ETV Bharat / state

ಸಮರ್ಥ ಭಾರತ ನಿರ್ಮಾಣವೇ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿ: ಸಚಿವ ಅಶ್ವತ್ಥ್​ ನಾರಾಯಣ

author img

By

Published : Jan 12, 2022, 3:33 PM IST

ಜಾಗತೀಕರಣ ಮತ್ತು ಖಾಸಗೀಕರಣಗಳ ಈ ಯುಗದಲ್ಲಿ ಯುವಜನರು ಪ್ರಸ್ತುತವಾಗಿ ಉಳಿಯಬೇಕೆಂದರೆ ಶೈಕ್ಷಣಿಕ ಸಾಧನೆ ಅನಿವಾರ್ಯವಾಗಿದೆ. ಇದು ಸಾಧ್ಯವಾಗಬೇಕೆಂದರೆ ವಿವೇಕಾನಂದರಂತೆ ಸ್ವದೇಶಿ, ಸದೃಢ ಮತ್ತು ಸ್ವಾವಲಂಬಿ ಭಾರತದ ಕನಸು ಕಾಣಬೇಕು ಎಂದು ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು.

Minister-ashwath-narayan
ಸಚಿವ ಅಶ್ವತ್ಥ್​ ನಾರಾಯಣ

ಬೆಂಗಳೂರು: ವಿವೇಕಾನಂದರು ಆಸೆಪಟ್ಟಿದ್ದಂತಹ ಸಶಕ್ತ ಭಾರತವನ್ನು ಕಟ್ಟುವ ಮಹೋದ್ದೇಶದಿಂದಲೇ 34 ವರ್ಷಗಳ ನಂತರ ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(ಎನ್‌ಇಪಿ) ಜಾರಿಗೆ ತರಲಾಗಿದೆ. ಇದರ ಅನುಷ್ಠಾನದಲ್ಲಿ ರಾಜ್ಯವು ಇಡೀ ದೇಶಕ್ಕೇ ಮೊದಲ ಸ್ಥಾನದಲ್ಲಿದ್ದು, ಯುವಜನರ ಸಬಲೀಕರಣವನ್ನು ಸಮರೋಪಾದಿಯಲ್ಲಿ ಮಾಡುತ್ತಿದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದರು.


'ಸಮರ್ಥ ಭಾರತ’ ಸಂಘಟನೆಯು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 159ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ವಿವೇಕಾನಂದರು ಇಡೀ ಪ್ರಪಂಚಕ್ಕೆ ಭಾರತ ಮತ್ತು ಭಾರತೀಯತೆಯನ್ನು ಪರಿಚಯಿಸಿದರು. ಅವರಿಂದ ಪ್ರಭಾವಿತರಾಗಿರುವ ಪ್ರಧಾನಿ ಮೋದಿ ಈಗ ಎನ್ಇಪಿ ಮೂಲಕ ಆತ್ಮನಿರ್ಭರವನ್ನು ಕಟ್ಟಲು ದಾಪುಗಾಲಿಡುತ್ತಿದ್ದಾರೆ ಎಂದರು.

ಈ ಆಶಯಗಳಿಗೆ ತಕ್ಕಂತೆ ರಾಜ್ಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಈಗಾಗಲೇ ಉನ್ನತ ಶಿಕ್ಷಣದಲ್ಲಿ ಬಹುತೇಕ ಈ ಕಾರ್ಯ ಪೂರ್ಣಗೊಂಡಿದ್ದು, ಇನ್ನು ಒಂದು ವರ್ಷದಲ್ಲಿ ಶೇ.100ರಷ್ಟು ಡಿಜಿಟಲೀಕರಣ ಆಗಲಿದೆ. ಈ ಮೂಲಕ ಸಮಾಜದ ಸಬಲೀಕರಣ ಮತ್ತು ಸಮಾನತೆ ಎರಡನ್ನೂ ಸಾಧಿಸಲಿದ್ದೇವೆ ಎಂದು ಅವರು ಪ್ರತಿಪಾದಿಸಿದರು.

ವಿವೇಕಾನಂದರು ವಿಶ್ವ ಭ್ರಾತೃತ್ವವನ್ನು ಸಾರಿದ ಸಂತರಾಗಿದ್ದರು. ಈಗ ಎನ್ಇಪಿ ಮೂಲಕ ಯುವಜನರನ್ನು ಸಮಾಜಮುಖಿಗಳನ್ನಾಗಿ ಮಾಡಲಾಗುತ್ತಿದೆ. ಇದಕ್ಕೆ ತಕ್ಕಂತೆ ಯುವಜನರಿಗೆ ಅಗತ್ಯ ಕೌಶಲ್ಯಗಳನ್ನು ಕಲಿಸಲು ಸರ್ಕಾರಿ ಐಟಿಐಗಳ ಸಮಗ್ರ ಸುಧಾರಣೆ, ಪದವಿ ಶಿಕ್ಷಣದಲ್ಲಿ ಗುಣಮಟ್ಟದ ಬೋಧನೆ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉದ್ಯಮರಂಗದ ಸಹಭಾಗಿತ್ವ ಮುಂತಾದ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದು ನುಡಿದರು.

ಜಾಗತೀಕರಣ ಮತ್ತು ಖಾಸಗೀಕರಣಗಳ ಈ ಯುಗದಲ್ಲಿ ಯುವಜನರು ಪ್ರಸ್ತುತವಾಗಿ ಉಳಿಯಬೇಕೆಂದರೆ ಶೈಕ್ಷಣಿಕ ಸಾಧನೆ ಅನಿವಾರ್ಯವಾಗಿದೆ. ಇದು ಸಾಧ್ಯವಾಗಬೇಕೆಂದರೆ ವಿವೇಕಾನಂದರಂತೆ ಸ್ವದೇಶಿ, ಸದೃಢ ಮತ್ತು ಸ್ವಾವಲಂಬಿ ಭಾರತದ ಕನಸನ್ನು ಕಾಣಬೇಕು ಎಂದು ಸಚಿವರು ಹೇಳಿದರು.

ಸಮಾರಂಭದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಶ್ರೀಧರ್, ಚಿಂತಕ ಡಾ. ಜಯಪ್ರಕಾಶ್, ಪ್ರೊ. ನರಸಿಂಹಮೂರ್ತಿ, ರಾಜೇಶ್ ಪದ್ಮಾರ್ ಸೇರಿದಂತೆ ಹಲವು ಗಣ್ಯರು ಇದ್ದರು.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಪ್ರತಿಪಕ್ಷ, ಸರ್ಕಾರಕ್ಕೆ ಹೈಕೋರ್ಟ್ ತರಾಟೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.