ETV Bharat / state

ಸುರೇಶ್ ಅಂಗಡಿ ಜೊತೆಗಿನ ಕ್ಷಣಗಳನ್ನು ನೆನಪಿಸಿಕೊಂಡ ಸಚಿವ ಶ್ರೀರಾಮುಲು

author img

By

Published : Sep 26, 2020, 7:33 AM IST

ಕೇಂದ್ರ ಸಚಿವ ಸುರೇಶ್ ಅಂಗಡಿ ಜೊತೆಗೆ ಕಳೆದ ಕ್ಷಣಗಳನ್ನು ಸಚಿವ ಶ್ರೀರಾಮುಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Minister Sriramulu shared his moments with  Suresh angady
ಸುರೇಶ್ ಅಂಗಡಿ ಜೊತೆಗಿನ ಒಡನಾಟದ ಕ್ಷಣಗಳನ್ನು ಹಂಚಿಕೊಂಡ ಸಚಿವ ಶ್ರೀರಾಮುಲು

ಬೆಂಗಳೂರು: ಕೇಂದ್ರ ಸಚಿವ ಸುರೇಶ್ ಅಂಗಡಿ ಜೊತೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿಶೇಷ ಬಾಂಧವ್ಯ ಹೊಂದಿದ್ದರು. ಸಚಿವರು ನಿಧನರಾದ ಸುದ್ದಿ ತಿಳಿಯಿತ್ತಿದ್ದಂತೆ ದಿಗ್ಭ್ರಮೆ ವ್ಯಕ್ತಪಡಿಸಿದ್ದ ಶ್ರೀರಾಮುಲು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಗೂ ಅಂಗಡಿ ಜೊತೆಗಿನ ಒಡನಾಟದ ಕ್ಷಣಗಳನ್ನು ಬರೆದುಕೊಂಡಿದ್ದಾರೆ.

