ETV Bharat / state

ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಣ್ಣ ಲೋಪವನ್ನೂ ಸಹಿಸಲಾಗದು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

author img

By

Published : Jun 4, 2023, 7:20 AM IST

ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಸಭೆ ನಡೆಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಮಹತ್ವದ ಇಲಾಖೆ. ಇಲ್ಲಿ ಸಣ್ಣ ಲೋಪವನ್ನೂ ಸಹಿಸಲು ಸಾಧ್ಯವಿಲ್ಲ. ನಮ್ಮ ನಿರೀಕ್ಷೆ ಮತ್ತು ವೇಗಕ್ಕೆ ತಕ್ಕಂತೆ ಕೆಲಸ ನಿರ್ವಹಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು.

ಸಚಿವರಾದ ನಂತರ ಮೊದಲ ಬಾರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಜ್ಯಕ್ಕೆ ಹಾಗೂ ಸರ್ಕಾರಕ್ಕೆ ಉತ್ತಮ ಹೆಸರು ತರುವ ದಿಸೆಯಲ್ಲಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಜನರು ಬಹಳ ನಿರೀಕ್ಷೆ ಇಟ್ಟು ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ನಮ್ಮ ಕರ್ತವ್ಯ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅತ್ಯಂತ ಜವಾಬ್ದಾರಿ ಮತ್ತು ಸೂಕ್ಷ್ಮವಾದ ಇಲಾಖೆ ಎಂದರು.

ಹೊಸದಾಗಿ ಘೋಷಣೆಯಾಗಿರುವ ಗೃಹಲಕ್ಷ್ಮೀ ಸೇರಿದಂತೆ ಇಲಾಖೆಯ ಪ್ರತಿಯೊಂದು ಯೋಜನೆಗಳನ್ನೂ ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸಬೇಕು. ಯಾವುದೇ ರೀತಿಯ ದೂರುಗಳಿಗೆ ಅವಕಾಶವಿರಬಾರದು. ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಮುಂದಿನ ದಿನಗಳಲ್ಲಿ ವಿಸ್ತೃತವಾಗಿ ಇಲಾಖೆಗೆ ಸಂಬಂಧಿಸಿದ ಚರ್ಚೆ ನಡೆಸಲಾಗುವುದು. ಪ್ರತಿ ಜಿಲ್ಲೆಗೂ ತೆರಳಿ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಹೊಸ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ನಿಮ್ಮ ಕಾರ್ಯನಿರ್ವಹಣೆ ಇರಲಿ ಎಂದು ನಿರ್ದೇಶನ ಕೊಟ್ಟರು.

ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ, ನಿರ್ದೇಶಕಿ ಡಾ.ಕೆ.ಎನ್.ಅನುರಾಧಾ, ಮಕ್ಕಳ ರಕ್ಷಣಾ ನಿರ್ದೇಶಕ ಚಂದ್ರಕಾಂತ, ಮಹಿಳಾ ಆಯೋಗದ ಕಾರ್ಯದರ್ಶಿ ಕವಿತಾ ಮಣ್ಣಿಕೇರಿ, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ, ವಿಕಲಚೇತನರ ಇಲಾಖೆಯ ಜಂಟಿ ನಿರ್ದೇಶಕ ಶೇಷಪ್ಪ, ಬಾಲವಿಕಾಸ ಅಕಾಡೆಮಿ ಕಾರ್ಯದರ್ಶಿ ಭಾರತಿ ಶೆಟ್ಟರ್, ಬಾಲಭವನದ ಕಾರ್ಯದರ್ಶಿ ರಾಜಮೂರ್ತಿ, ಇಲಾಖೆಯ ಎಲ್ಲ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳಗಾವಿ ತಾಲೂಕಿನ ಮೊದಲ ಸಚಿವೆ: ಬೆಳಗಾವಿ ತಾಲೂಕಿನ ಇತಿಹಾಸದಲ್ಲೇ ಮೊದಲ ಸಚಿವೆಯಾದ ಹೆಗ್ಗಳಿಕೆಗೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಪಾತ್ರರಾಗಿದ್ದಾರೆ. ಈವರೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಗೆದ್ದ ಯಾವೊಬ್ಬ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿರಲಲ್ಲಿ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವೆಯಾಗುವ ಮೂಲಕ ಹೆಬ್ಬಾಳ್ಕರ್ ಹೊಸ ದಾಖಲೆ ಬರೆದಿದ್ದಾರೆ.

ಸಚಿವರಾದ ಬಳಿಕ ಮೊದಲ ಬಾರಿಗೆ ನಾಲ್ಕು ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದ್ದರು. ಸಚಿವ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತುಂಬಾ ದೊಡ್ಡ ಇಲಾಖೆ. ಹೆಚ್ಚು ಜವಾಬ್ದಾರಿ ಇದೆ ಎಂದಿದ್ದರು.

ಇದನ್ನೂ ಓದಿ: ಸಚಿವೆಯಾಗಿ ದಾಖಲೆ ಸೃಷ್ಟಿಸಿದ ಲಕ್ಷ್ಮಿ ಹೆಬ್ಬಾಳ್ಕರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.