ETV Bharat / state

ಗಂಗಾ ಕಲ್ಯಾಣ ಯೋಜನೆ ನೆರವು 3.5 ಲಕ್ಷ ರೂಪಾಯಿಗೆ ಹೆಚ್ಚಳ: ಸಚಿವ ಶಿವರಾಜ ತಂಗಡಗಿ

author img

By

Published : Jul 21, 2023, 8:08 AM IST

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಗಂಗಾ ಕಲ್ಯಾಣ ಯೋಜನೆ ನೆರವಿಗೆ ಇಲಾಖೆಗಳು ಒಂದೇ ರೀತಿ ನೀತಿ ಅನುಸರಿಸಬೇಕೆಂದು ಸೂಚಿಸಿದ್ದಾರೆ.

ಅಧಿಕಾರಿಗಳೊಂದಿಗೆ  ಸಚಿವರು ಶಿವರಾಜ ತಂಗಡಗಿ
ಅಧಿಕಾರಿಗಳೊಂದಿಗೆ ಸಚಿವರು ಶಿವರಾಜ ತಂಗಡಗಿ

ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳು ನೀಡುತ್ತಿರುವ ಘಟಕ ವೆಚ್ಚಗಳ ಹಾಗೂ ನೆರವಿನ ಮೊತ್ತದಲ್ಲಿ ವ್ಯತ್ಯಾಸಗಳಿವೆ. ಇಲಾಖೆಗೊಂದು ನೀತಿ ಅನುಸರಿಸುವುದು ಸೂಕ್ತವಲ್ಲ. ಹಾಗಾಗಿ ಇನ್ನು ಮುಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನೀಡುವ ನೆರವಿನ ಮೊತ್ತವನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿರುವಂತೆಯೇ 3.5 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಗುರುವಾರ ನಡೆಸಿದ ವಿವಿಧ ನಿಗಮ/ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಉನ್ನತಾಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಇದುವರೆಗೂ ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಘಟಕಕ್ಕೆ 2 ಲಕ್ಷ ರೂ ನೆರವು ನೀಡಲಾಗುತ್ತಿತ್ತು. ಆದರೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ 3.5 ಲಕ್ಷ ರೂ. ನೆರವು ನೀಡಲಾಗುತ್ತಿದೆ. ಒಂದೇ ಉದ್ದೇಶಕ್ಕಾಗಿ ನೀಡಲಾಗುವ ನೆರವಿನ ಮೊತ್ತದಲ್ಲಿ ಇಲಾಖೆಗೊಂದು ನೀತಿ ಅನುಸರಿಸುವುದು ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು 150ರ ವರ್ಲ್ಡ್ ರ್ಯಾಂಕಿಂಗ್‌ನ ಒಳಗಿರಬೇಕು ಎಂಬ ನಿಯಮ ಇತ್ತು. ಇದನ್ನು 500 ರ್ಯಾಂಕಿಂಗ್ ಒಳಗಿರುವ ವಿದ್ಯಾರ್ಥಿಗಳಿಗೆ ಎಂದು ತಿದ್ದುಪಡಿ ಮಾಡಬೇಕು. ಇದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.

ಸಾರಥಿ ಸ್ವಾವಲಂಬನೆ ಯೋಜನೆಯಡಿ ಸಹಾಯಧನ: ಆಯವ್ಯಯದಲ್ಲಿ ಘೋಷಿಸಿರುವ ಸಾರಥಿ ಸ್ವಾವಲಂಬನೆ ಯೋಜನೆಯಡಿ ರೈತರಲ್ಲದ ಹಿಂದುಳಿದ ವರ್ಗಗಳ ಪಲಾನುಭವಿಗಳು ಸ್ವಸಾಮರ್ಥ್ಯದ ಮೇಲೆ ತಮ್ಮ ಜೀವನ ರೂಪಿಸಿಕೊಳ್ಳಲು 4 ಚಕ್ರಗಳುಳ್ಳ ಸರಕು ಸಾಗಣೆ ವಾಹನ ಖರೀದಿಸಲು 3.00 ಲಕ್ಷ ರೂ.ದವರೆಗೆ ಸಹಾಯಧನ ನೀಡಲಾಗುವುದು. ಈ ಯೋಜನೆಯ ಸಮರ್ಪಕ ಅನುಷ್ಠಾನ ಮಾಡಲು ಹಾಗೂ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಕ್ರಮವಹಿಸುವಂತೆ ಸಚಿವರು ಸೂಚನೆ ನೀಡಿದರು.

ಅರಿವು ಶೈಕ್ಷಣಿಕ ಯೋಜನೆ : ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ ಮೂಲಕ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಲ್ಲಿ ಅವರಿಗೆ ಪ್ರತಿವರ್ಷ 1 ಲಕ್ಷ ರೂ.ಯಂತೆ ಶೈಕ್ಷಣಿಕ ಸಾಲವನ್ನು ಶೇ 2ರಷ್ಟು ಬಡ್ಡಿ ದರದಲ್ಲಿ ನೀಡಲಾಗುವುದು. ಪ್ರತಿ ವರ್ಷ 1000 ವಿದ್ಯಾರ್ಥಿಗಳಿಗೆ ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಶೈಕ್ಷಣಿಕ ಸಾಲ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣ ವ್ಯಾಪ್ತಿಗೆ ಬರುವ ಇತರ ನಿಗಮಗಳಿಂದಲೂ ಈ ರೀತಿಯ ನೆರವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ಧಿನೇನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಡಾ.ಕೆ.ಎ.ದಯಾನಂದ, ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಾಂತರಾಜು ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿದ್ದರು.

ಇದನ್ನೂ ಓದಿ: ಸಂಗೀತ, ನೃತ್ಯ ಸೇರಿ ವಿವಿಧ ಕೋರ್ಸ್​ಗಳನ್ನು ರಾಜ್ಯವ್ಯಾಪಿ ನಡೆಸಲು ಮುಂದಾದ ವಿವಿ: ರಾಜ್ಯಪಾಲರ ಅನುಮೋದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.