ಸುರೇಶ್ ಅಂಗಡಿ ಪಕ್ಷದ ಕಟ್ಟಾಳು ಮತ್ತು ಅನುಭವಿ ಸಂಸದೀಯ ಪಟು. ನಾನು ಸಂಸತ್ತಿಗೆ ಆಯ್ಕೆಯಾಗುವ ಹೊತ್ತಿಗೆ ಆಗಲೇ ಎರಡು ಬಾರಿ ಸಂಸತ್ತಿನ ಅನುಭವ ಹೊಂದಿದ್ದರು. ಮೂರನೇ ಅವಧಿಯಲ್ಲಿ ಸಂಸತ್ತಿನ ಕಾರ್ಯ ಕಲಾಪಗಳ ಬಗ್ಗೆ ಕರ್ನಾಟಕದ ಸಂಸದರನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ಪಕ್ಷ ಅವರಿಗೆ ವಹಿಸಿತು. ಜೊತೆಗೆ ಹೌಸ್ ಕಮಿಟಿ ಅಧ್ಯಕ್ಷರಾಗಿ ಎಲ್ಲಾ ಸಚಿವರಿಗೆ ಮತ್ತು ಸಂಸದರಿಗೆ ಮನೆ ಹಂಚಿಕೆ ಮಾಡುವ ಜವಾಬ್ದಾರಿಯುತ ಸ್ಥಾನ ಕೂಡ ಅವರ ಹೆಗಲ ಮೇಲಿತ್ತು. ನಾನು ಐದು ವರ್ಷ ಲೋಕಸಭೆ ಅವಧಿ ಪೂರ್ಣಗೊಳಿಸುವ ಒಂದು ವರ್ಷದ ಮೊದಲು ವಿಧಾನಸಭೆ ಚುನಾವಣೆಯತ್ತ ಮುಖ ಮಾಡಿದ್ದರಿಂದ ದೆಹಲಿಯನ್ನು ಬಿಡಬೇಕಾಯಿತು ಎಂಬ ಉಲ್ಲೇಖದೊಂದಿಗೆ ಅದಕ್ಕೂ ಮುಂಚೆ ದೆಹಲಿಯಲ್ಲಿದ್ದಾಗ ನಡೆದ ಘಟನೆಗಳ ಪೈಕಿ ಕೆಲ ಘಟನೆಗಳ ಬಗ್ಗೆ ರಾಮುಲು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ಲೋಕಸಭೆಗೆ ಆಯ್ಕೆಯಾದಾಗ ಬಿಡಿ ಮಾರ್ಗ್​ನಲ್ಲಿರುವ ನರ್ಮದಾ ಅಪಾರ್ಟ್‌ಮೆಂಟ್​ನಲ್ಲಿ ವಾಸ್ತವ್ಯಕ್ಕೆ ಮನೆ ಮಂಜೂರಾಗಿತ್ತು. ಎರಡು ವರ್ಷ ಅಲ್ಲೇ ವಾಸವಿದ್ದೆ. ಈ ಮಧ್ಯೆ ಅಣ್ಣನವರು ಹೌಸಿಂಗ್ ಕಮಿಟಿ ಅಧ್ಯಕ್ಷರಾಗಿದ್ದರಿಂದ ನರ್ಮದಾ ಮನೆ ಬಿಟ್ಟು, ಫಿರೋಜ್ ಶಾ ರಸ್ತೆಯಲ್ಲಿರುವ 120 ಮನೆಗೆ ಶಿಫ್ಟ್ ಮಾಡಲು ವಿನಂತಿಸಿಕೊಂಡೆ. ಕೂಡಲೇ ಅವರು ನಿಮಗೆ ಬಂಗಲೆ ಪಡೆಯುವ ಅವಕಾಶ ಇದೆ. ತಗೊಳ್ಳಿ ಅಂತ ಹೇಳಿದ್ದಲ್ಲದೇ ಸ್ವತಃ ಆರು ಮನೆಗಳನ್ನು ನೋಡಲು ಹೇಳಿದರು. ಕೊನೆಗೆ ನಾನು ಆಯ್ಕೆ ಮಾಡಿದ ಮನೆಯನ್ನೇ ಮಂಜೂರು ಮಾಡಿಕೊಟ್ಟರು. ಆಗಾಗ ಭೇಟಿಯಾದಾಗ ಮನೆಗೆ ಬೇಕಾದ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಎಂದು ನೆನಪಿಸುತ್ತಿದ್ದರು.

Minister Sriramulu shared his moments with  Suresh angady
ಅಂಗಡಿ ಜೊತೆಗಿನ ಕ್ಷಣಗಳನ್ನು ಹಂಚಿಕೊಂಡ ಸಚಿವ ಶ್ರೀರಾಮುಲು

