ETV Bharat / state

ಕರ್ನಾಟಕದೊಂದಿಗೆ ದಕ್ಷಿಣದ ಎಲ್ಲ ಕಡೆ ಕಮಲ ಅರಳಿಸಲು ಮಿಷನ್ ದಕ್ಷಿಣ ಯೋಜನೆ: ಸಿ.ಟಿ ರವಿ

author img

By

Published : Jul 4, 2022, 3:09 PM IST

ಕರ್ನಾಟಕದ ನಂತರ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರೋದು ಉಪಚುನಾವಣೆಯಲ್ಲಿ ವ್ಯಕ್ತವಾಗಿದೆ. ದೊಡ್ಡ ಪ್ರಮಾಣದಲ್ಲಿ ಯುವಕರು, ಮಹಿಳೆಯರು ಯಾರ್ಲಿಯಲ್ಲಿ ಭಾಗಿಯಾಗಿದ್ದು, ಸ್ಪಷ್ಟ ಸಂದೇಶ ಸಿಕ್ಕಂತಾಗಿದೆ ಎಂದು ಸಿಟಿ ರವಿ ವಿವರಿಸಿದರು.

ಕರ್ನಾಟಕದೊಂದಿಗೆ ದಕ್ಷಿಣದ ಎಲ್ಲಾ ಕಡೆ ಕಮಲ ಅರಳಿಸಲು ಮಿಷನ್ ದಕ್ಷಿಣ ಯೋಜನೆ: ಸಿ.ಟಿ ರವಿ
ಕರ್ನಾಟಕದೊಂದಿಗೆ ದಕ್ಷಿಣದ ಎಲ್ಲಾ ಕಡೆ ಕಮಲ ಅರಳಿಸಲು ಮಿಷನ್ ದಕ್ಷಿಣ ಯೋಜನೆ: ಸಿ.ಟಿ ರವಿ

ಬೆಂಗಳೂರು: ಕರ್ನಾಟಕದ ನಂತರ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಅದಕ್ಕಾಗಿ ಮಿಷನ್ ದಕ್ಷಿಣ್ ಯೋಜನೆ ಅಡಿ ಪಕ್ಷ ಸಂಘಟನೆಗೆ ನಿರ್ಧರಿಸಲಾಗಿದ್ದು,ಮೋದಿ ಕರೆಯಂತೆ ಸ್ನೇಹ ಯಾತ್ರೆ ಮೂಲಕ ಬಿಜೆಪಿ ಯೋಚನೆ - ಯೋಜನೆ ಜನರಿಗೆ ಮುಟ್ಟಿಸಿ ದಕ್ಷಿಣ ಭಾರತದಲ್ಲೂ ಕಮಲ ಅರಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.

ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತೆಲಂಗಾಣದ ಭಾಗ್ಯನಗರವಾದ ಈಗಿನ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯದ ಸಿಎಂಗಳು, ಅಧ್ಯಕ್ಷರು,‌ಪದಾಧಿಕಾರಿಗಳು ಭಾಗಿಯಾಗಿದ್ದು, ಎರಡು ದಿನಗಳ ಕಾಲ ಪ್ರಧಾನಿಗಳು ಮಾರ್ಗದರ್ಶನ ಮಾಡಿದರು. ದಕ್ಷಿಣ ಭಾರತದ ರಾಜ್ಯದಲ್ಲಿ ಬಿಜೆಪಿ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಕರ್ನಾಟಕದ ನಂತರ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರೋದು ಉಪಚುನಾವಣೆಯಲ್ಲಿ ವ್ಯಕ್ತವಾಗಿದೆ. ದೊಡ್ಡ ಪ್ರಮಾಣದಲ್ಲಿ ಯುವಕರು, ಮಹಿಳೆಯರು ಯಾರ್ಲಿಯಲ್ಲಿ ಭಾಗಿಯಾಗಿದ್ದು, ಸ್ಪಷ್ಟ ಸಂದೇಶ ಸಿಕ್ಕಂತಾಗಿದೆ ಎಂದು ವಿವರಿಸಿದರು.

