ETV Bharat / state

ಒಬಿಸಿ ಮೀಸಲಾತಿಗೆ ಕಾಂತರಾಜ್ ಆಯೋಗದ ವರದಿ ಪರಿಗಣನೆಗೆ ಚಿಂತನೆ: ಈಶ್ವರಪ್ಪ

author img

By

Published : Mar 9, 2022, 7:43 AM IST

ಒಬಿಸಿಗೆ ಅನ್ಯಾಯ ಮಾಡಿ ನಾವು ಯಾವ ಕಾರಣಕ್ಕೂ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲ್ಲ. ಪ್ರತಿ ತಾ.ಪಂ, ಜಿ.ಪಂನಲ್ಲಿ ಯಾವ ಜನಸಂಖ್ಯೆ ಇದೆಯೋ ಹಾಗೆ ಮೀಸಲಾತಿ ಮಾಡಬೇಕು ಎನ್ನುವ ನಿಯಮ ಪಾಲನೆ ಮಾಡಿಕೊಂಡು ಬರಲಾಗಿದೆ ಎಂದು ಸಚಿವ ಕೆ.ಎಸ್​​ ಈಶ್ವರಪ್ಪ ಹೇಳಿದರು.

Minister KS Eshwarappa
ಸಚಿವ ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಕಾಂತರಾಜ್ ಆಯೋಗದ ಸಾಮಾಜಿಕ ಆರ್ಥಿಕ ಸಮೀಕ್ಷಾ ವರದಿಯನ್ನು ಒಪ್ಪಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಹೋಗಬಹುದಾ?, ಸುಪ್ರೀಂಕೋರ್ಟ್ ಈ ವರದಿಯನ್ನು ಒಪ್ಪಿಕೊಳ್ಳಲಿದೆಯಾ ಎನ್ನುವ ಕುರಿತು ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಕಾಂತರಾಜ್ ಆಯೋಗದ ವರದಿ ದತ್ತಾಂಶ ಪರಿಗಣನೆಗೆ ಚಿಂತನೆ- ಸಚಿವ ಕೆ.ಎಸ್​​ ಈಶ್ವರಪ್ಪ

ವಿಧಾನ ಪರಿಷತ್​​ನಲ್ಲಿ ನಿಯಮ 330ರ ಅಡಿ ನಡೆದ ಚರ್ಚೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್​​ನಲ್ಲಿ ಒಬಿಸಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಪ್ರತಿಪಕ್ಷ ಸದಸ್ಯರ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಒಬಿಸಿಗೆ ಅನ್ಯಾಯ ಮಾಡಿ ನಾವು ಯಾವ ಕಾರಣಕ್ಕೂ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲ್ಲ. ಪ್ರತಿ ತಾ.ಪಂ, ಜಿ.ಪಂನಲ್ಲಿ ಯಾವ ಜನಸಂಖ್ಯೆ ಇದೆಯೋ ಹಾಗೆ ಮೀಸಲಾತಿ ಮಾಡಬೇಕು ಎನ್ನುವ ನಿಯಮ ಪಾಲನೆ ಮಾಡಿಕೊಂಡು ಬರಲಾಗಿದೆ.

ಅದರಂತೆ, ಮಹಾರಾಷ್ಟ್ರದಲ್ಲಿ ಎಸ್​ಸಿ - ಎಸ್​ಟಿ ಮೀಸಲು ಮಾತ್ರ ಬಿಟ್ಟು ಒಬಿಸಿಗೆ ಯಾಕೆ ಮೀಸಲು ಮಾಡಿದಿರಿ ಎಂದು ಆ ಎಲ್ಲ ಸ್ಥಾನಗಳ ಆಯ್ಕೆಯನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಹಾಗಾಗಿ ಈ ವಿಚಾರದಲ್ಲಿ ನಾವು ಆತುರ ಮಾಡುವುದಿಲ್ಲ. ಒಬಿಸಿ ಮೀಸಲಾತಿ ಇರಿಸಿಕೊಂಡು ಚುನಾವಣೆ ಮಾಡಬೇಕು. ಈ ಕುರಿತು ತಜ್ಞರ ಜತೆ ಸಭೆ ನಡೆಸಲಿದ್ದೇವೆ. ಕಾಂತರಾಜ್ ಆಯೋಗದ ವರದಿ ಕುರಿತು ಸುಪ್ರೀಂಕೋರ್ಟ್ ಒಪ್ಪುತ್ತಾ ಎನ್ನುವುದು ಗೊತ್ತಿಲ್ಲ. ಆದರೆ, ಮುಂದೇನು ಮಾಡಬೇಕು ಎಂದು ಇನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದರು.

ಈ ವೇಳೆ, ಮಧ್ಯಪ್ರವೇಶ ಮಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಕಾಂತರಾಜ್ ಆಯೋಗ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷಾ ವರದಿ ಕೊಟ್ಟಿದೆ. 165 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದೆ. ಈ ಸಮೀಕ್ಷೆಯ ಅಂಕಿ - ಅಂಶ ಇರಿಸಿಕೊಂಡು ಚುನಾವಣೆಗೆ ಹೋಗಬಹುದಲ್ಲ ಎಂದು ಸಲಹೆ ನೀಡಿದರು.

ಹರಿಪ್ರಸಾದ್ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಈಶ್ವರಪ್ಪ, ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತೇವೆ. ಸಾಧ್ಯ ಇದೆ. ಸುಪ್ರೀಂಕೋರ್ಟ್ ಕಾಂತರಾಜ್ ಆಯೋಗದ ವರದಿಯ ಅಂಕಿ- ಅಂಶ ಪುರಸ್ಕರಿಸುತ್ತದೆ ಎಂದಾದಲ್ಲಿ ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಇದನ್ನೂ ಓದಿ: ಗ್ರಾ.ಪಂಚಾಯತ್ ಸದಸ್ಯರಿಗೆ ಗೌರವಧನ ಹೆಚ್ಚಳವಿಲ್ಲವೆಂಬ ಉತ್ತರ ವಾಪಸ್‌ ಪಡೆದ ಈಶ್ವರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.