ಫಿರೋಜ್ ಶಾ ಮನೆಗೆ ಹೋದ 1 ವರ್ಷದ ನಂತರ 2017 ಡಿಸೆಂಬರ್ 19ರಂದು ಬೆಳಗಿನ ಜಾವ ಶಾರ್ಟ್ ಸರ್ಕ್ಯೂಟ್​​​ನಿಂದ ಬೆಂಕಿ ಹೊತ್ತಿಕೊಂಡು ನಾನು ಮಲಗುವ ಕೋಣೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ವಾಸಕ್ಕೆ ಯೋಗ್ಯವಲ್ಲದ ಸ್ಥಿತಿಗೆ ಕೋಣೆ ತಲುಪಿತ್ತು. ಈ ವಿಷಯ ತಿಳಿದ ಕೂಡಲೇ ನನ್ನೆಲ್ಲಾ ಸಂಸದ ಸಹೋದ್ಯೋಗಿಗಳು ಮನೆಗೆ ಭೇಟಿ ನೀಡಿದ್ದರು. ಸುದ್ದಿ ತಿಳಿದ ಕೂಡಲೇ ಮನೆಗೆ ಬಂದ ಅಣ್ಣನವರು, ಕೊನೆಯವರೆಗೆ ಇದ್ದು ನಮ್ಮೆಲ್ಲಾ ಬೇಕು ಬೇಡಗಳ ಬಗ್ಗೆ ವಿಚಾರಿಸಿದ ಬಳಿಕ ಅದೇ ರೋಡ್​ನಲ್ಲಿದ್ದ ತಮ್ಮ ಮನೆಗೆ ನನ್ನನ್ನು ಕರೆದುಕೊಂಡು ಹೋದರು. ಆಗ ಚಳಿಗಾಲದ ಅಧಿವೇಶನ ಕೂಡ ನಡೆಯುತಿತ್ತು. ನನ್ನ ಮನೆಯಿಂದ ಹೋಗುವಾಗ ಮನೆ ತುಂಬಾ ನೀರು ಚೆಲ್ಲಿದ್ದರಿಂದ ಜಾರಿ ಬಿದ್ದ ಪರಿಣಾಮ ಅಣ್ಣನವರ ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ಆ ಪೆಟ್ಟಿನ ಬಗ್ಗೆ ನನ್ನನ್ನು ಭೇಟಿಯಾದಾಗಲೆಲ್ಲ ನೆನಪಿಸಿಕೊಳ್ಳುತ್ತಿದ್ದರು ಎಂದು ಹಳೆಯ ಒಡನಾಟದ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮೆಲುಕುಹಾಕಿದ್ದಾರೆ.

ನಾನು ವಿಧಾನಸಭೆಗೆ ಸ್ಪರ್ಧಿಸಿ ಗೆದ್ದ ಬಳಿಕವೂ ದೆಹಲಿ ಓಡಾಟ ಇರುತ್ತಿತ್ತು. ಮಾಜಿ ಮಂತ್ರಿಯಾಗಿದ್ದ ಕಾರಣ ಕರ್ನಾಟಕ ಭವನದಲ್ಲಿ ವಾಸ್ತವ್ಯ ವ್ಯವಸ್ಥೆ ಇದ್ದರೂ ನಾವು ಅಲ್ಲಿಗೆ ಹೋಗುತ್ತಿದ್ದದ್ದು ತೀರಾ ಕಡಿಮೆ. ಬದಲಿಗೆ ಸುರೇಶ್ ಅಂಗಡಿ ನನಗಾಗಿ ಮೀಸಲಿಟ್ಟಿದ್ದ ತಾವು ವಾಸವಿದ್ದ ಸೌತ್ ಅವೆನ್ಯೂ ರಸ್ತೆಯ ಈಗಿನ ನಿವಾಸದಲ್ಲಿ ಒಂದು ವಿಶಾಲವಾದ ರೂಂನಲ್ಲಿ ಉಳಿದುಕೊಳ್ಳುತ್ತಿದ್ದೆ. ನಾನು ಲಿಂಗ ಪೂಜೆ ಮತ್ತು ಸಾಲಿಗ್ರಾಮ ಪೂಜೆ ಮಾಡುವ ಕಾರಣ ಅವರು ನಮ್ಮ ಮನೆಯಲ್ಲಿ ಪೂಜೆ ಮಾಡಿ ನಿಮಗೆ ಅದೃಷ್ಠ ಒಲಿಯಲಿ ಎಂದು ತಮಾಷೆ ಮಾಡುತ್ತಿದ್ದರು. ಪೂಜೆ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಆದರೂ ಅವರು ಬೆಳಗಿನ ಉಪಹಾರವನ್ನು ನನ್ನನ್ನು ಬಿಟ್ಟು ಸೇವಿಸುತ್ತಿರಲಿಲ್ಲ. ನಾನು ಹಿರಿಯ ಸಂಸದ ಅನ್ನುವ ಅಹಂಕಾರವಾಗಲಿ, ದರ್ಪವಾಗಲಿ ಅವರಲ್ಲಿ ಕಾಣಿಸಲೇ ಇಲ್ಲ ಎಂದು ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