ಕರ್ನಾಟಕದ ನಂತರ ತೆಲಂಗಾಣ ಬಿಜೆಪಿ ಮಡಿಲಿಗೆ ಬೀಳಲಿದೆ. ತಮಿಳುನಾಡಿನಲ್ಲೂ ಬಿಜೆಪಿ ಬೆಳವಣಿಗೆ ಆಶಾದಾಯಕವಾಗಿದೆ. ರಾಜ್ಯಾಧ್ಯಕ್ಷ ಅಣ್ಣಮಲೈ ನೇತೃತ್ವದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುತ್ತಿದೆ. ತಮಿಳುನಾಡಿನ ಜನ ಬದಲಾವಣೆ ಬಯಸುತ್ತಿರುವುದು ಅನುಭವಕ್ಕೆ ಬರುತ್ತಿದೆ. ಪಾಂಡಿಚೇರಿಯಲ್ಲಿ ಈಗಾಗಲೇ ಅಧಿಕಾರದಲ್ಲಿ ಪಾಲುದಾರರಾಗಿದ್ದೇವೆ. ಆಂಧ್ರದಲ್ಲಿ ಪ್ರಯತ್ನ ಪಡಬೇಕಿದೆ ಎಂದರು.

ಮುರ್ಮು ಮತ ಯಾಚನೆಗೆ ರಾಜ್ಯ ಪ್ರವಾಸ: ಕಾಂಗ್ರೆಸ್ ಒಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲ. ಅದರ ವಿರುದ್ಧ ಧ್ವನಿ ಎತ್ತಿದವರಿಗೆ ಮೂಲೆ ಸೇರಿಸುವ ಕೆಲಸ ಮಾಡಿದ್ದಾರೆ. ಅನೇಕ ಪಕ್ಷಗಳಿಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ. ಆದರೆ, ಬಿಜೆಪಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಕೊಡುವ ಕೆಲಸ ಮಾಡಿದೆ. ಎನ್‌.ಡಿ.ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ರಾಜ್ಯಕ್ಕೆ ಬರುತ್ತಿದ್ದಾರೆ. ಮೊದಲಬಾರಿ ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ ಮಾಡುವ ಅವಕಾಶ ದೊರೆತಾಗ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಅಬ್ದುಲ್ ಕಲಾಂ ಅವರನ್ನ ಆಯ್ಕೆ ಮಾಡಿತು.

ಆ ಆಯ್ಕೆಗೆ ಕೆಲವು ಪಕ್ಷದವರನ್ನ ಹೊರತುಪಡಿಸಿ ನಮ್ಮಲ್ಲೇ ಒಬ್ಬನನ್ನ ಆಯ್ಕೆ ಮಾಡಿದ್ದರು ಎಂದು ಇಡೀ‌ ದೇಶದ ಜನ ಖುಷಿ ಪಟ್ಟರು. ದುರ್ದೈವ ಅವರನ್ನ ಎರಡನೇ ಬಾರಿ ಆಯ್ಕೆ ಮಾಡಲು ಅವಕಾಶ ಸಿಗಲಿಲ್ಲ. ಮತ್ತೊಮ್ಮೆ ಅವಕಾಶ ಸಿಕ್ಕಾಗ ರಾಮನಾಥ್ ಕೋವಿಂದ್ ಅವರಿಗೆ ಅವಕಾಶ ನೀಡಿತ್ತು.

ಈಗ ಆದಿವಾಸಿ ಮಹಿಳೆ, ಬಡತನದಿಂದ ಬದುಕು ಕಟ್ಟಿಕೊಂಡವರು, ರಾಜ್ಯಪಾಲರಾಗಿ ಅನುಭವದ ಗಣಿಯಾಗಿರೋ ದ್ರೌಪದಿ ಮುರ್ಮು ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ, ಎನ್.ಡಿ.ಎ ಮೂಲಕ ಆಯ್ಕೆ ಮಾಡಿದ್ದೇವೆ. ಮತ ಕೇಳಲು ಸದ್ಯದಲ್ಲೇ ಬರುತ್ತಿದ್ದಾರೆ. ಈಗಿರೋ ಮಾಹಿತಿ ಪ್ರಕಾರ ಅವರು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ಹೊರಹಾಕಿದರು.

