ETV Bharat / state

ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಮುಷ್ಕರ : ಸಿಎಂ ನಿವಾಸಕ್ಕೆ ಮುತ್ತಿಗೆಗೆ ಮುಂದಾದ ಆಟೋ ಚಾಲಕರು ಪೊಲೀಸ್​ ವಶಕ್ಕೆ

author img

By

Published : Mar 20, 2023, 9:52 AM IST

Updated : Mar 20, 2023, 1:48 PM IST

ಬೆಂಗಳೂರಿನಲ್ಲಿ ಆಟೋ ಚಾಲಕರ ಸಂಘಟನೆಗಳ ಒಕ್ಕೂಟದಿಂದ ನೀಡಿರುವ ಮುಷ್ಕರಕ್ಕೆ ಆಟೋ ಚಾಲಕರಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ನಡುವೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆಗೆ ಸಿದ್ಧತೆ ನಡೆಸಿದ್ದ ಆಟೋ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Mixed response to auto drivers strike
ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಆಗ್ರಹಿಸಿ ಮುಷ್ಕರ : ಸಿಎಂ ನಿವಾಸಕ್ಕೆ ಮುತ್ತಿಗೆಗೆ ಮುಂದಾದ ಆಟೋ ಚಾಲಕರು ಪೊಲೀಸ್​ ವಶಕ್ಕೆ

ಸಿಎಂ ನಿವಾಸಕ್ಕೆ ಮುತ್ತಿಗೆಗೆ ಮುಂದಾದ ಆಟೋ ಚಾಲಕರು ಪೊಲೀಸ್​ ವಶಕ್ಕೆ

ಬೆಂಗಳೂರು: ನಗರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ರದ್ದುಗೊಳಿಸುವಂತೆ ಆಗ್ರಹಿಸಿ ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಮುತ್ತಿಗೆಗೆ ಸಿದ್ಧತೆ ನಡೆಸಿದ್ದ ಆಟೋ ಚಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಕ್, ಟ್ಯಾಕ್ಸಿ ಸೇವೆಗಳನ್ನ ರದ್ದುಗೊಳಿಸದ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗುತ್ತಾ ಮುತ್ತಿಗೆ ಹಾಕಲು ಸಿದ್ಧವಾಗಿದ್ದ ನೂರಾರು ಆಟೋ ಚಾಲಕರನ್ನು ಆರಂಭದಲ್ಲೇ ವಶಕ್ಕೆ ಪಡೆಯಲಾಗಿದೆ.

ಮುಷ್ಕರಕ್ಕೆ ಆಟೋ ಚಾಲಕರಿಂದಲೇ ಸೂಕ್ತ ಸ್ಪಂದನೆ ದೊರೆತಂತಿಲ್ಲ. ಕೆಲ ಆಟೋ ಚಾಲಕರು ಮುಷ್ಕರದಲ್ಲಿ ಭಾಗಿಯಾಗದೇ ಆಟೋ ಸೇವೆ ನೀಡುತ್ತಿರುವುದು ಕಂಡು ಬಂತು. ಇದೇ ವೇಳೆ ಮುಷ್ಕರಕ್ಕೆ ಬೆಂಬಲ ನೀಡದೇ ಆಟೋ ಸೇವೆ ನೀಡುತ್ತಿದ್ದ ಚಾಲಕರೊಬ್ಬರಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡುವ ಮೂಲಕ ಇತರೆ ಚಾಲಕರು ವ್ಯಂಗ್ಯವಾಡಿದ ಪ್ರಸಂಗ ಸಹ ನಡೆದಿದೆ. ಆಟೋ ಮುಷ್ಕರಕ್ಕೆ ಬೆಂಬಲ ನೀಡದೇ ಗ್ರಾಹಕರನ್ನ ಕರೆದೊಯ್ಯುತ್ತಿದ್ದ ಆಟೋ ಚಾಲಕನನ್ನ ನಾಯಂಡಹಳ್ಳಿ ಸಿಗ್ನಲ್ ಬಳಿ ತಡೆದ ಮುಷ್ಕರ ನಿರತ ಇತರೆ ಚಾಲಕರು ಆತನಿಗೆ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