17ನೇ ಲೋಕಸಭೆಗೆ ಮತ್ತೆ ಮರು ಆಯ್ಕೆಯಾದಾಗ, ಮಂತ್ರಿಯಾಗಿ ಕೆಲಸ ನಿರ್ವಹಿಸಬೇಕು. ದೇಶ ಸೇವೆ ಮಾಡಬೇಕು ಅನ್ನುವ ಕನಸು ಕಂಡಿದ್ದರು. ಅದರಂತೆ ಅವರು ಮಂತ್ರಿಯಾಗಿ ಆಯ್ಕೆಯಾದರು. ಆಗ ಎಲ್ಲರಿಗಿಂತ ನಾನು ಹೆಚ್ಚು ಸಂತೋಷ ಪಟ್ಟಿದ್ದೆ. ಅಲ್ಲದೆ ಅವರಿಗೆ ನೀವು ಮಂತ್ರಿಯಾಗುತ್ತಿದ್ದೀರಿ ಅಂತ ಕರೆ ಬಂದಿದ್ದೆ ತಡ, 'ರಾಮುಲು ನಿಮ್ಮ ಪೂಜೆಯ ಫಲ ನಾನು ಮಂತ್ರಿಯಾದೆ' ಎಂದು ಹೇಳಿ ಸಂಭ್ರಮಿಸಿದ್ದರು. ಎರಡನೇ ಅವಧಿಯ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋದಾಗ ದೆಹಲಿಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದ್ದೆ.

ಅಣ್ಣ, ನನಗೆ ಇಷ್ಟೆಲ್ಲಾ ಸಹಕಾರ ಮತ್ತು ಸಹಾಯ ಮಾಡಿದ ನೀವು ಇಂದು ನಮ್ಮನ್ನು ಬಿಟ್ಟು ಅಗಲಿದ್ದೀರಿ. ನಿಮ್ಮ ಕನಸುಗಳನ್ನು ಅರ್ಧಕ್ಕೆ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದೀರಿ. ನಿಮ್ಮಿಂದ ಇಡೀ ರಾಜ್ಯಕ್ಕೆ ಸಾಕಷ್ಟು ಅನುಕೂಲವಾಗಿದೆ. ಎಲೆಮರೆ ಕಾಯಿಯಂತೆ ನೀವು ಮಾಡುತ್ತಿದ್ದ ಸೇವೆ, ನಿಮ್ಮನ್ನು ಕಳೆದುಕೊಂಡ ಮೇಲೆ ಜಗತ್ತಿಗೆ ತಿಳಿಯುತ್ತಿದೆ. ಕೊರೊನಾ ಎಂಬ ವಿಧಿಯ ಆಟ ನಿಮ್ಮ ಎಷ್ಟೋ ಜನಪರ ಕನಸುಗಳನ್ನು ನನಸಾಗಲು ಬಿಡಲಿಲ್ಲ. ನೀವಿಲ್ಲದ ಈ ಶೂನ್ಯ ವಾತಾವರಣ ನಮ್ಮೆಲ್ಲರನ್ನು ಕೊನೆಯವರೆಗೂ ಕಾಡಲಿದೆ. ನಿಮ್ಮ ಅಗಲಿಕೆ ಅಕ್ಕನವರಿಗೆ, ಮಕ್ಕಳಿಗೆ ಮತ್ತು ಅಳಿಯಂದಿರಿಗೆ ಎಂದಿಗೂ ತುಂಬಲಾರದ ನಷ್ಟ. ಅವರೆಲ್ಲರಿಗೆ ಈ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮ ಸರಳತೆ, ಸಜ್ಜನಿಕೆ, ಸಹೋದರತ್ವ, ಜನ ಸೇವೆಯ ತುಡಿತ ನಮ್ಮೆಲ್ಲರ ಪಾಲಿಗೆ ಯಾವತ್ತಿಗೂ ಮಾದರಿ. ಮತ್ತೆ ಹುಟ್ಟಿ ಬನ್ನಿ ಅಣ್ಣ ಎಂದು ಶ್ರೀರಾಮುಲು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.