ಸಿದ್ದರಾಮಯ್ಯಗೆ ಉಲ್ಟಾ ಮಚ್ಚೆ ಇದೆ: ಕಾಂಗ್ರೆಸ್ ಈ ಬಾರಿ ಚುನಾವಣೆಯಲ್ಲಿ 120ಸ್ಥಾನ ಗೆಲ್ಲುವ ಹೇಳಿಕೆ ನೀಡಿದೆ. ಖಾಲಿ ಡಬ್ಬ ಜಾಸ್ತಿ ಸೌಂಡ್ ಮಾಡುತ್ತದೆ. ಗೋವಾದಲ್ಲಿ ಕಾಂಗ್ರೆಸ್ ಅಧಿಕಾರವನ್ನೂ ಹಂಚಿಕೊಂಡು ಬಿಟ್ಟಿದ್ದರು. ಯುಪಿಯಲ್ಲಿ ಏನಾಯ್ತು? ಮೇ ಲಡಕೀ ಹೂ, ಲಡ್ ಸಕ್ತಾಹೂ ಅಂದರು ಅದು ಏನಾಯ್ತು? ನಿಂತ ಸ್ಥಾನಗಳೆಷ್ಟು ಗೆದ್ದ ಸೀಟುಗಳೆಷ್ಟು? ಸಿದ್ದರಾಮಯ್ಯ ಹೇಳೋದೆಲ್ಲಾ ಉಲ್ಟಾ ಆಗುತ್ತದೆ.

ಮೋದಿ ಅವರಪ್ಪನಾಣೆ ಪ್ರಧಾನಿ ಆಗಲ್ಲ ಅಂತ ಹೇಳಿದ್ದರು. ನಾನೇ ಮುಂದಿನ ಸಿಎಂ ಅಂದರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು ಎಂದ ರವಿ, ಕೆಲವರಿಗೆ ಉಲ್ಟಾ ಮಚ್ಚೆ ಇರುತ್ತದೆ, ಅದು ಸಿದ್ದರಾಮಯ್ಯ ಅವರಿಗಿದೆ ಅನಿಸುತ್ತಿದೆ. ಅವರು ಹೇಳೋದೆಲ್ಲಾ ಉಲ್ಟಾ ಆಗುತ್ತದೆ ಎಂದು ವ್ಯಂಗ್ಯವಾಡಿದರು.

ದಿ ಆಲ್ ಮೈ ಬ್ರದರ್ಸ್ ಅಂತ ನಾವು ಎಲ್ಲೂ ಹೇಳಿಲ್ಲ: ರಾಜಸ್ಥಾನದಲ್ಲಿ ಕನ್ನಯ್ಯ ಲಾಲ್ ಹತ್ಯೆ ಮತ್ತು ಹತ್ಯೆ ಮಾಡಿದವರು ಬಿಜೆಪಿ ಕಾರ್ಯಕರ್ತರಾ ಅನ್ನೋ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ನಮ್ಮದು ಆನ್ ಲೈನ್ ಮೆಂಬರ್ ಶಿಪ್ ಇದೆ. ಆನ್ ಲೈನ್ ಮೂಲಕ ಯಾರು ಬೇಕಾದರೂ ಮೆಂಬರ್ ಶಿಪ್ ತೆಗೆದುಕೊಳ್ಳಬಹುದು.

ಸೆಲ್ಫಿ‌ ಯಾರು ಬೇಕಾದರೂ ತಗೋಬೋದು, ತಗೊಂಡ ಮಾತ್ರಕ್ಕೆ ಅವರು ಕಾರ್ಯಕರ್ತರು ಅಂತಲ್ಲ. ರಾಜಸ್ತಾನದಲ್ಲಿ ಕನ್ನಯ್ಯ ಲಾಲ್‌ಗೆ ಮಚ್ಚು ತೋರಿಸಿ ಬೆದರಿಸಿದ್ದು ಯಾರು.? ದಿ ಆಲ್ ಮೈ ಬ್ರದರ್ಸ್ ಅಂತ ನಾವು ಎಲ್ಲೂ ಹೇಳಿಲ್ಲ. ತಮ್ಮ ಕಾರ್ಯವನ್ನ ಸುಲಭವಾಗಿ ಮಾಡಿಕೊಳ್ಳಲು, ಬಿಜೆಪಿ ಒಳಗೆ ಇದ್ದುಕೊಂಡು ಬಿಜೆಪಿ ನಾಯಕರನ್ನೇ ಹತ್ಯೆ ಮಾಡೋ ಸಂಚು ಮಾಡಿರಬಹುದು ಎಂದು ಶಂಕಿಸಿದರು.

