ETV Bharat / state

ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ, ರಾಹುಲ್ ಅಮಾಯಕರಲ್ಲ: ಸಿ.ಟಿ ರವಿ

author img

By

Published : Jul 17, 2022, 7:08 PM IST

National Herald case.. ಸೋನಿಯಾ ಮತ್ತು ರಾಹುಲ್ ಗಾಂಧಿ ತಲಾ ಶೇ.38 ಷೇರನ್ನು ತಮ್ಮ ಹೆಸರಿಗೆ ವರ್ಗಾಯಿಸಿದ್ದಾರೆ- ಅವರು ಅಮಾಯಕರಲ್ಲ- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ

minister-ct-ravi-statement-against-sonia-gandhi-and-rahul-gandhi
ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ, ರಾಹುಲ್ ಅಮಾಯಕರಲ್ಲ: ಸಿ.ಟಿ ರವಿ ವಾಗ್ದಾಳಿ

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಮಾಯಕರಲ್ಲ. ಅವರು ಅಮಾಯಕರಾಗಿದ್ದರೆ ತಲಾ ಶೇ.38 ಷೇರನ್ನು ತಮ್ಮ ಹೆಸರಿಗೆ ವರ್ಗಾಯಿಸುತ್ತಿರಲಿಲ್ಲ. ಈ ಕಾರ್ಯಕರ್ತರನ್ನು ಸೇರಿಸಿ ಪ್ರತಿಭಟನೆ ಮಾಡಿಸುವ ಮೂಲಕ ಈ ಕೇಸ್​ನ್ನು ಮುಚ್ಚಿಹಾಕಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸೋನಿಯಾ ಗಾಂಧಿಯವರಿಗೆ ಇ.ಡಿ. ನೋಟಿಸ್ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ರಾಷ್ಟ್ರವ್ಯಾಪಿ ಹೋರಾಟ ಹಮ್ಮಿಕೊಂಡಿರುವುದರ ಕುರಿತು ಪ್ರತಿಕ್ರಿಯಿಸಿದರು. ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಸಂಬಂಧಿಸಿದಂತೆ ಆಗಿರುವ ಅವ್ಯವಹಾರಕ್ಕೆ ಇ.ಡಿ. ನೋಟಿಸ್ ನೀಡಿದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ನಡೆದುಕೊಂಡ ಕಾರಣ ನೋಟಿಸ್ ಕೊಟ್ಟಿದೆ. ಅವರು ಪ್ರಾಮಾಣಿಕರಿದ್ದರೆ ಇ.ಡಿ.ಗೆ ಯಾಕೆ ಹೆದರಬೇಕು? ಭ್ರಷ್ಟಾಚಾರ ಮಾಡಿದ್ದರೆ ಅವರನ್ನು ಹಾಗೇ ಬಿಡಬೇಕೆಂದು ಕಾಂಗ್ರೆಸ್‍ನವರು ಬಯಸುತ್ತಾರೆಯೇ? ಎಂದು ಪ್ರಶ್ನಿಸಿದರು.

ಸಂವಿಧಾನದಲ್ಲೇ ಕಾಂಗ್ರೆಸ್ ವಿರುದ್ಧ ತನಿಖೆ ಬೇಡ ಎಂದು ಸೇರಿಸಬೇಕಿತ್ತು: ಸಂವಿಧಾನ ರಚನೆ ಸಂದರ್ಭದಲ್ಲಿ ಅವತ್ತು ಕಾಂಗ್ರೆಸ್ಸಿಗರಿಗೆ ಪ್ರಭಾವ ಇತ್ತು. ಆಗ, ಕಾಂಗ್ರೆಸ್‍ನವರು ಭ್ರಷ್ಟಾಚಾರ ಮಾಡಿದರೆ ಪ್ರಶ್ನಿಸುವಂತಿಲ್ಲ ಎಂಬ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಬಹುದಿತ್ತು. ಇಷ್ಟಾಗಿಯೂ ತನಿಖೆ ನಡೆಸಿದ್ದರೆ ಅದು ಸಂವಿಧಾನ ವಿರೋಧಿ ಆಗುತ್ತಿತ್ತು. ಈಗ ತನಿಖೆ ನಡೆಸುವುದು ಸಂವಿಧಾನಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.

