೆ ಮಾಡಿಕೊಂಡು ಮೂಲಭೂತ ಸೌಕರ್ಯ ಕಲ್ಪಿಸಬೇಕು. ಇದರಿಂದ ಶಿಕ್ಷಣದ ವ್ಯವಸ್ಥೆ ಸುಧಾರಣೆಯಗುತ್ತದೆ ಎಂದು ಹೇಳಿದರು.

ಅವೈಜ್ಞಾನಿಕ ಹಂಪ್ಸ್ : ಯಾವ ರಸ್ತೆಯಲ್ಲಿ ಎಷ್ಟು ಹಂಪ್ಸ್​​​ಗಳನ್ನು ಹಾಕಬೇಕು ಎಂಬುವುದರ ಬಗ್ಗೆ ವೈಜ್ಞಾನಿಕವಾಗಿ ಪರಿಗಣಿಸಬೇಕು. ಅವೈಜ್ಞಾನಿಕಹಂಪ್ಸ್​​​ಗಳು ಸಾಕಷ್ಟು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಕಲಾಗಿದೆ. ಸರ್ಕಾರವು ಕೂಡ ಗಮನ ಹರಿಸಬೇಕು. ರಾಜ್ಯದ ಜವಾಬ್ದಾರಿ ಹೊತ್ತವರು ನೀತಿ ರೂಪಿಸುತ್ತಾರೆ. ಕಾರ್ಯಾಂಗ ಅದನ್ನು ಆಚರಣೆಗೆ ತರುತ್ತದೆ. ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಾರೆ. ಆಸ್ಪತ್ರೆಯಲ್ಲಿ ಸತ್ತ ಹೆಣ ಕೊಡಲು ಲಂಚ ಕೇಳುತ್ತಾರೆ. ಬಾಕಿ ಇಟ್ಟುಕೊಂಡರೆ ಆ ಹೆಣವನ್ನೂ ಕೊಡುವುದಿಲ್ಲ. ಇದು ಮಾನವೀಯತೆಯೇ? ಈ ಬಗ್ಗೆ ನಾವು ಕಾನೂನು ಏಕೆ ಜಾರಿ ಮಾಡಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದರು.
ನ್ಯಾಯಾಂಗದ ಲೋಪ ದೋಷಗಳ‌ ಬಗ್ಗೆ, ಶಿಕ್ಷಣ ವ್ಯವಸ್ಥೆಯ ದೋಷಗಳ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಸಿದ್ಧರಾಮಯ್ಯ ಅವರು ಬಜೆಟ್ ಬಗ್ಗೆ ಮಾತನಾಡಿದ ನಂತರ ಅದರ ಬಗ್ಗೆ ಮಾತನಾಡಿದ್ದರೆ ನಾನು ಮಂಗ ಆಗುತ್ತಿದ್ದೆ. ಹೀಗಾಗಿ ಅ ಕುರಿತು ಮಾತನಾಡಿಲ್ಲ ಎಂದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.