ನೂಪುರ್ ಶರ್ಮಾ ವಿಚಾರ ಚರ್ಚೆ ಮಾಡಲ್ಲ.ಸುಪ್ರೀಂ ಕೋರ್ಟ್ ಸತ್ಯದ ಪರ ಇದೆ ಅಂದುಕೊಂಡಿದ್ದೇನೆ.ಎಲ್ಲಾ ಮತದ ಆಳವಾದ ಅಧ್ಯಯನ ಮಾಡಿ ಯಾವ್ಯಾವ ಮತ ಹೇಗಿದೆ ಅಂತ ಅಧ್ಯಯನ ಮಾಡಿ ಒಳ್ಳೆಯದು, ಕೆಟ್ಟದರ ಬಗ್ಗೆ ವರದಿ ಮಾಡಿದರೆ ದೇಶದ ಜನತೆಗೆ ತಿಳಿಯಲಿದೆ. ಆಗ ನೂಪುರ್ ಶರ್ಮಾ ಹೇಳಿಕೆ, ಸರಿಯೋ, ತಪ್ಪೋ ಗೊತ್ತಾಗಲಿದೆ ಎಂದರು.

ದತ್ತಪೀಠ ಹೋರಾಟಕ್ಕೆ ಸಂದ ಜಯ: ದತ್ತಪೀಠ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಮಾಧುಸ್ವಾಮಿ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚನೆ ಮಾಡಿತ್ತು. ಸುದೀರ್ಘ ಅಧ್ಯಯನ ನಡೆಸಿ ಬೆಂಗಳೂರು, ಚಿಕ್ಕಮಗಳೂರು ಅಭಿಪ್ರಾಯ ಸಂಗ್ರಹಿಸಿ, ಹಿಂದೂ ಅರ್ಚಕರ ನೇಮಿಸಿ, ವಾರದಲ್ಲಿ ಎರಡು ದಿನ ಮುಜಾವಾರ್ ಮಾಡಲು ಸೂಚಿಸಿದೆ.

ಸಿಎಂ ಬೊಮ್ಮಾಯಿ ಸಚಿವ ಸಂಪುಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ. ನ್ಯಾಯಾಲಯದ ಹೊರಗೆ, ಒಳಗೆ ನಡೆಸಿದ ಹೋರಾಟಕ್ಕೆ ನ್ಯಾಯ ದೊರೆತಿದೆ. ಈ ಹಿಂದೆ ಸೆಕ್ಯುಲರಿಸಂ ಹೆಸರಲ್ಲಿ ಹಿಂದೂಗಳ ಮನಸ್ಸಿಗೆ ಬೇಸರ ತರಿಸಿದ್ದನ್ನು ಪ್ರಶ್ನಿಸಿ ನಾವು ನ್ಯಾಯಾಲಯಕ್ಕೆ ಹೋಗಿದ್ದೆವು.
ನ್ಯಾಯಾಲಯ ಇದನ್ನು ಸರಿಪಡಿಸುವಂತೆ ಸೂಚಿಸಿತ್ತು. ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ್ದನ್ನ ಕೋರ್ಟ್ ತಿರಸ್ಕರಿಸಿತ್ತು. ಈಗ ಬಿಜೆಪಿ ಸರ್ಕಾರದ ತೀರ್ಪಿಗೆ ನಾನು ಬೆಂಬಲ ನೀಡುತ್ತೇನೆ. ಜಿಲ್ಲಾಡಳಿತ ಶೀಘ್ರವೇ ಅರ್ಚಕರ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಪಾಪದ ಕೊಡ ತುಂಬಿ ಮಹಾಪತನ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ನೆಲಕಚ್ಚಿದೆ. ಜನರಿಗೆ ಸ್ಪಂದನೆ ಇಲ್ಲದ ಜಡತ್ವ ಅಲ್ಲಿ ಕಾಣುತ್ತಿತ್ತು. ದಾವೂದ್ ಇಬ್ರಾಹಿಂ ಜೊತೆ ವ್ಯವಹರಿಸುವ ಮೂಲಕ ಭಾರತದ ಸ್ವಾಭಿಮಾನಕ್ಕೆ ಮುಜುಗರ ತರಿಸಿತ್ತು. ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಹುಮತ ಸಾಬೀತು ಪಡಿಸೋದು ನಿಶ್ಚಿತ.

