ETV Bharat / state

ಅನಂತ್​ ಕುಮಾರ್ ಹೆಗಡೆಗೆ ಚುನಾಯಿತ ಪ್ರತಿನಿಧಿಯಾಗುವ ಯೋಗ್ಯತೆ ಇಲ್ಲ: ರಾಮಲಿಂಗಾರೆಡ್ಡಿ

author img

By ETV Bharat Karnataka Team

Published : Jan 14, 2024, 3:18 PM IST

ಅನಂತ್​ ಕುಮಾರ್ ಹೆಗಡೆ ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ ಕರ್ನಾಟಕದ ಜನತೆಯನ್ನು ಕುರಿತು ಆಡಿದ ಮಾತಾಗಿರುತ್ತದೆ. ಆದ್ದರಿಂದ ಅವರು ನಾಡಿನ ಜನರ ಕ್ಷಮೆ ಕೇಳಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದ್ದಾರೆ.

Etv Bharatminister-ramalingareddy-reaction-on-mp-anantakumar-hegde
ಅನಂತ್​ ಕುಮಾರ್ ಹೆಗಡೆಗೆ ಚುನಾಯಿತ ಪ್ರತಿನಿಧಿ ಆಗುವ ಯೋಗ್ಯತೆ ಇಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: "ನಿಮಗೆ ಸಂಸದರಲ್ಲ, ಯಾವುದೇ ಚುನಾಯಿತ ಪ್ರತಿನಿಧಿಯಾಗುವ ಯೋಗ್ಯತೆಯೂ ಇಲ್ಲ" ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಸಂಸದ ಅನಂತ್​​ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ್ದಾರೆ. ಎಕ್ಸ್​ ಪೋಸ್ಟ್ ಮಾಡಿರುವ ಅವರು, "ಲೋಕಸಭಾ ಸದಸ್ಯರಾದ ಅನಂತ್​ ಕುಮಾರ್‌ರವರೇ, "ಕುಲವಂ ಪೇಳ್ವುದು ನಾಲ್ಗೆ" ಎಂಬ ಮಾತಿನಂತೆ ನಿಮ್ಮ ಸಂಸ್ಕಾರ ಏನು ಎಂಬುದನ್ನು ನೀವಾಡಿರುವ ಮಾತು ಪ್ರತಿಬಿಂಬಿಸುತ್ತಿದೆ. ಇದೇ ಏನು ಬಿಜೆಪಿ, ಆರ್​ಎಸ್ಎಸ್, ನಿಮ್ಮ ತಂದೆ-ತಾಯಿ ನಿಮಗೆ ಕಲಿಸಿರುವ ಸಂಸ್ಕೃತಿ. ಇದೇ ಏನು ನಿಮ್ಮ ಆಚಾರ-ವಿಚಾರ?. ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂಬ ದಾಸರವಾಣಿಯನ್ನು ಪರಿಪಾಲಿಸಬೇಕಾದ ಸ್ಥಿತಿಗೆ ನೀವು ಬಂದು ನಿಂತಿರುವುದು ದುರಂತ" ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ಮಾತು ಆಡಿದರೆ ಹೋಯಿತು, ಮುತ್ತು ಉದುರಿದರೆ ಹೋಯಿತು" ಎಂಬಂತೆ ನೀವು ಮುಖ್ಯಮಂತ್ರಿಗಳ ಬಗ್ಗೆ ಬಳಸಿರುವ ಪದ 6.50 ಕೋಟಿ ಕರ್ನಾಟಕದ ಜನತೆಯನ್ನು ಕುರಿತು ಆಡಿದ ಮಾತಾಗಿರುತ್ತದೆ. ಅವರಿಗೆ ಮಾಡಿದ ಅವಮಾನವಾಗುತ್ತದೆ. ನೀವು ಆಡಿರುವ ಮಾತು, ಬಳಸಿರುವ ಪದ ನಿಮ್ಮ ಮಾನಸಿಕ ಸ್ಥಿತಿಯ ಪ್ರತೀಕ. ಸಣ್ಣ ಮಾತು ಆಡುವುದರಿಂದ ನೀವು ದೊಡ್ಡವರಾಗುವುದಿಲ್ಲ" ಎಂದು ಹೇಳಿದ್ದಾರೆ.

"ಕೇಂದ್ರ ಸಚಿವರಾಗಿದ್ದಾಗ ಸಂವಿಧಾನ ಬದಲಿಸುತ್ತೇವೆ, ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದೀರಿ. ಈಗ ಇಂತಹ ಮಾತು. ನಿಮಗಿದು ಮರ್ಯಾದೆ ತರುವುದಿಲ್ಲ. ಬಿಜೆಪಿ ಪಕ್ಷಕ್ಕೆ ಕಿಂಚಿತ್ತಾದರೂ ಮಾನ-ಮರ್ಯಾದೆ, ಆಚಾರ-ವಿಚಾರ ಇದ್ದರೆ ನಿಮ್ಮ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ನೀವು ನಾಡಿನ ಜನರ ಕ್ಷಮೆ ಕೇಳಬೇಕು. ಬೇರೆಯವರಿಗೂ ಮಾತಾಡಲು ಬರುತ್ತದೆ. ಆದರೆ ನಿಮ್ಮ ಮಟ್ಟಕ್ಕೆ ಇಳಿಯುವುದು ಅನಾಗರಿಕತೆ ಆಗುತ್ತದೆ" ಎಂದಿದ್ದಾರೆ.

"ಇಷ್ಟು ದಿನ ಅಡ್ರೆಸ್ ಇಲ್ಲದಂತೆ ಕಳೆದು ಹೋಗಿದ್ದ ತಾವು ಈಗ ಚುನಾವಣೆ ಸಮಯದಲ್ಲಿ ಮತ ಗಳಿಸಲು ರೋಷ, ಆವೇಶದ ಮಾತುಗಳನ್ನು ಆಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳದೇ ಇರುವಷ್ಟು ಜನ ದಡ್ಡರಲ್ಲ. ಈ ಬಾರಿ ತಮಗೆ ತಕ್ಕ ಪಾಠ ಕಲಿಸುತ್ತಾರೆ. ನಿಮ್ಮನ್ನು ಶಾಶ್ವತವಾಗಿ ಅಡ್ರೆಸ್​ಗೆ ಇಲ್ಲದಂತೆ ಮಾಡುತ್ತಾರೆ. ನೋಡ್ತಾ ಇರಿ" ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಗಡೆ ವಿರುದ್ಧ ಪ್ರಕರಣ ದಾಖಲು: ಮತ್ತೊಂದೆಡೆ, ಪ್ರಚೋದನಕಾರಿ ಹೇಳಿಕೆ ಹಾಗೂ ದ್ವೇಷ ಭಾಷಣ ಆರೋಪಗಳಡಿ ಬಿಜೆಪಿ ಸಂಸದ ಅನಂತ್​ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 505 ಹಾಗೂ 153ಎ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಇದನ್ನೂ ಓದಿ: ಹೆಗಡೆ ಪ್ರಚೋದನಾ ಹೇಳಿಕೆಯಿಂದ ಏನಾದರು ಘಟನೆ ನಡೆದರೆ ಅವರೇ ಜವಾಬ್ದಾರರು: ಗೃಹ ಸಚಿವ ಪರಮೇಶ್ವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.