"ಮುಷ್ಕರದ ಹೆಸರಿನಲ್ಲಿ ಆಟೋ ನಿಲ್ಲಿಸಿದ್ರೆ ನಮಗೆ ಕಷ್ಟ, ಜೀವನ ನಿರ್ವಹಣೆ ಆಗಬೇಕು. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಮಕ್ಕಳಿಗೆ ಪರೀಕ್ಷೆ ನಡೆಯುತ್ತಿವೆ" ಎಂದು ಹೇಳುತ್ತಾರೆ ಕೆಲ ಆಟೋ ಚಾಲಕರು. ಮತ್ತೊಂದೆಡೆ, ಮುಷ್ಕರವನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಚಾಲಕರು ಎರಡರಷ್ಟು ದರ ಕೇಳುತ್ತಿರುವ ಆರೋಪವೂ ಕೇಳಿ ಬರುತ್ತಿದೆ. ಇದರ ನಡುವೆ ಬಿಎಂಟಿಸಿ ಮತ್ತು ಮೆಟ್ರೋಗಳತ್ತ ಪ್ರಯಾಣಿಕರು ಮುಖ ಮಾಡುತ್ತಿದ್ದಾರೆ. ಪ್ರತಿದಿನಕ್ಕೆ ಹೋಲಿಕೆ ಮಾಡಿದರೆ, ಇಂದು ಮೆಟ್ರೋ ಪ್ರಯಾಣ ಆಯ್ಕೆ ಮಾಡಿಕೊಳ್ಳುತ್ತಿರುವ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದೆ.

ದೂರುಗಳೇನು?: "ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು, ಕಾನೂನು ಬಾಹಿರವಾಗಿ ಬೈಕ್‌ ಟ್ಯಾಕ್ಸಿಯಿಂದ ಆಟೋ ಚಾಲಕರಿಗೆ ಬಾಡಿಗೆ ಸರಿಯಾಗಿ ಸಿಗುತ್ತಿಲ್ಲ. ನ್ಯಾಯಬದ್ಧವಾಗಿ ಸರ್ಕಾರಕ್ಕೆ ಕಳೆದ 60 ವರ್ಷಗಳಿಂದ ತೆರಿಗೆ ಕಟ್ಟುತ್ತಿದ್ದೇವೆ. ಆದರೆ, ಕಾನೂನುಬಾಹಿರವಾಗಿ ಬೈಕ್ ಟ್ಯಾಕ್ಸಿಗಳು ಸೇವೆ ನೀಡುತ್ತಿದ್ದರೂ ಸರ್ಕಾರ ಕ್ರಮಕೈಗೊಳ್ಳದೇ ಕಾರ್ಪೊರೇಟ್ ಕಂಪನಿಗಳ ಪರ ನಿಂತಿದೆ. ಇದರಿಂದ ಆಟೋ ಚಾಲಕರ ಜೀವನ ದುಸ್ತರವಾಗಿದೆ" ಎಂದು ಭಾನುವಾರ ಬೆಂಗಳೂರು ಚಾಲಕರ ಸಂಘಟನೆಗಳ ಒಕ್ಕೂಟದ ಸಂಚಾಲಕ ಎಂ.ಮಂಜುನಾಥ್ ಹೇಳಿದ್ದರು.

"ಕಾನೂನುಬಾಹಿರ ವೈಟ್‌ಬೋರ್ಡ್ ಟ್ಯಾಕ್ಸಿ ರದ್ದು ಮಾಡಬೇಕು, ರಾಪಿಡೋ ಸೇರಿದಂತೆ ವಿವಿಧ ಬೈಕ್‌ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಬೇಕು ಎಂದು ಮೂರು ದಿನಗಳ ಗಡುವು ನೀಡಿದ್ದೆವು. ವಾಹನಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟನೆ ನಡೆಸಿದ್ದೆವು. ಆದರೆ ನಮ್ಮ ಬೇಡಿಕೆ ಈಡೇರದ ಕಾರಣ ಸೋಮವಾರ ಆಟೋ ಸೇವೆ ಬಂದ್ ಮಾಡುತ್ತೇವೆ" ಎಂದಿದ್ದರು.

ವಿವಿಧ ಸಂಘಟನೆಗಳ ಬೆಂಬಲ: ಒಂದು ವೇಳೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಈ ಮುಷ್ಕರವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುತ್ತೇವೆ. ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಬೆಂಗಳೂರಿನಲ್ಲಿ 21 ಆಟೋ ಚಾಲಕರ ಸಂಘಟನೆಗಳಿದ್ದು, ಎಲ್ಲ ಸಂಘಟನೆಗಳು ಈ ಬಂದ್‌ನಲ್ಲಿ ಪಾಲ್ಗೊಳ್ಳಲಿವೆ. ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ ಎಂದು ಎಂ.ಮಂಜುನಾಥ್ ತಿಳಿಸಿದ್ದರು.

ಇದನ್ನೂ ಓದಿ: ಉರಿಗೌಡ-ನಂಜೇಗೌಡರ ಚಿಂತನೆ ಬಿಟ್ಟು ಅಭಿವೃದ್ಧಿ ಕಡೆ ಗಮನಹರಿಸಿ: ಸಚಿವ ನಿರಾಣಿ

Last Updated :Mar 20, 2023, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.