ಬಿಜೆಪಿ ಕೆಲವು ವುಚಾರದಲ್ಲಿ ರಾಜೀ ಮಾಡಿಕೊಳ್ಳಲ್ಲ.ರಾಷ್ಟ್ರವಾದ, ಅಭಿವೃದ್ದಿ ವಿಚಾರದಲ್ಲಿ ರಾಜೀ ಮಾಡಿಕೊಳ್ಳಲ್ಲ. ಬಹುಮತ ಇಲ್ಲದೇ ಹೋದರು ನಿತೀಶ್ ಕುಮಾರ್ ಅವರನ್ನ ಒಪ್ಪುತ್ತೇವೆ. ಏಕನಾಥ್ ಶಿಂದೆ ಅವರನ್ನ ಸಿಎಂ ಸ್ಥಾನದಲ್ಲಿ ಕೂರಿಸಿದ್ದೇವೆ.

ಶಿವಸೇನೆಗಿಂತ 70 ಸೀಟ್ ಹೆಚ್ಚಿದ್ದೇವೆ. ಆದರೂ ನಾವು ರಾಜೀ ಮಾಡಿಕೊಂಡಿದ್ದೇವೆ. ಯಾವುದೇ ಸಂದರ್ಭದಲ್ಲೂ ಕಾಂಗ್ರೆಸ್ ಜೊತೆ ನಾನು ಹೋಗಲ್ಲ ಅಂತ ಬಾಳ ಸಾಹೇಬ್ ಠಾಕ್ರೆ ಹೇಳಿದ್ದರು. ಆದರೆ, ಅವರ ಮಗ ಅವರಿಗೆ ಕಪ್ಪು ಚುಕ್ಕೆಯಾಗಿದ್ದಾರೆ. ಹನುಮಾನ್ ಚಾಲೀಸ್ ಪಠಣ ಮಾಡಿದವರನ್ನ ಹೊಡೆಸಿ, ಜೈಲಿಗೆ ಹಟ್ಟಿದವರು ಇವರು.ಇವರ ಪಾಪದ ಕೊಡ ತುಂಬಿತ್ತು, ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಹೊಸ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ ಎಂದು ಹರಿಹಾಯ್ದರು.

ಕೆನಾಡದ ಫಿಲ್ಮ್ ಪೆಸ್ಟಿವಲ್ ನಲ್ಲಿ ಕಾಳಿ ಮಾತೆ ಸಿಗರೇಟ್ ಸೇದುವ ಭಂಗಿಯಲ್ಲಿದ್ದ ಪೋಸ್ಟರ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಈ ಬಗ್ಗೆ ಸರಿಯಾದ ಮಾಹಿತಿಲ್ಲ. ಆದರೆ ಇದು ತಪ್ಪು ಕಾನೂನಾತ್ಮಕವಾಗಿ ಯಾವ ರೀತಿ ಹೊರಾಟ ಮಾಡ್ಬೇಕೋ ಮಾಡುತ್ತೇವೆ. ಆದರೆ, ನಾವು ಸೈಲೆಂಟ್ ಆಗಿರೋದನ್ನೆ ದೌರ್ಬಲ್ಯ ಅಂದುಕೊಂಡರೆ ಈ ರೀತಿ ತಪ್ಪಾಗುತ್ತದೆ ಎಂದರು.

ಇದನ್ನೂ ಓದಿ: ನಗರದಲ್ಲಿ ಸೊಲ್ಯೂಷನ್ ದಂಧೆ? ಪುಸ್ತಕದಂಗಡಿಯಲ್ಲಿ‌‌ ಬಾಲಕರಿಗೆ ಮಾರಾಟ ಮಾಡ್ತಿದ್ದ ಮಾಲೀಕ ಅರೆಸ್ಟ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.