ETV Bharat / state

ಏಪ್ರಿಲ್‌ 1ರಿಂದ ನರೇಗಾ ಕೂಲಿಯಲ್ಲಿ ₹20 ಹೆಚ್ಚಳ: ಕೇಂದ್ರಕ್ಕೆ ಈಶ್ವರಪ್ಪ ಅಭಿನಂದನೆ

author img

By

Published : Mar 31, 2022, 7:57 PM IST

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಪ್ರಸ್ತುತ ದಿನವೊಂದಕ್ಕೆ 289 ರೂ. ಕೂಲಿ ರೂಪದಲ್ಲಿ ನೀಡಲಾಗುತ್ತಿತ್ತು. ಏಪ್ರಿಲ್ 1 ರಿಂದ 20 ರೂಪಾಯಿ ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರಕ್ಕೆ ಈಶ್ವರಪ್ಪ ಅಭಿನಂದನೆ
ಕೇಂದ್ರ ಸರ್ಕಾರಕ್ಕೆ ಈಶ್ವರಪ್ಪ ಅಭಿನಂದನೆ

ಬೆಂಗಳೂರು: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನೀಡುವ ಕೂಲಿ ಹಣವನ್ನು ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ 309 ರೂ.ಗೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು.


ಪ್ರಸ್ತುತ ದಿನವೊಂದಕ್ಕೆ 289 ರೂ. ಕೂಲಿ ರೂಪದಲ್ಲಿ ಹಣ ನೀಡಲಾಗುತ್ತಿದೆ. ಏಪ್ರಿಲ್ 1ರಿಂದ ಈ ಕೂಲಿ ಹಣವನ್ನು 309 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ ಸಿಂಗ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಈಶ್ವರಪ್ಪ ಹೇಳಿದರು.

16.28 ಕೋಟಿ ಮಾನವ ದಿನ ಸೃಜನೆ: ಯೋಜನೆಯಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 2022-23 ನೇ ಸಾಲಿನಲ್ಲಿ 13 ಕೋಟಿ ಮಾನವ ದಿನಗಳ ಉದ್ಯೋಗ ಸೃಜನೆಯ ಗುರಿ ನಿಗದಿಪಡಿಸಿತ್ತು. ಇದರಿಂದ ರಾಜ್ಯಕ್ಕೆ ನರೇಗಾ ಯೋಜನೆಯಡಿ 7,096 ಕೋಟಿ ಅನುದಾನ ಲಭ್ಯವಾಗಲಿದೆ. ರಾಜ್ಯ ಸರ್ಕಾರ ಕೇಂದ್ರದ ಗುರಿಯನ್ನು ಮೀರಿ 16.28 ಕೋಟಿ ಮಾನವ ದಿನಗಳ ಸೃಜನೆ ಮಾಡುವ ಮೂಲಕ ಸಾಧನೆ ಮಾಡಿದೆ.

ನರೇಗಾ ಯೋಜನೆಯಡಿ 2021-22ನೇ ಸಾಲಿನಲ್ಲಿ 33.86 ಲಕ್ಷ ಕುಟುಂಬಗಳ 63.81 ಲಕ್ಷ ಜನರಿಗೆ ಕೆಲಸ ನೀಡಲಾಗಿದೆ. ಕೆಲಸ ಮಾಡಿದ ಕೂಲಿಕಾರರಿಗೆ 15 ದಿನಗಳಲ್ಲೇ ಕೂಲಿ ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗಿದೆ. 2021-22 ನೇ ಸಾಲಿನಲ್ಲಿ 4,607.64 ಕೋಟಿ ರೂ.ಗಳನ್ನು ಜಮಾ ಮಾಡಿರುವುದಾಗಿ ಸಚಿವರು ತಿಳಿಸಿದರು.

ಮಾನನಷ್ಟ ಮೊಕದ್ದಮೆ: ಸಂತೋಷ್ ಪಾಟೀಲ್ ಎಂಬುವವರು ದೆಹಲಿಗೆ ತೆರಳಿ ನನ್ನ ವಿರುದ್ಧ ದೂರು ನೀಡಿ, ನಮ್ಮ ಕಡೆಯವರು ಯಾರೋ ಕಮಿಷನ್ ಕೇಳಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸಚಿವ ಗಿರಿರಾಜ ಸಿಂಗ್ ಕಚೇರಿಯಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್ ಅವರಿಗೆ ಪತ್ರ ಬರೆದು ವಿವರ ಕೇಳಿದ್ದರು. ಅತೀಕ್ ಅವರು ಸ್ಪಷ್ಟೀಕರಣ ಕಳುಹಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ಪಂಚಾಯತ್ ರಾಜ್ ಇಲಾಖೆಯಿಂದ ಸಂತೋಷ್ ಪಾಟೀಲ್ ಎಂಬ ವ್ಯಕ್ತಿಗೆ ಯಾವುದೇ ಗುತ್ತಿಗೆಯ ಕಾರ್ಯಾದೇಶ ನೀಡಿಲ್ಲ. ತಮ್ಮ ವಿರುದ್ಧ ದೂರು ನೀಡಿರುವ ಸಂತೋಷ್ ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನ್ಯಾಯಾಲಯ ಅವರಿಗೆ ನೋಟಿಸ್ ನೀಡಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.