ಸೋನಿಯಾ ಗಾಂಧಿ ಮತ್ತಿತರರು ಜೈಲಿಗೆ ಹೋಗಲಿದ್ದಾರೆಯೇ ಎಂಬುದನ್ನು ತನಿಖಾ ಸಂಸ್ಥೆಗಳು ನಿರ್ಧರಿಸಬೇಕು. ನ್ಯಾಯಾಲಯ ಈ ಕುರಿತು ತಿಳಿಸಬೇಕು. ಜೈಲಿಗೆ ಕಳುಹಿಸುವ ಅಧಿಕಾರ ನನಗಿಲ್ಲ. ಈ ವಿಚಾರದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಮಾಯಕರಲ್ಲ. ಅಮಾಯಕರಾಗಿದ್ದರೆ ಅವರು ತಲಾ 38 ಶೇಕಡಾ ಷೇರನ್ನು ತಮ್ಮ ಹೆಸರಿಗೆ ವರ್ಗಾಯಿಸುತ್ತಿರಲಿಲ್ಲ ಎಂದು ಸಿ ಟಿ ರವಿ ಹೇಳಿದರು.‌

ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುಹಾಕಿದ ಸಂಸ್ಥೆ ನ್ಯಾಷನಲ್ ಹೆರಾಲ್ಡ್. ಅದನ್ನು ಖಾಸಗಿ ಆಸ್ತಿ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಒಂದು ಸಾರ್ವಜನಿಕ ಆಸ್ತಿಯನ್ನು ಖಾಸಗಿ ಆಸ್ತಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು ಅಪರಾಧವಲ್ಲವೇ? ಇದನ್ನು ಹೀಗೇ ಬಿಟ್ಟರೆ ಯಾರು ಭ್ರಷ್ಟಾಚಾರ ಮಾಡಿದರೂ ಪ್ರಶ್ನಿಸುವಂತಿಲ್ಲ ಎಂದಾಗುತ್ತದೆ ಎಂದರು.

ನಾಳೆ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ : ರಾಷ್ಟ್ರಪತಿ ಆಯ್ಕೆಗೆ ನಾಳೆ ಚುನಾವಣೆ ನಡೆಯಲಿದೆ. ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಮತದಾನ ಮಾಡಲಿದ್ದಾರೆ. ಕಳೆದ ಬಾರಿ ಇದೇ ಚುನಾಯಿತ ಪ್ರತಿನಿಧಿಗಳ 17 ಮತಗಳು ಅಸಿಂಧುವಾಗಿದ್ದವು. ಈ ಬಾರಿ ಆ ರೀತಿ ಆಗಬಾರದೆಂದು ಬಿಜೆಪಿ ಇಡೀ ದೇಶದಲ್ಲಿ ಅಣಕು ಮತದಾನವನ್ನು ಏರ್ಪಡಿಸಿ ತರಬೇತಿ ನೀಡುತ್ತಿದೆ. ಶೂನ್ಯ ಅಸಿಂಧು ಮತ ಇದ್ದರೆ ಅದು ಭಾರತದ ಪ್ರಜಾಪ್ರಭುತ್ವ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಗೌರವ ತಂದು ಕೊಡಲಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಆದಿವಾಸಿ ಸಮುದಾಯದ ಮಹಿಳೆಯನ್ನು ಆಯ್ಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದಿದೆ. ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಆದಿವಾಸಿ ಮಹಿಳೆಗೆ ಪ್ರಾತಿನಿಧ್ಯ ನೀಡಿದ್ದು, ಇನ್ನೊಂದೆಡೆ ಜಾಟ್ ಸಮಾಜದ ಜಗದೀಪ್ ಅವರನ್ನು ಆಯ್ಕೆ ಮಾಡುವ ಮೂಲಕ ಇಡೀ ರೈತ ಸಮುದಾಯಕ್ಕೆ ಗೌರವ ಕೊಟ್ಟಿದೆ ಎಂದು ಸಿ ಟಿ ರವಿ ಹೇಳಿದ್ದಾರೆ.

ಓದಿ : ಉಪರಾಷ್ಟ್ರಪತಿ ಸ್ಥಾನಕ್ಕೆ ವಿಪಕ್ಷದ ಅಭ್ಯರ್ಥಿಯಾಗಿ ಕನ್ನಡತಿ ಮಾರ್ಗರೇಟ್ ಆಳ್ವಾ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.