ETV Bharat / state

ಬೆಂಗಳೂರಿನಲ್ಲಿ ಪ್ರತಿನಿತ್ಯ 1,500 ಕೋವಿಡ್ ಟೆಸ್ಟ್ ನಡೆಸಲು ಸೂಚನೆ: ಸಚಿವ ದಿನೇಶ್ ಗುಂಡೂರಾವ್

author img

By ETV Bharat Karnataka Team

Published : Dec 20, 2023, 10:40 PM IST

ಕೋವಿಡ್ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್ ಸಭೆ ನಡೆಸಿದರು.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ವಿಶೇಷ ಗಮನ ಹರಿಸಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದ್ದಾರೆ. ಆರೋಗ್ಯಸೌಧದಲ್ಲಿ ಇಂದು ಸಂಜೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು, ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್​ಗಳ ಜೊತೆಗೆ ಐಸಿಯು ಬೆಡ್​ಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಈಗಿನಿಂದಲೇ ಈ ಬಗ್ಗೆ ಚರ್ಚಿಸಿ, ವ್ಯವಸ್ಥಿತವಾಗಿ ಯಾರಿಗೂ ತೊಂದರೆಗಳಾಗದಂತೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಹೆಚ್ಚು ಜನಜಂಗುಳಿ ಇರುವ ಭಾಗದಲ್ಲಿ ಮಾಸ್ಕ್ ಧರಿಸಿ ಎಂಬ ಸಲಹೆಯನ್ನು ಅಧಿಕೃತವಾಗಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸುವಂತೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರಿಗೆ ಸೂಚನೆ ನೀಡಿದರು.‌ ಜೀನೋಮೋ ಸೀಕ್ವೆನ್ಸಿಂಗ್ ಅನ್ನ ನಡೆಸಲು ರಾಜ್ಯ ಸರ್ಕಾರವೇ ನಿರ್ಧರಿಸಿದೆ. ಈ ಬಗ್ಗೆ ಕೇಂದ್ರದ ಮಾರ್ಗಸೂಚಿ ಇಲ್ಲದಿದ್ದರೂ, ಜೀನೋಮೋ ಸೀಕ್ವೆನ್ಸಿಂಗ್ ಅಗತ್ಯ. ಇದರಿಂದ ಕೊರೊನಾ ರೂಪಾಂತರಿ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ. ಸಿಕ್ವೆನ್ಸಿಂಗ್ ನಡೆಸಲು 50 ಸ್ಯಾಂಪಲ್ಸ್ ಬೇಕಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗ್ತಿದೆ ಎಂದು ತಿಳಿಸಿದರು.‌

ಹೊಸ ವರ್ಷಾಚರಣೆಗೆ ಸದ್ಯಕ್ಕೆ ನಿರ್ಬಂಧ ಇಲ್ಲ: ನ್ಯೂ ಇಯರ್ ಸೆಲಬ್ರೆಷನ್ ಸಂದರ್ಭದಲ್ಲಿ ನಿರ್ಬಂಧ ಹಾಕುವ ಬಗ್ಗೆ ಸದ್ಯಕ್ಕೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವಿಲ್ಲ.‌ ಶನಿವಾರದ ವೇಳೆಗೆ ಒಂದಿಷ್ಟು ಟೆಸ್ಟ್ ಮಾಡಿದಾಗ ಕೇಸ್​ಗಳು ಹೆಚ್ಚಾಗಬಹುದು. ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ನಾಳೆ ತಾಂತ್ರಿಕ ಸಲಹಾ ಸಮಿತಿಯವರೊಂದಿಗೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ತಾಂತ್ರಿಕ ಸಲಹಾ ಸಮಿತಿಯವರ ಅಭಿಪ್ರಾಯವನ್ನು ಕೇಳಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಸ್ಪಷ್ಟಪಡಿಸಿದರು.‌

ಕೇರಳ ಗಡಿ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಟೆಸ್ಟ್​ಗಳನ್ನ ಮಾಡಲು ಸೂಚಿಸಲಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸಿಕೊಂಡು ದಿನನಿತ್ಯದ ವ್ಯವಹಾರಗಳನ್ನ ನಡೆಸುವಂತೆ ಸಲಹೆ ನೀಡಿದರು. ಸಾರಿ ಮತ್ತು ಐಎಲ್​ಐ ಪ್ರಕರಣಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದ್ದು, ಖಾಸಗಿ ಆಸ್ಪತ್ರೆಯವರು ಕಡ್ಡಾಯವಾಗಿ ಮಾರ್ಗಸೂಚಿ ಪಾಲಿಸಬೇಕು ಎಂದು ಹೇಳಿದರು.

ಕೇರಳದಲ್ಲಿ ಪ್ರತಿನಿತ್ಯ ಸರಾಸರಿ ಶೇ 20ರಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗ್ತಿವೆ. ರಾಜ್ಯದಲ್ಲಿ ಈ ಪ್ರಮಾಣ ಶೇ 2.44ರಷ್ಟಿದೆ. ಪಾಸಿಟಿವಿಟಿ ದರ ರಾಜ್ಯದಲ್ಲಿ ಕಡಿಮೆಯಿದೆ. ಹೆಚ್ಚಿನ ಕೋವಿಡ್ ಟೆಸ್ಟ್​ಗಳನ್ನ ನಡೆಸಿದಾಗ ನಮಗೆ ಹೆಚ್ಚು ಮಾಹಿತಿ ಸಿಗಲಿದೆ ಎಂದರು.

ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ- ತುಷಾರ್ ಗಿರಿನಾಥ್ : ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್​ ಪ್ರಕರಣ ಹೆಚ್ಚಳವಾಗಿಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪ್ರತ್ಯೇಕ ಗೈಡ್​ಲೈನ್ಸ್​ ಇರುವುದಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್​ ಪ್ರಕರಣ ಹೆಚ್ಚಳವಾಗಿಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಕೇಸ್​ಗಳ ಮೇಲೆ ಬಿಬಿಎಂಪಿ ನಿಗಾವಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿಯ ಪ್ರೈಮರಿ ಹೆಲ್ತ್ ಸೆಂಟರ್, ನಮ್ಮ ಕ್ಲಿನಿಕ್ ಕೋವಿಡ್ ಸಿದ್ಧತೆಗಳ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಕೇಳಿದ್ದೆವು. ಈಗ ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಕೋವಿಡ್ ಸಂಬಂಧ ಆರೋಗ್ಯಾಧಿಕಾರಿಗಳ ಸಭೆ ಕೂಡ ನಡೆಸಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕು ತಗುಲಿದ್ದ ವೃದ್ಧ ಸಾವು: ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ ಕೊಟ್ಟ ಆರೋಗ್ಯ ಸಚಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.